InternationalLatestLeading NewsMain Post

ಮಾಸ್ಕೋದಲ್ಲಿ NSA ದೋವಲ್‌ – ರಷ್ಯಾ, ಉಕ್ರೇನ್‌ ಮಧ್ಯೆ ಸಂಧಾನ?

ಮಾಸ್ಕೋ: ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಸಾರಿ 176 ದಿನ ಕಳೆದಿದೆ. ಈಗ ಈ ಯುದ್ಧ ನಿಲ್ಲಿಸಲು ಭಾರತ ಸಂಧಾನ ಮಾತುಕತೆ ನಡೆಸುತ್ತಾ ಎಂಬ ಪ್ರಶ್ನೆ ಎದ್ದಿದೆ.

ಹೌದು. ಈ ವರ್ಷದ ಫೆಬ್ರವರಿ 20ರಿಂದ ಆರಂಭಗೊಂಡ ಯುದ್ಧವನ್ನು ನಿಲ್ಲಿಸಲು ಹಲವು ದೇಶಗಳು ಪ್ರಯತ್ನ ಮಾಡುತ್ತಿದ್ದರೂ ರಷ್ಯಾ ಬಗ್ಗುತ್ತಿಲ್ಲ. ಈಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ರಷ್ಯಾಗೆ ಭೇಟಿ ನೀಡಿದ್ದರಿಂದ ಭಾರತ ಸಂಧಾನ ಮಾತುಕತೆ ನಡೆಸುತ್ತಾ ಎಂಬ ಪ್ರಶ್ನೆ ಎದ್ದಿದೆ.

ಅಜಿತ್‌ ದೋವಲ್‌ ಅವರು ರಷ್ಯಾದ ಭದ್ರತಾ ಸಲಹೆಗಾರ ನಿಕೊಲಾಯ್ ಪಟ್ರುಶೆವ್(Nikolai Patrushev) ಜೊತೆ ಮಾತುಕತೆ ನಡೆಸಲಿದ್ದಾರೆ. ನಿಕೊಲಾಯ್ ಪಟ್ರುಶೆವ್ ಅಲ್ಲದೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅಲ್ಲದೇ ಹಲವು ನಾಯಕರ ಜೊತೆ ಉಕ್ರೇನ್‌ ವಿಚಾರದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಎರಡು ದೇಶಗಳ ಮಧ್ಯೆ ಆರಂಭವಾದ ಯುದ್ಧದಿಂದ ವಿಶ್ವದೆಲ್ಲೆಡೆ ಸಮಸ್ಯೆ ಸೃಷ್ಟಿಯಾಗಿದ್ದು ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅದರಲ್ಲೂ ಯುರೋಪಿಯನ್‌ ದೇಶಗಳಲ್ಲಿ ಹಣದುಬ್ಬರ ಭಾರೀ ಏರಿಕೆಯಾಗಿದೆ. ಹೀಗಾಗಿ ಈ ರಾಷ್ಟ್ರಗಳು ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಮೇಲೆ ಯುದ್ಧ ನಿಲ್ಲಿಸುವಂತೆ ಒತ್ತಡ ಹೇರುತ್ತಿವೆ. ಇದನ್ನೂ ಓದಿ: ಧೋವಲ್‌ ಸಂಧಾನ – ಗಡಿಯಿಂದ ಪೂರ್ಣ ಸೇನೆ ವಾಪಸ್‌ಗೆ ಚೀನಾ ಒಪ್ಪಿಗೆ

ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ, ಅಮೆರಿಕ ದೇಶಗಳು ರಷ್ಯಾ ಜೊತೆ ಮಾತುಕತೆ  ನಡೆಸಿ ಯುದ್ಧ ನಿಲ್ಲಿಸುವಂತೆ ಮನವೊಲಿಸಿ ಎಂದು ಭಾರತದ ಜೊತೆ ಕೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಜಿತ್‌ ದೋವಲ್‌ ರಷ್ಯಾ ಪ್ರವಾಸ ಭಾರೀ ಮಹತ್ವ ಪಡೆದುಕೊಂಡಿದೆ.

ರಷ್ಯಾ ಭಾರತದ ಶಸ್ತ್ರಾಸ್ತ್ರ ಸರಬರಾಜು ದೇಶ ಅಲ್ಲದೇ ಸದ್ಯ ಕಚ್ಚಾ ತೈಲವನ್ನೂ ಪೂರೈಸುತ್ತಿದೆ. ಈ ಭೇಟಿಯ ವೇಳೆ ಕಚ್ಚಾ ತೈಲ ಬೆಲೆಯನ್ನು ಮತ್ತಷ್ಟು ಕಡಿಮೆ ದರದಲ್ಲಿ ನೀಡುವಂತೆ ಭಾರತ ರಷ್ಯಾದ ಜೊತೆ ಮಾತುಕತೆ ನಡೆಸಲಿದೆ ಎನ್ನಲಾಗಿದೆ.

ಯಾಕೆ ಒತ್ತಡ?
ಯುದ್ಧ ನಿಲ್ಲಿಸುವಂತೆ ಹಲವು ರಾಷ್ಟ್ರಗಳು ಮನವಿ ಮಾಡುತ್ತಿದ್ದರೂ ಎರಡು ದೇಶಗಳು ಹಿಂದಕ್ಕೆ ಸರಿಯುತ್ತಿಲ್ಲ. ಉಕ್ರೇನ್‌ ಮತ್ತು ರಷ್ಯಾದಲ್ಲಿ ಗೋಧಿಯನ್ನು ಹೆಚ್ಚು ಬೆಳೆಯಲಾಗುತ್ತದೆ. ರಷ್ಯಾ ಯುರೋಪ್‌ಗೆ ಗ್ಯಾಸ್‌ ವಿತರಣೆ ಮಾಡುತ್ತಿದೆ. ಯುದ್ಧದಿಂದಾಗಿ ವಸ್ತುಗಳ ಬೆಲೆಗಳು ಭಾರೀ ಏರಿಕೆಯಾಗಿದೆ.

ಯುರೋಪ್‌ನಲ್ಲಿ ಚಳಿಗಾಲ ಆರಂಭವಾದರೆ ಗ್ಯಾಸ್‌ ಬಳಕೆ ಹೆಚ್ಚಾಗಲಿದೆ. ಒಂದು ವೇಳೆ ರಷ್ಯಾ ಏನಾದರೂ ಕಡಿತ ಮಾಡಿದರೆ ಜನರಿಗೆ ಯರೋಪ್‌ ದೇಶಗಳಿಗೆ ಭಾರೀ ಸಮಸ್ಯೆಯಾಗಲಿದೆ. ಈಗಾಗಲೇ ಯುದ್ಧದ ನೇರ ಪರಿಣಾಮವನ್ನು ಅಲ್ಲಿನ ಜನತೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುರೋಪ್‌ ದೇಶಗಳು ಹೇಗಾದರೂ ಮಾಡಿ ಯುದ್ಧ ನಿಲ್ಲಿಸಲು ಒತ್ತಡ ಹೇರುತ್ತಿವೆ. ಇದನ್ನೂ ಓದಿ: ನಮ್ಮದು ಬೆಸ್ಟ್‌ ಡೀಲ್‌ – ರಷ್ಯಾದಿಂದ ತೈಲ ಖರೀದಿಗೆ ಜೈಶಂಕರ್‌ ಸಮರ್ಥನೆ

ಭಾರತ ತಟಸ್ಥ ನೀತಿಯನ್ನು ಅನುಸರಿಸುತ್ತಿದ್ದು ಎರಡು ದೇಶಗಳ ಜೊತೆ ಉತ್ತಮ ಸಂಬಂಧವನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಯಾರೂ ಕೂಡ ಗೆದ್ದಿಲ್ಲ. ಯುದ್ಧವನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಈ ಯುದ್ಧದಲ್ಲಿ ಯಾರು ವಿಜೇತರಾಗಿರುವುದಿಲ್ಲ ಮತ್ತು ಇದರಿಂದಾಗಿ ಎಲ್ಲರೂ ನಷ್ಟವನ್ನು ಅನುಭವಿಸಿರುತ್ತಾರೆ. ಆದ್ದರಿಂದ ನಾವು ಶಾಂತಿಯ ಪರವಾಗಿದ್ದೇವೆ ಎಂದು ಹೇಳಿದ್ದರು.

Live Tv

Leave a Reply

Your email address will not be published. Required fields are marked *

Back to top button