ಚಿತ್ರದುರ್ಗ: ಕೆಲ ಸಂಘ, ಸಂಸ್ಥೆಗಳ ಅಧ್ಯಕ್ಷರು ಹಾಗೂ ಮುಖಂಡರು ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತ ಚಿಹ್ನೆ, ಲಾಂಛನ ಹಾಗೂ ಅವರ ಸಂಘ ಸಂಸ್ಥೆಗಳ ಹೆಸರುಗಳನ್ನು ನಿಯಮಬಾಹಿರವಾಗಿ ಅಳವಡಿಸಿಕೊಂಡಿದ್ದು, ಇಂತಹ ವಾಹನಗಳ ವಿರುದ್ಧ ಆರ್‌ಟಿಓ ಅಧಿಕಾರಿಗಳು ಸಮರ ಸಾರಿದ್ದಾರೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ ವಿಶೇಷ ವಾಹನ ತಪಾಸಣಾ ಅಭಿಯಾನ ಪ್ರಾರಂಭಿಸಲಾಗಿದ್ದು, ಅಂತಹ ಹಲವು ವಾಹನಗಳನ್ನು ಗುರುತಿಸಿ, ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಆರ್‌ಟಿಓ ಅಧಿಕಾರಿಗಳು ಮುಂದಾಗಿದ್ದಾರೆ. ಹಲವು ವರ್ಷಗಳಿಂದಲೂ ಖಾಸಗಿ ವೈಯುಕ್ತಿಕ ವಾಹನಗಳ ಮೇಲೆ ಸಂಘ, ಸಂಸ್ಥೆಗಳ ಹೆಸರು ಹಾಕಿಕೊಂಡು ಓಡಾಡುವವರಿಗೆ ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗಡೆ ಬಿಸಿ ಮುಟ್ಟಿಸಿದ್ದಾರೆ.
Advertisement
Advertisement
ವಾಹನಗಳ ನೊಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ವಿವಿಧ ಆಯೋಗಗಳ ಹೆಸರನ್ನು ಹೋಲುವಂತಹ ರಾಷ್ಟ್ರೀಯ, ರಾಜ್ಯ ಮಾನವ ಹಕ್ಕುಗಳ ಸಂಸ್ಥೆ, ಒಕ್ಕೂಟ ಇತ್ಯಾದಿ ಹೆಸರು, ಚಿಹ್ನೆ, ಲಾಂಛನಗಳನ್ನು ಹಾಗೂ ಇತರೆ ಸಂಘ ಸಂಸ್ಥೆಗಳ ಹೆಸರು ಬರೆಸಿಕೊಂಡಿದ್ದಾರೆ. ಈ ಮೂಲಕ ಕೇಂದ್ರ ಮೋಟಾರು ವಾಹನಗಳ 1989ರ ನಿಯಮ 50 ಮತ್ತು 51ರ ಲಾಂಛನ ಹಾಗೂ ಹೆಸರು ಕಾಯ್ದೆ 1950 ಕಲಂ 3, 4 ಮತ್ತು 5 ರನ್ವಯ ನಿಯಮಬಾಹಿರವಾಗಿದ್ದು, ಅಂತಹ ವಾಹನಗಳನ್ನು ಗುರುತಿಸಿ, ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಸಾರಿಗೆ ಆಯುಕ್ತರು ಸೂಚಿಸಿದ್ದಾರೆ.
Advertisement
ಒನಕೆ ಓಬವ್ವ ವೃತ್ತದ ಬಳಿ, ವಾಹನಗಳ ವಿಶೇಷ ತಪಾಸಣೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗುವುದು. ವಾಹನ ನೋಂದಣಿ ಫಲಕಗಳ ಮೇಲೆ ಹೆಸರು, ಚಿಹ್ನೆಗಳನ್ನು ಹಾಕಿಸುವುದು ಅಪರಾಧವಾಗಿದ್ದು, ಇನ್ನು 7 ದಿನಗಳ ಒಳಗಾಗಿ ತೆರವುಗೊಳಿಸದಿದ್ದರೆ ಅಂತಹ ವಾಹನಗಳ ಮಾಲೀಕರನ್ನು ದಂಡನೆಗೆ ಗುರಿಪಡಿಸಲಾಗುವುದು ಎಂದು ಆರ್‌ಟಿಓ ಅಧಿಕಾರಿಗಳು ಎಚ್ಚರಿಸಿದ್ದಾರೆ.
Advertisement
ಸರ್ಕಾರಿ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಪಡೆಯುವ ಖಾಸಗಿ ವಾಹನಗಳೂ ನೊಂದಣಿ ಫಲಕದ ಮೇಲೆ ಕರ್ನಾಟಕ ಸರ್ಕಾರದ ಲಾಂಛನವುಳ್ಳ ಫಲಕ ಬಳಸುವಂತಿಲ್ಲ. ಅಲ್ಲದೆ ವಿವಿಧ ವಿಮಾ ಕಂಪನಿಗಳು ತಮ್ಮ ವಾಹನಗಳ ಮೇಲೆ ಭಾರತ ಸರ್ಕಾರದ ಲಾಂಛನವನ್ನು ಬಳಸುತ್ತಿರುವುದು ಕಂಡುಬಂದಿದ್ದು, ಅದನ್ನೂ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ನಗರದ ಒನಕೆ ಓಬವ್ವ ವೃತ್ತ ಬಳಿ ಗುರುವಾರ ನಡೆಸಿದ ವಾಹನಗಳ ತಪಾಸಣೆ ಸಂದರ್ಭದಲ್ಲಿ ಇಂತಹ ಹಲವಾರು ವಾಹನಗಳನ್ನು ಪತ್ತೆಮಾಡಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡು ದಿನಗಳ ಒಳಗಾಗಿ ಇಂತಹ ನಾಮಫಲಕಗಳನ್ನು ತೆರವುಗೊಳಿಸಿ, ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಯ ಆವರಣದಲ್ಲಿ ಹಾಜರುಪಡಿಸುವಂತೆ ಎಚ್ಚರಿಸಲಾಗಿದೆ.