– ಸಿಮ್ಸ್ ನಿರ್ದೇಶಕ ಡಾ.ಲೇಪಾಕ್ಷಿ ಅಮಾನತು
ಶಿವಮೊಗ್ಗ: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಬಾಕಿ ಇರುವ ಎಲ್ಲಾ ಮೊತ್ತವನ್ನು ವಾರದೊಳಗಾಗಿ ಪಾವತಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ನದಿ ಪುನಶ್ಚೇತನ ಕಾರ್ಯಕ್ರಮ ಅನುಷ್ಠಾನ ಕುರಿತು ಪಿಡಿಒ, ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಪ್ರತಿನಿಧಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
Advertisement
Advertisement
ಕೇಂದ್ರ ಸರ್ಕಾರ ಬಾಕಿ ಅನುದಾನ ಬಿಡುಗಡೆ ಮಾಡಿದ್ದು, ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಇನ್ನೂ ಒಂದು ಸಾವಿರ ಕೋಟಿ ರೂ. ಮುಂಗಡವಾಗಿ ಜಿಲ್ಲೆಗೆ ಬಿಡುಗಡೆ ಮಾಡಿದೆ. ಕೊರೊನಾ ಹಿನ್ನೆಲೆಯಲ್ಲಿ ಕೂಲಿ ಮೊತ್ತವನ್ನು ರೂ. 249ರಿಂದ 275ಕ್ಕೆ ಹೆಚ್ಚಳ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಯೋಜನೆಯಡಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿ ಮಾಡಬೇಕು. ವಾರದೊಳಗಾಗಿ ಕೂಲಿ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.
Advertisement
ಉದ್ಯೋಗ ಖಾತ್ರಿ ಯೋಜನೆಯಡಿ 5 ಜನರ ತಂಡಗಳನ್ನು ರಚಿಸಿ ಕಾಮಗಾರಿ ಅನುಷ್ಠಾನಗೊಳಿಸಬೇಕು. ಗುಂಪಾಗಿ ಕೆಲಸ ಮಾಡದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡಬೇಕು. ನದಿ ಪುನಶ್ಚೇತನ ಯೋಜನೆಯಡಿ, ಮಳೆ ನೀರು ಹರಿದು ಪೋಲಾಗಿ ಹೋಗದೆ ಪ್ರತಿ ಹನಿ ನೆಲದ ಒಳಗೆ ಇಂಗುವಂತಹ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಇಂಗು ಗುಂಡಿಗಳ ರಚನೆ, ಮಣ್ಣಿನ ಸವಕಳಿ ತಡೆಯುವುದು, ಗಿಡ ಮರ ಬೆಳೆಸುವುದು ಸೇರಿದಂತೆ ಎಲ್ಲಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
Advertisement
ಸಭೆಯಲ್ಲಿ ಶಾಸಕ ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿ.ಪಂ.ಸಿಇಒ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.
ಶಿವಮೊಗ್ಗದ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಕಳೆದ ವಾರ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಈ ಘಟನೆಗೆ ಮೆಗ್ಗಾನ್ ಭೋಧನಾ ಆಸ್ಪತ್ರೆ ನಿರ್ದೇಶಕ ಡಾ.ಲೇಪಾಕ್ಷಿ ಅವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನವೇ ಕಾರಣ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಡಾ.ಲೇಪಾಕ್ಷಿ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಮೊನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಅಮಾನತು ನಿರ್ಧಾರ ಕೈಗೊಂಡಿದ್ದಾರೆ. ಶೀಘ್ರದಲ್ಲಿಯೇ ಅವರ ಸ್ಥಾನಕ್ಕೆ ಮತ್ತೊಬ್ಬರು ಸಮರ್ಥರನ್ನು ನೇಮಕ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.