ಬೈಕ್ ಅಪಘಾತದಲ್ಲಿ ಕಾಫಿನಾಡಿನ ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸಾವು 

Public TV
1 Min Read
chikkamagaluru black cat commando

ಚಿಕ್ಕಮಗಳೂರು: ಬೈಕ್ ಅಪಘಾತದಲ್ಲಿ (Bike Accident) ಎನ್‌ಎಸ್‌ಜಿಯ (NSG) ಬ್ಲ್ಯಾಕ್ ಕ್ಯಾಟ್ ಕಮಾಂಡೋ (Black Cat Commando) ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಯಡಿಯೂರು ಸಮೀಪದ ಹೇಮಾವತಿ ಕ್ರಾಸ್ ಬಳಿ ನಡೆದಿದೆ.

ಮೃತನನ್ನು 22 ವರ್ಷದ ದೀಪಕ್ ಎಂದು ಗುರುತಿಸಲಾಗಿದೆ. ಮೃತ ದೀಪಕ್ ಮೂಲತಃ ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ತಣಿಗೇಬೈಲು ಸಮೀಪದ ಜೈಪುರ ನಿವಾಸಿ. 2018ರಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್ ಫೋರ್ಸ್ ಸೇರಿದ್ದ ದೀಪಕ್ ಇತ್ತೀಚೆಗೆ ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿ ನೇಮಕವಾಗಿದ್ದರು.

ACCIDENT

2020ರಲ್ಲಿ ಮದುವೆಯಾಗಿದ್ದ ದೀಪಕ್ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಒಂದು ತಿಂಗಳ ಮೇಲೆ ರಜೆಗೆ ಊರಿಗೆ ಬಂದಿದ್ದ ದೀಪಕ್ ಇತ್ತೀಚೆಗೆ ತಾವು ಖರೀದಿಸಿದ್ದ ಹೊಸ ಬೈಕ್‌ನಲ್ಲಿ ರಜೆ ಮುಗಿಸಿ ಕೆಲಸಕ್ಕೆ ತೆರಳಲು ಬೆಂಗಳೂರಿಗೆ ಹೋಗುತ್ತಿದ್ದಾಗ ಯಡಿಯೂರಿನ ಹೇಮಾವತಿ ಕ್ರಾಸ್ ಬಳಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಾಣಿಯಲ್ಲಿ ಹಲ್ಲೆ ಪ್ರಕರಣ- ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದ ಕಟೀಲ್

ಜೈಪುರ ಗ್ರಾಮದ ಕೃಷ್ಣಮೂರ್ತಿಯವರ ಮಗನಾದ ದೀಪಕ್ ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದು, ಓರ್ವ ಸಹೋದರಿ ಇದ್ದಾಳೆ. ದೀಪಕ್ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ದೀಪಕ್ ಸಾವಿಗೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: ಮಂತ್ರಿಗಿರಿ ಲಾಬಿಗೆ ಲೋಕಸಭೆ ದಾಳ – ಶಾಸಕರಿಗೆ ಷರತ್ತು ವಿಧಿಸಿದ ಕಾಂಗ್ರೆಸ್‌

Share This Article