ಮುಂಬೈ: ನರ್ಸ್ ಒಬ್ಬರು ತಪ್ಪಾದ ಚುಚ್ಚು ಮದ್ದನ್ನು ನೀಡಿದ್ದರಿಂದ ರೋಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ನರ್ಸ್ ಅನ್ನು ಬಂಧಿಸಿದ್ದಾರೆ. ಘಟನೆ ಮುಂಬೈಯ ಶಿವಾಜಿನಗರದಲ್ಲಿರುವ ಮನ್ನತ್ ಆಸ್ಪತ್ರೆಯಲ್ಲಿ ನಡೆಸಿದೆ.
ಮೃತ ರೋಗಿ ಶಬಾನಾ ಅನ್ಸಾರಿ ಎಂದು ಗುರುತಿಸಲಾಗಿದೆ. ಶಬಾನಾ ಕೆಲವು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದು, ಮನ್ನತ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ನರ್ಸ್ ಆಕೆಗೆ ಚುಚ್ಚು ಮದ್ದು ಹಾಗೂ ಕೆಲವು ಔಷಧಿಯನ್ನು ನೀಡಿದ್ದರು. ಎರಡು ದಿನಗಳ ಬಳಿಕ ಶಬಾನಾಗೆ ಚುಚ್ಚು ಮದ್ದು ನೀಡಿದ ಸ್ಥಳದಲ್ಲಿ ಊತ ಕಂಡುಬಂದಿತ್ತು. ಇದನ್ನೂ ಓದಿ: ವಯಸ್ಕರಿಗಿಂತ 2 ರಿಂದ 18 ವರ್ಷದ ಮಕ್ಕಳಲ್ಲಿ ಕೋವ್ಯಾಕ್ಸಿನ್ ಹೆಚ್ಚು ಪರಿಣಾಮಕಾರಿ: ಭಾರತ್ ಬಯೋಟೆಕ್
ಕುಟುಂಬಸ್ಥರು ಶಬಾನಾರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿ, ಶಸ್ತ್ರ ಚಿಕಿತ್ಸೆ ಮಾಡಿ ಡಿಸ್ಚಾರ್ಜ್ ಮಾಡಿಸಿದ್ದರು. ಆಕೆಯ ಆರೋಗ್ಯ ಮತ್ತೆ ಹದಗೆಟ್ಟಿದ್ದು, ಕೆಇಎಮ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ನಂತರ ಮೃತ ಶಬಾನಾರ ಕುಟುಂಬದವರು ಶಿವಾಜಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆಕೆಯ ವೈದ್ಯಕೀಯ ವರದಿಗಳನ್ನು ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: 700ರ ಗಡಿದಾಟಿದ ಕೊರೊನಾ – ಓಮಿಕ್ರಾನ್ 43ಕ್ಕೆ ಏರಿಕೆ
ಈ ಸಂದರ್ಭದಲ್ಲಿ ಚುಚ್ಚುಮದ್ದು ನೀಡಿದ್ದ ನರ್ಸ್ ಅನ್ನು ಬಂಧಿಸಿದ್ದು, ಆಸ್ಪತ್ರೆಯ ಮಾಲೀಕ ರೆಹಾನ್ ಖಾನ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಪರಿಶೀಲಿಸಲು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.