ಕೋಲ್ಕತ್ತಾ: ಪಶ್ಚಿಮ ಬಂಗಳಾದ ಕೋಲ್ಕತಾ ಉತ್ತರ ಭಾಗದ ಭಟ್ಪರಾದಲ್ಲಿ ಅಪರಿಚಿತರು ನಡೆಸಿದ ಕಚ್ಚಾ ಬಾಂಬ್ ಹಾಗೂ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.
ಈ ಕುರಿತು ತುರ್ತು ಸಭೆ ನಡೆಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಪೊಲೀಸ್ ಕಮಿಷನರ್ ಹಾಗೂ ಇತರ ಪ್ರಮುಖ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಪರಿಚಿತರು ನಡೆಸಿದ ಕಚ್ಚಾ ಬಾಂಬ್ ಹಾಗೂ ಗುಂಡಿನ ದಾಳಿಯಿಂದ ಹಿಂಸಾಚಾರ ಉಂಟಾಗಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವನನ್ನು 17 ವರ್ಷದ ಪಾನಿಪೂರಿ ಮಾರುವ ಯುವಕನೆಂದು ಗುರುತಿಸಲಾಗಿದೆ. ತೀವ್ರ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ಸಾಗಿಸುವಾಗ ಮತ್ತೋರ್ವ ಯುವಕ ಸಾವನ್ನಪ್ಪಿದ್ದಾನೆ. ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ.
ಕಚ್ಚಾ ಬಾಂಬ್ ಹಾಗೂ ಗುಂಡಿನ ದಾಳಿಯನ್ನು ಎದುರಿಸಲು ಪೊಲೀಸರು ಅಶ್ರುವಾಯು ಹಾಗೂ ಗುಂಡಿನ ದಾಳಿ ನಡೆಸುತ್ತಿದ್ದಾರೆ. ನಾರ್ಥ್ 24 ಪರಗಣ ಜಿಲ್ಲೆಯಲ್ಲಿ ಸ್ಥಳೀಯ ಪೊಲೀಸರಿಗಾಗಿ ಭಟ್ಪರದಲ್ಲಿ ನಿರ್ಮಿಸಲಾಗಿದ್ದ ಪೊಲೀಸ್ ಠಾಣೆಯ ಹೊಸ ಕಟ್ಟಡವನ್ನು ಉದ್ಘಾಟಿಸಲು ಡಿಜಿಪಿ ಬರುವುದಕ್ಕೂ ಒಂದು ಗಂಟೆಯ ಮೊದಲು ಈ ಘರ್ಷಣೆ ಸಂಭವಿಸಿದೆ. ಘಟನೆ ಸಂಭವಿಸುತ್ತಿದ್ದಂತೆ ಡಿಜಿಪಿ ಸೇರಿದಂತೆ ಎಲ್ಲರೂ ಕೋಲ್ಕತ್ತಾಗೆ ಮರಳಿದ್ದು, ಪೊಲೀಸ್ ಠಾಣೆಯ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಲೋಕಸಭಾ ಚುನಾವಣೆಯ ನಂತರ ಭಟ್ಪರಾದಲ್ಲಿ ಇತ್ತೀಚೆಗೆ ಈ ಘರ್ಷಣೆ ನಡೆದಿದ್ದು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಟ್ಪರಾದಲ್ಲಿ ವಿಪರೀತ ಹಿಂಸಾಚಾರದ ಘರ್ಷಣೆಗಳು ನಡೆದಿದ್ದವು. ಕೆಲವು ಸಂಘರ್ಷಗಳು ಕೋಮುವಾದಿ ಸ್ವರೂಪವನ್ನು ಪಡೆದಿದ್ದವು. ಇದೀಗ ಮತ್ತೆ ಬೃಹತ್ ಘರ್ಷಣೆಯೊಂದು ನಡೆದಿದ್ದು, ಇಬ್ಬರನ್ನು ಬಲಿಪಡೆದಿದೆ.
ಪೊಲೀಸ್ ತಂಡ ನಗರಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದು, ಘಟನಾ ಸ್ಥಳದಲ್ಲಿ ರ್ಯಾಪಿಡ್ ಆಕ್ಷನ್ ಫೊರ್ಸ್(ಆರ್‍ಎಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಂಗಡಿ ಮುಂಗಟ್ಟುಗಳು, ಮಾರುಕಟ್ಟೆ ಪ್ರದೇಶ ಸೇರಿದಂತೆ ನಗರದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧವಾಗಿವೆ. ಭಟ್ಪರಾ ಹಾಗೂ ಪಕ್ಕದ ಕಂಕಿನಾರ ನಗರಗಳು ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರಕ್ಕೆ ಗುರಿಯಾಗಿದ್ದವು. ಮೇ 19ರಂದು ನಡೆದ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಸಂದರ್ಭದಿಂದಲೂ ಭಟ್ಪರಾ ಸಾಲು ಸಾಲು ಹಿಂಸಾಚಾರಗಳಿಗೆ ಸಾಕ್ಷಿಯಾಗಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]