ಹುಬ್ಬಳ್ಳಿ: ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಇಲಾಖೆ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹುಬ್ಬಳ್ಳಿಯಲ್ಲಿ ಉದ್ಯಾನಗಳ ಪ್ರವೇಶಕ್ಕಾಗಿ ಸಾರ್ವಜನಿಕರಿಂದ ಸಂಗ್ರಹವಾಗುತ್ತಿರುವ ಹಣವನ್ನು ಅರಣ್ಯ ಇಲಾಖೆಗೆ ನೀಡದೇ ಸರ್ಕಾರಿ ಅಧಿಕಾರಿ ತಮ್ಮ ಸ್ವಂತಕ್ಕೆ ಬಳಸಿಕೊಂಡು ಭ್ರಷ್ಟಾಚಾರ ನಡೆಸಿರುವ ಘಟನೆ ನಡೆದಿದೆ.
ನೃಪತುಂಗ ಬೆಟ್ಟ, ಹುಬ್ಬಳ್ಳಿಯಲ್ಲಿರುವ ಏಕೈಕ ನೈಸರ್ಗಿಕ ಬೆಟ್ಟದ ಪಾರ್ಕ್. ಈ ಉದ್ಯಾನ ನೋಡಲು ಹುಬ್ಬಳ್ಳಿ ಜನತೆ ಸೇರಿದಂತೆ, ಅಕ್ಕಪಕ್ಕ ಜಿಲ್ಲೆಯ ಪ್ರವಾಸಿಗರು ಸಹ ಬರುತ್ತಾರೆ. ಹೀಗಾಗಿ, ಬೆಟ್ಟ ಮತ್ತು ಪಾರ್ಕ್ ಅಭಿವೃದ್ಧಿ ಸಂಪೂರ್ಣ ಕಾರ್ಯವನ್ನು ಅರಣ್ಯ ಇಲಾಖೆ ನೋಡುಕೊಂಡು ಹೋಗುತ್ತಿದೆ. ಅಲ್ಲದೆ, ಬೆಟ್ಟದ ಕೆಳಗೆ ಅರಣ್ಯ ಇಲಾಖೆಯ ವಲಯ ಕಚೇರಿ ಸಹ ಇದೆ. ಈ ಪಾರ್ಕ್ ಪ್ರವೇಶ ಶುಲ್ಕ ದೊಡ್ಡವರಿಗೆ 20 ರೂ, ಮಕ್ಕಳಿಗೆ 10 ರೂಪಾಯಿ ಇದೆ. ಈಗ ಈ ಪ್ರವೇಶ ಶುಲ್ಕವೇ ಸುದ್ದಿಯಲ್ಲಿದೆ.
Advertisement
ನೃಪತುಂಗ ಬೆಟ್ಟ ಪಾರ್ಕ್ನಲ್ಲಿ ಅರಣ್ಯ ಸಿಬ್ಬಂದಿ, ಸರ್ಕಾರಕ್ಕೆ ಕಟ್ಟಬೇಕಾಗಿದ್ದ ಲಕ್ಷಾಂತರ ರೂಪಾಯಿ ಹಣವನ್ನು ತನ್ನ ಜೇಬಿಗಿಳಿಸಿ ಈಗ ಸಿಕ್ಕಿಹಾಕಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಭ್ರಷ್ಟಾಚಾರ ಈಗ ಬೆಳಕಿಗೆ ಬಂದಿದೆ. ಪಾರ್ಕ್ ಪ್ರವೇಶಕ್ಕೆ ಸಾರ್ವಜನಿಕರಿಂದ ಪಡೆದ ಹಣವನ್ನು 24 ಗಂಟೆಯಲ್ಲಿ ಅರಣ್ಯ ಇಲಾಖೆಯ ಅಧಿಕೃತ ಖಾತೆಗೆ ಜಮೆ ಮಾಡಬೇಕು. ಆದರೆ, ಪಾರ್ಕ್ ಪ್ರವೇಶ ಶುಲ್ಕದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಎಫ್‌ಡಿಎ ಕ್ಲರ್ಕ್ ವಿಶ್ವನಾಥ ಮಹಾಜನ್ ಬೆಟ್ಟದ ಪ್ರವೇಶ ಶುಲ್ಕವನ್ನು ಖಾತೆಗೆ ಜಮೆ ಮಾಡದೆ ಕಳೆದ ಒಂದು ವರ್ಷದಿಂದ ಲಕ್ಷಾಂತರ ರೂಪಾಯಿ ಹಣವನ್ನು ಸ್ವಂತಕ್ಕಾಗಿ ಬಳಿಸಿಕೊಂಡ ಆರೋಪ ಕೇಳಿ ಬಂದಿದೆ. ಈ ವಿಚಾರವನ್ನು ಸ್ವತಃ ಅರಣ್ಯ ಇಲಾಖೆಯೇ ಒಪ್ಪಿಕೊಂಡಿದೆ.
Advertisement
ವಿಶ್ವನಾಥ ಆರೋಪ ಗೊತ್ತಾದ ಮೇಲೆ ಕೂಡಲೇ ದೂರು ನೀಡದ ಅರಣ್ಯ ಇಲಾಖೆ, ಬಳಸಿಕೊಂಡ ಹಣ ವಾಪಸ್ ಕೊಡುವಂತೆ ಸೂಚಿಸಿದೆ. ಇದಕ್ಕೂ ವಿಶ್ವನಾಥ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ, ಬೇರೆ ವಿಧಿಯಿಲ್ಲದೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಎಫ್‌ಡಿಎ ವಿಶ್ವನಾಥ್ ಬಂಧನ ಮಾಡಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.