ದಮ್ಮಾಮ್: ಕಲ್ಲಡ್ಕ ಅಬ್ರಾಡ್ ಫೋರಮ್ (Kalladka Abroad Forum) ವತಿಯಿಂದ ಗಲ್ಫ್ ಎನ್ಆರ್‌ಐ ಮೀಟ್ (NRI Meet) ನ.22ರಂದು ದಮ್ಮಾಮ್ ನ ದಿಲ್ಮುನ್ ರೆಸಾರ್ಟ್‌ನಲ್ಲಿ ನಡೆಯಿತು.
ಸಮಾವೇಶದಲ್ಲಿ ಸೌದಿ ಅರೇಬಿಯಾದ ವಿವಿಧ ಪ್ರಾಂತ್ಯಗಳು, ಭಾರತ, ದುಬೈ, ಬಹರೈನ್‌ನಿಂದ ಅತಿಥಿಗಳು ಭಾಗವಹಿಸಿದ್ದರು. ಕಲ್ಲಡ್ಕ, ಗೋಳ್ತಮಜಲು, ಕೆ.ಸಿ ರೋಡ್ ಜಮಾತ್‌ನ ನಾಯಕರುಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸುಮಾರು 50ಕ್ಕೂ ಹೆಚ್ಚು ಮಂದಿ ಇದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕಲ್ಲಡ್ಕದಿಂದ ಆಗಮಿಸಿದ್ದರು.
Advertisement
Advertisement
ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲ್ಲಡ್ಕ ಅಬ್ರಾಡ್ ಫೋರಮ್ ಸೌದಿ ಅರೇಬಿಯಾ ಅಧ್ಯಕ್ಷ ಮೊಹಮ್ಮದ್ ಫಿರೋಜ್, ಕಲ್ಲಡ್ಕ ಅನಿವಾಸಿಗಳ ನೆರವಿಗಾಗಿ 2016ರಲ್ಲಿ ಕಲ್ಲಡ್ಕ ಅಬ್ರಾಡ್ ಫೋರಮ್‌ನ್ನು ಸ್ಥಾಪಿಸಲಾಯಿತು. ದಕ್ಷಿಣ ಕನ್ನಡ ಮತ್ತು ಕೇರಳದಿಂದ ಬೃಹತ್ ಸಂಖ್ಯೆಯಲ್ಲಿ ಜನರು ಗಲ್ಫ್ ರಾಷ್ಟ್ರಗಳತ್ತ ಉದ್ಯೋಗಕ್ಕಾಗಿ ಬರಲಾರಂಭಿಸಿದ ಸಂದರ್ಭದಲ್ಲಿ ಕಲ್ಲಡ್ಕದಿಂದಲೂ ದೊಡ್ಡ ಸಂಖ್ಯೆಯಲ್ಲಿ ಗಲ್ಫ್ ರಾಷ್ಟ್ರಗಳಿಗೆ ಆಗಮಿಸಿದರು. ಕಲ್ಲಡ್ಕದಿಂದ ಆಗಮಿಸಿದ ಈ ಅನಿವಾಸಿಗಳನ್ನು ಒಗ್ಗೂಡಿಸಿ ಅವರು ಸೌದಿ ಅರೇಬಿಯಾದಲ್ಲಿ ಪರಸ್ಪರ ಹೇಗೆ ಸಹಕಾರವನ್ನು ವೃದ್ಧಿಸಿಕೊಳ್ಳಬಹುದು ಮತ್ತು ಕಲ್ಲಡ್ಕ ಜಮಾತ್‌ನ ಒಟ್ಟು ಅಭಿವೃದ್ಧಿಯಲ್ಲಿ ಹೇಗೆ ಪಾಲ್ಗೊಳ್ಳುವಂತೆ ಮಾಡಬಹುದು ಎಂಬ ಚಿಂತನೆಯೊಂದಿಗೆ ಕಲ್ಲಡ್ಕ ಅಬ್ರಾಡ್ ಫೋರಮ್ ಸ್ಥಾಪಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.
Advertisement
Advertisement
ಅತಿಥಿಗಳಾಗಿ ಭಾಗವಹಿಸಿದ್ದ ಅಲ್ ಅಖ್ದೋದ್ ಸಂಸ್ಥೆಯ ಅಧ್ಯಕ್ಷ ಹುಸೈನ್ ಅಲ್ ಯಾಮಿ ಮತ್ತು ಬ್ರೈಟ್ ಸಪೋರ್ಟ್ ಕಂಪನಿಯ ಅಧ್ಯಕ್ಷ ಅಲ್ ಉಸ್ಮಾನ್ ಅಲ್ ಝಹ್ರಾನಿ, ಸೌದಿ ಅರೇಬಿಯಾವನ್ನು ಇಲ್ಲಿನ ಪ್ರಜೆಗಳು ಮಾತ್ರವಲ್ಲದೇ ಎಲ್ಲಾ ದೇಶಗಳ ಜನರು ಸೇರಿ ನಿರ್ಮಿಸಿದ್ದಾರೆ. ಹಿಂದೂ ಮುಸ್ಲಿಂ ಕ್ರೈಸ್ತವೆಂಬ ಭೇದ ಭಾವವಿಲ್ಲದೆ ಎಲ್ಲಾ ಧರ್ಮಗಳ, ದೇಶಗಳ ಒಳ್ಳೆಯ ಮನಸ್ಸುಳ್ಳವರಿಗೆ ಸೌದಿ ಅರೇಬಿಯಾ ಸೇರಿದ್ದಾಗಿದೆ ಎಂದು ಒತ್ತಿ ಹೇಳಿದರು.
ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಕಲ್ಲಡ್ಕ ಇದರ ಅಧ್ಯಕ್ಷ ಅಬ್ದುಲ್ಲಾ ಕೋಡಿ ಮಾತನಾಡಿ, ಇದೊಂದು ಅವಿಸ್ಮರಣೀಯ ಕ್ಷಣವಾಗಿದೆ. ಇಂತಹ ಒಂದು ಸಮಾವೇಶವನ್ನು ಕೈಗೊಂಡದ್ದಕ್ಕಾಗಿ ಕಲ್ಲಡ್ಕ ಅಬ್ರಾಡ್ ಫೋರಮ್‌ನ್ನು ಶ್ಲಾಘಿಸಿದರು.
ರಹ್ಮಾನಿಯಾ ಜುಮ್ಮಾ ಮಸ್ಜಿದ್ ಗೋಳ್ತಮಜಲು ಇದರ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹನೀಫ್ ಹಾಜಿ ಮಾತನಾಡಿ ದುಬೈ, ಬಹರೇನ್, ಇಂಡಿಯಾದಿಂದ ಜನರು ಪಾಲ್ಗೊಂಡ ಈ ಸಮಾವೇಶ ಐತಿಹಾಸಿಕವಾದುದು. ಜಮಾತ್ ವ್ಯವಸ್ಥೆ ಎಂಬುದು ಒಂದು ಶ್ರೇಷ್ಠ ವ್ಯವಸ್ಥೆಯಾಗಿದೆ. ಜಮಾತ್ ವ್ಯವಸ್ಥೆಯನ್ನು ಕೇವಲ ಧಾರ್ಮಿಕ ಕಾರ್ಯಗಳಿಗಾಗಿ ಸೀಮಿತಗೊಳಿಸದೆ ಜಮಾತ್‌ನ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಬಳಕೆಯಾಗಬೇಕು ಎಂದರು.
ಕಲ್ಲಡ್ಕ ಅಬ್ರಾಡ್ ಫೋರಮ್ ಯುಎಇ ಅಧ್ಯಕ್ಷ ನವಾಜ್ ಗೋಳ್ತಮಜಲು, ಕಲ್ಲಡ್ಕ ಜಮಾತ್ ನ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪನಾಮ, ಅಬ್ರಾಡ್ ಫೋರಮ್ ಉಪಾಧ್ಯಕ್ಷ ಜಾವೇದ್ ಕಲ್ಲಡ್ಕ, ಅಲ್ ಅಖ್ದೋದ್ ಕಂಪೆನಿ ಆಪರೇಷನ್ ಮ್ಯಾನೇಜರ್ ಉಮ್ಮರ್ ಫಾರೂಕ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಕಲ್ಲಡ್ಕ ಇತಿಹಾಸ, ಕಲ್ಲಡ್ಕ ಅಬ್ರಾಡ್ ಫೋರಮ್ ಸ್ಥಾಪನೆ ಹಾಗೂ ಉದ್ದೇಶವನ್ನೊಳಗೊಂಡ ಡಾಕ್ಯುಮೆಂಟರಿ ಪ್ರದರ್ಶಿಸಲಾಯಿತು. ಕಲ್ಲಡ್ಕ ಜಮಾತ್ ನ ಸುಮಾರು ನೂರು ವರುಷಗಳ ಇತಿಹಾಸವನ್ನು ಕಾರ್ಯಕ್ರಮದಲ್ಲಿ ವಿವರಿಸಲಾಯಿತು. ನೂರು ವರುಷಗಳ ಹಿಂದೆ ಕಲ್ಲಡ್ಕ ಮಸೀದಿಯನ್ನು ನಿರ್ಮಿಸಿದ ಹಿರಿಯರಿಗೆ ಮತ್ತು ಆ ನಂತರದಲ್ಲಿ 1940ರಿಂದ 1965ರ ತನಕ ಜಮಾತ್‌ಗಾಗಿ ಸೇವೆ ಸಲ್ಲಿಸಿದ ಮುಖಂಡರಿಗೆ ಮತ್ತು ಮುಸ್ಲಿಯಾರ್ ಗಳಿಗೆ ‘ಕಲ್ಲಡ್ಕ ರತ್ನ’ ಎಂಬ ಪದವಿ ನೀಡಿ ಗೌರವಿಸಲಾಯಿತು.
ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮೊಹಮ್ಮದ್ ಹನೀಫ್‌ರವರನ್ನು ಸಮಾವೇಶದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಲ್ಲಡ್ಕ ಅಬ್ರಾಡ್ ಫೋರಮ್ ಉಪಾಧ್ಯಕ್ಷ ಉಮ್ಮರ್ ಫಾರೂಕ್ ಪೋರ್ಟ್ ವೇ ಮತ್ತು ಮುಜೀಬ್ ಕಲ್ಲಡ್ಕ, ಕಲ್ಲಡ್ಕ ಅಬ್ರಾಡ್ ಫೋರಮ್ ದುಬೈ ಘಟಕದ ಉಪಾಧ್ಯಕ್ಷ ರಫೀಕ್ ನೆಕ್ಕರಾಜೆ, ಗೋಳ್ತಮಜಲು ರಹ್ಮಾನಿಯಾ ಜುಮ್ಮಾ ಮಸ್ಜಿದ್ ನ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಮದಕ, ಕೆ.ಸಿ ರೋಡ್ ಜಮಾತ್ ಪ್ರಧಾನ ಕಾರ್ಯದರ್ಶಿ ಫವಾಜ್, ಕೆ.ಎನ್ ಬೇಕರಿ ಮಾಲಕ ನವಾಜ್, ಗೊಳ್ತಮಜಲು ಜಮಾತ್ ಕಮಿಟಿ ಇಕ್ಬಾಲ್ ಗೋಳ್ತಮಜಲು ಪಾಲ್ಗೊಂಡಿದ್ದರು. ಇಮ್ತಿಯಾಜ್ ಗೋಳ್ತಮಜಲು, ಹಮೀದ್ ಗೊಳ್ತಮಜಲು ಮತ್ತು ಮೊಹಮ್ಮದ್ ಷರೀಫ್ ಕೆ.ಸಿ ರೋಡ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಲ್ಲಡ್ಕ ಅಬ್ರಾಡ್ ಫಾರ್ಮ್ ಕಾರ್ಯಕಾರಿ ಸಮಿತಿ ಸದಸ್ಯ ಅಕ್ಬರ್ ಸ್ವಾಗತಿಸಿ, ಜಾಬಿರ್ ವಂದಿಸಿದರು.