ಪ್ರಸ್ತುತ ದೇಶದಲ್ಲಿ ‘ಒಂದು ದೇಶ, ಒಂದು ಚುನಾವಣೆ’ ಮಸೂದೆ ಬಹು ಚರ್ಚೆಯಲ್ಲಿದೆ. ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಮಸೂದೆ ಇದಾಗಿದೆ. ಈ ಬಿಲ್ ಜಾರಿಗೆ ಪರ-ವಿರೋಧದ ಮಾತು ಜೋರಾಗಿದೆ. ಬಿಜೆಪಿಯ ಪ್ರಮುಖ ಕಾರ್ಯಸೂಚಿಯನ್ನು ಜಾರಿ ತರಲು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದಲ್ಲೇ ಒಮ್ಮತದ ಅಭಿಪ್ರಾಯ ಮೂಡಿಲ್ಲ. ಮಂಗಳವಾರ ಕೇಂದ್ರ ಸರ್ಕಾರ ಈ ಮಸೂದೆಯನ್ನು ಮಂಡಿಸಿತು. ಆದರೆ, ಅಂಗೀಕಾರಕ್ಕೆ ಬೇಕಾದ ಬಹುಮತ ಮಾತ್ರ ಸಿಗಲಿಲ್ಲ. ಇದರಿಂದ ‘ಒನ್ ನೇಷನ್ ಒನ್ ಎಲೆಕ್ಷನ್’ ವಿವಾದಿತ ಬಿಲ್ ಆಗಿ ದೇಶದಲ್ಲಿ ಚರ್ಚೆ ಹುಟ್ಟುಹಾಕಿದೆ.
ಮಸೂದೆ ಮೂಲಕ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಮುಂದಾಗಿದೆ. ಆದರೆ, ಸಂಖ್ಯಾಬಲದ ಕೊರತೆಯಿಂದ ತನ್ನ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಗಿಲ್ಲ. ನಿರೀಕ್ಷೆಯಂತೆ ಲೋಕಸಭೆಯಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಅಸಾದುದ್ದೀನ್ ಓವೈಸಿ ಎಐಎಂಐಎಂ ಸೇರಿದಂತೆ ಸಣ್ಣ ಪಕ್ಷಗಳು ಕೂಡ ಬಿಲ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಬಿಜೆಪಿಯ ಇಬ್ಬರು ಮಿತ್ರಪಕ್ಷಗಳಾದ ಆಂಧ್ರದ ಆಡಳಿತಾರೂಢ ತೆಲುಗು ದೇಶಂ ಪಕ್ಷ ಹಾಗೂ ಮಹಾರಾಷ್ಟçದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಮಾತ್ರ ಮಸೂದೆಗೆ ಬೆಂಬಲ ವ್ಯಕ್ತಪಡಿಸಿವೆ. ಒಟ್ಟಾರೆಯಾಗಿ ‘ಒಂದು ದೇಶ, ಒಂದು ಚುನಾವಣೆ’ ಜಾರಿ ಹಿಂದೆ ನಂಬರ್ ಗೇಮ್ ಶುರುವಾಗಿದೆ.
Advertisement
‘ಒಎನ್‌ಒಪಿ’ ನಂಬರ್ ಗೇಮ್!
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು ಶಿಫಾರಸು ಮಾಡಿರುವ ಸಂವಿಧಾನ ತಿದ್ದುಪಡಿಗಳಿಗೆ ಲೋಕಸಭೆಯಲ್ಲಿ ಅಂಗೀಕಾರ ಸಿಗಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಮಸೂದೆ ಮಂಡಿಸುವಾಗ ಮತ ಚಲಾಯಿಸಿದ ಸಂಸದರ ಸಂಖ್ಯೆಯನ್ನು ಆಧರಿಸಿ ನೋಡಿದರೆ, ಬಿಜೆಪಿಗೆ ಬಹುಮತವಿಲ್ಲ ಎಂದು ತೋರುತ್ತದೆ.
Advertisement
ಮತ ವಿಭಜನೆಗೆ ಹಾಕಿದಾಗ ಏನಾಯ್ತು?
ಡಿ.17 ರಂದು ಲೋಕಸಭೆಯಲ್ಲಿ ವಿಪಕ್ಷಗಳು ಮತ ವಿಭಜನೆಗೆ ಪಟ್ಟು ಹಿಡಿದವು. ಆಗ, ಮಸೂದೆಯನ್ನು ಸದನದಲ್ಲಿ ಮಂಡಿಸಬಹುದೇ ಎಂದು ಪ್ರಶ್ನಿಸಿ ಮತಕ್ಕೆ ಹಾಕಲಾಯಿತು. ಪರವಾಗಿ 269 ಮತಗಳು ಹಾಗೂ ವಿರುದ್ಧವಾಗಿ 198 ಮತಗಳು ಬಿದ್ದವು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರುವ, ‘ಸಂವಿಧಾನ (129ನೇ ತಿದ್ದುಪಡಿ) ಮಸೂದೆ-2024’ ಅಂಗೀಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕು. ಆದರೆ, ಮಸೂದೆ ಮಂಡನೆ ಪರವಾಗಿ ಬಿದ್ದ ಮತಗಳ ಮತಗಳ ಪ್ರಮಾಣ ಮೂರನೇ ಎರಡರಷ್ಟು ಬಹುಮತಕ್ಕಿಂತ ಕಡಿಮೆ ಇದೆ.
Advertisement
ನಂಬರ್ ಲೆಕ್ಕಾಚಾರ ಹೇಗಿದೆ?
ಎನ್‌ಡಿಎ ಮೈತ್ರಿಕೂಟ – 293, ಇಂಡಿಯಾ ಮೈತ್ರಿಕೂಟ – 236, ಅಕಾಲಿದಳ 1, ಎಎಸ್‌ಪಿ (ಕಾನ್ಶಿರಾಮ್) 1, ಎಐಎಂಐಎಂ 1, ವೈಎಸ್‌ಆರ್ ಕಾಂಗ್ರೆಸ್ 4, ವಿಒಟಿಟಿಪಿ 1, ಝಡ್‌ಪಿಎಂ 1, ಪಕ್ಷೇತರ 4 ಲೋಕಸಭಾ ಸದಸ್ಯರಿದ್ದಾರೆ.
Advertisement
ಮೂರನೇ ಎರಡರಷ್ಟು ಬೆಂಬಲಕ್ಕ ಎಷ್ಟು ನಂಬರ್ ಬೇಕು?
543 ಸದಸ್ಯ ಬಲದ ಲೋಕಸಭೆಯಲ್ಲಿ ಒಂದು ಸ್ಥಾನ ಖಾಲಿಯಿದೆ. ಸದನವು ಪೂರ್ಣ ಬಲದಲ್ಲಿದ್ದಾಗ ಮೂರನೇ ಎರಡರಷ್ಟು ಬಹುಮತಕ್ಕೆ 362 ಮತಗಳ ಅಗತ್ಯವಿದೆ. ಮತ ವಿಭಜನೆ ಆಧಾರದಲ್ಲಿ ಮಸೂದೆ ಮಂಡನೆಗೆ ಕೇಳಿದ ಸಂದರ್ಭದಲ್ಲಿ ಸಂಸತ್‌ನಲ್ಲಿ 461 ಸಂಸದರಿದ್ದರು. ಆ ಸಂದರ್ಭದಲ್ಲಿ ಮಸೂದೆ ಪರವಾಗಿ 307 ಮತಗಳ (ಮೂರನೇ ಎರಡರಷ್ಟು ಬಹುಮತಕ್ಕೆ) ಅಗತ್ಯವಿತ್ತು. ಆದರೆ, ಬಿಜೆಪಿಯ ಮಸೂದೆ ಪರವಾಗಿ ಬಿದ್ದಿದ್ದು 269 ಮತಗಳು. ಹೀಗಾಗಿ, ಮಸೂದೆ ಮಂಡನೆಗೂ ಬಿಜೆಪಿಗೆ ಬಹುಮತ ಸಿಗಲಿಲ್ಲ.
9 ಸಂಸದರನ್ನು ಹೊಂದಿರುವ ಆರು ಪಕ್ಷಗಳು ಯಾವುದೇ ಮೈತ್ರಿಕೂಟಕ್ಕೆ ಬೆಂಬಲವನ್ನು ಸೂಚಿಸಿಲ್ಲ. ಇವುಗಳ ಪೈಕಿ ಅಕಾಲಿದಳ, ಎಐಎಂಐಎಂ ಮತ್ತು ಎಎಸ್‌ಪಿ (ಕಾನ್ಶಿರಾಮ್) ಪಕ್ಷಗಳ ಸಂಸದರು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಈ ಹಿಂದೆ ವೈಎಸ್‌ಆರ್ ಕಾಂಗ್ರೆಸ್ ಏಕಕಾಲದಲ್ಲಿ ನಡೆಸುವ ಚುನಾವಣೆಗೆ ಬೆಂಬಲ ಸೂಚಿಸಿತ್ತು. ಆ ಪಕ್ಷದಲ್ಲಿ ನಾಲ್ಕು ಮಂದಿ ಸಂಸದರಿದ್ದಾರೆ. ಇತ್ತ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದರೂ ಟಿಡಿಪಿಯು ಬಿಜೆಪಿ ಜೊತೆ ಅಂತರ ಕಾಯ್ದುಕೊಂಡಿದೆ. ಮಸೂದೆ ವಿಚಾರದಲ್ಲಿ ಈ ಪಕ್ಷ ತನ್ನ ನಿಲುವು ಬದಲಿಸುವ ಸಾಧ್ಯತೆ ಇದೆ. ಎನ್‌ಡಿಎ ಮೈತ್ರಿಕೂಟದ ಸಂಖ್ಯಾಬಲ (292)ದ ಲೆಕ್ಕಾಚಾರದಲ್ಲಿ ನೋಡುವುದಾದರೆ, ಸಂಸತ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಸದಸ್ಯರು ಹಾಜರಾದರೆ ಬಿಜೆಪಿಗೆ ಹೆಚ್ಚುವರಿಯಾಗಿ 64 ಸಂಸದರ ಬೆಂಬಲ ಬೇಕಾಗುತ್ತದೆ.
ಜೆಪಿಸಿ ರಚನೆ
ಒಂದು ದೇಶ, ಒಂದು ಚುನಾವಣೆ ಮಸೂದೆ ಪರಾಮರ್ಶೆಗೆ 39 ಸದಸ್ಯರನ್ನೊಳಗೊಂಡ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದ್ದಾರೆ. ಸಮಿತಿಯಲ್ಲಿ ಲೋಕಸಭೆಯ 27 ಹಾಗೂ ರಾಜ್ಯ ಸಭೆಯ 12 ಸದಸ್ಯರಿದ್ದಾರೆ. ಪ್ರಿಯಾಂಕಾ ಗಾಂಧಿ ಜೊತೆಗೆ ಪ್ರಮುಖರಾದ ಮನೀಶ್ ತೆವಾರಿ, ಧರ್ಮೇಂದ್ರ ಯಾದವ್, ಕಲ್ಯಾಣ್ ಬ್ಯಾನರ್ಜಿ, ಸುಪ್ರಿಯಾ ಸುಳೆ, ಶ್ರೀಕಾಂತ್ ಏಕನಾಥ್ ಶಿಂಧೆ, ಸಂಬಿತ್ ಪತ್ರಾ, ಅನಿಲ್ ಬಲುನಿ, ಅನುರಾಗ್ ಸಿಂಗ್ ಠಾಕೂರ್ ಇದ್ದಾರೆ.
ಏನಿದು ಒಎನ್‌ಒಪಿ ಮಸೂದೆ?
ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದೇ ‘ಒಂದು ದೇಶ, ಒಂದು ಚುನಾವಣೆ’ ಮಸೂದೆ. 2024ರಲ್ಲಿ ಲೋಕಸಭೆಯೊಂದಿಗೆ ನಾಲ್ಕು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಯಿತು. ಏಪ್ರಿಲ್-ಜೂನ್ ವರೆಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಒಡಿಶಾ ರಾಜ್ಯಗಳಿಗೆ ಹಾಗೂ ಅಕ್ಟೋಬರ್-ನವೆಂಬರ್ ವರೆಗೆ ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಿಗೆ ಚುನಾವಣೆ ನಡೆಯಿತು. ಕಳೆದ ವರ್ಷ ಬೇರೆ ಬೇರೆ ತಿಂಗಳಲ್ಲಿ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಚುನಾವಣೆ ನಡೆದಿತ್ತು. 2025 ಕ್ಕೆ ದೆಹಲಿ ಮತ್ತು ಬಿಹಾರ ರಾಜ್ಯಗಳು ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗಿವೆ.
ಮಸೂದೆ ಬಗ್ಗೆ ಬಿಜೆಪಿ ನಿಲುವೇನು?
ಭಾರತ ಪ್ರತಿ ವರ್ಷ ಚುನಾವಣೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಇದರಿಂದ ಭಾರೀ ಹಣ ಖರ್ಚಾಗುತ್ತಿದೆ. ಜೊತೆಗೆ ಪ್ರತಿ ವರ್ಷ ಚುನಾವಣೆಗೆ ನೀತಿ ಸಂಹಿತೆ ಘೋಷಣೆಯಾಗುವುದರಿಂದ ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆಯಾಗಲಿದೆ. ಈ ಕಾರಣಕ್ಕೆ ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆ ಅಗತ್ಯ ಎಂಬುದನ್ನು ಬಿಜೆಪಿ ಒತ್ತಿ ಹೇಳಿದೆ.
ವಿಪಕ್ಷಗಳ ವಿರೋಧ ಯಾಕೆ?
ಈ ಮಸೂದೆಯು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಅಲ್ಲದೇ ಸರ್ವಾಧಿಕಾರಕ್ಕೆ ಅನುವು ಮಾಡಿಕೊಡುತ್ತದೆ. ಪ್ರಸ್ತಾವಿತ ಮಸೂದೆಯು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುತ್ತದೆ. ಹೊಸ ಸರ್ಕಾರಗಳ ಅವಧಿ ಕೂಡ ಇದರಿಂದ ಮೊಟಾಗುತ್ತದೆ ಎಂಬುದು ವಿಪಕ್ಷಗಳ ನಿಲುವು.
ಒಎನ್‌ಒಪಿ ಹೊಸ ಪದ್ಧತಿಯೇ?
ಭಾರತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದೇನು ಹೊಸಪದ್ಧತಿಯಲ್ಲ. ಸ್ವಾತಂತ್ರ್ಯ ಬಂದು ಸಂವಿಧಾನ ಅಂಗೀಕಾರ ಆದ ಬಳಿಕ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲೇ ಚುನಾವಣೆಗಳು ನಡೆದಿದ್ದವು. 1951 ರಿಂದ 1967ರ ಅವಧಿ ವರೆಗೂ ನಾಲ್ಕು ಸಾರ್ವತ್ರಿಕ ಚುನಾವಣೆಗಳು ಏಕಕಾಲದಲ್ಲೇ ನಡೆದಿವೆ. ಆ ಬಳಿಕ ರಾಜ್ಯ ವಿಧಾನಸಭೆಗಳ ವಿಸರ್ಜನೆ, ಲೋಕಸಭೆ ವಿಸರ್ಜನೆ, ತುರ್ತು ಪರಿಸ್ಥಿತಿ ಮೊದಲಾದ ಬೆಳವಣಿಗೆಗಳಿಂದಾಗಿ ಏಕಕಾಲದಲ್ಲಿ ಚುನಾವಣೆಗಳು ನಡೆಯಲು ಸಾಧ್ಯವಾಗಲಿಲ್ಲ. ಈಗ ಮತ್ತೆ ಅದೇ ಪದ್ಧತಿಯನ್ನು ಜಾರಿಗೆ ತರಲು ಬಿಜೆಪಿ ಮುಂದಾಗಿದೆ.