Latest

ಇನ್ನು ಮುಂದೆ ಪ್ರತಿದಿನ ಪರಿಷ್ಕರಣೆಯಾಗಲಿದೆ ಪೆಟ್ರೋಲ್, ಡೀಸೆಲ್ ದರ! ಗ್ರಾಹಕರಿಗೆ ಲಾಭವೇ?

Published

on

Share this

ನವದೆಹಲಿ: ಇಲ್ಲಿಯವರೆಗೆ 15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಇನ್ನು ಮುಂದೆ ಪ್ರತಿದಿನ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

ಹೌದು. ಭಾರತೀಯ ತೈಲ ಕಂಪೆನಿಗಳು ಪ್ರತಿದಿನ ತೈಲದರವನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರಸ್ತುತ ದೇಶದಲ್ಲಿ ಶೇ.95ರಷ್ಟು ಮಾರುಕಟ್ಟೆಯನ್ನು ಹೊಂದಿದ್ದು ಇವರೆಲ್ಲರೂ ಒಟ್ಟಾಗಿ ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಮುಂದಿಟ್ಟಿವೆ. ಈ ಎಲ್ಲ ತೈಲ ಕಂಪೆನಿಗಳ ಅಧಿಕಾರಿಗಳು ಬುಧವಾರ ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಜೊತೆ ಮಾತುಕತೆ ನಡೆಸಿದ್ದಾರೆ.

ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸಬೇಕು ಎನ್ನುವ ಪ್ರಸ್ತಾಪ ಈ ಹಿಂದೆಯೇ ಇತ್ತು. ಆದರೆ ಈಗ ಇದನ್ನು ಕಾರ್ಯರೂಪಕ್ಕೆ ತರಲು ನಾವು ಸಿದ್ಧರಾಗಿದ್ದೇವೆ. ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಪ್ರತಿದಿನ ದರ ಬದಲಾದರೆ ಗ್ರಾಹಕರಿಗೆ ಮತ್ತು ವಿತರಕರಿಗೆ ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ.

ಪ್ರತಿದಿನ ದರವನ್ನು ಪರಿಷ್ಕರಿಸುವ ಹೊಸ ವ್ಯವಸ್ಥೆ ಭಾರತದಲ್ಲಿ ಎಂದಿನಿಂದ ಕಾರ್ಯರೂಪಕ್ಕೆ ಬರುತ್ತದೆ ಎನ್ನುವ ಪ್ರಶ್ನೆಗೆ ಅಧಿಕಾರಿ ಉತ್ತರ ನೀಡಿಲ್ಲ.

ಗ್ರಾಹಕರಿಗೆ ಲಾಭವೇ?
ಪ್ರಸ್ತುತ ಈಗ ಪ್ರತಿ 15ದಿನಗಳಿಗೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ನೋಡಿಕೊಂಡು ಭಾರತೀಯ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸುತ್ತಿರುತ್ತವೆ. ಇದರಿಂದಾಗಿ ಕೆಲವೊಮ್ಮೆ ಭಾರೀ ಬೆಲೆ ಏರಿಕೆಯಾದರೆ, ಕೆಲವೊಮ್ಮೆ ಭಾರೀ ಇಳಿಕೆಯಾಗುತ್ತದೆ. ಏರಿಕೆಯಾದರೆ ಗ್ರಾಹಕರಿಗೆ ಹೊರೆಯಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಪ್ರತಿ ದಿನ ದರವನ್ನು ಪರಿಷ್ಕರಿಸಿದರೆ ಪ್ರತಿದಿನ ಕೆಲ ಪೈಸೆ ಏರಿಕೆಯಾಗಬಹುದು ಇಲ್ಲವೇ ಕೆಲ ದಿನ ಕೆಲ ಪೈಸೆ ಇಳಿಕೆಯಾಗಬಹುದು. ಇದರಿಂದಾಗಿ ಗ್ರಾಹಕರಿಗೆ ಅಷ್ಟೇನು ಹೊರೆ ಬೀಳುವುದಿಲ್ಲ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿಕೆ ಅಥವಾ ಏರಿಕೆಯಾದರೂ ವಿಶೇಷವಾಗಿ ಚುನಾವಣೆಯ ಸಂದರ್ಭದಲ್ಲಿ ಸರ್ಕಾರದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುವುದರಿಂದ ತೈಲ ಕಂಪೆನಿಗಳು ಈ ಅವಧಿಯಲ್ಲಿ ದರ ಪರಿಷ್ಕರಣೆಗೆ ಮುಂದಾಗುವುದಿಲ್ಲ. ಒಂದು ವೇಳೆ ಪ್ರತಿದಿನ ದರವನ್ನು ಪರಿಷ್ಕರಿಸುವ ವ್ಯವಸ್ಥೆ ಬಂದರೆ ಚುನಾವಣೆಯ ಅವಧಿಯಲ್ಲೂ ದರವನ್ನು ಏರಿಕೆ, ಇಳಿಕೆ ಮಾಡುವ ಸ್ವಾಂತಂತ್ರ್ಯ ಇವುಗಳಿಗೆ ಸಿಗಲಿದೆ.

ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಬಹಳ ದಿನಗಳ ಬಳಿಕ ಮಾರ್ಚ್ 31ರಂದು ಭಾರೀ ಇಳಿಕೆಯಾಗಿತ್ತು. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.77 ರೂ. ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 2.91 ರೂ. ಇಳಿಕೆಯಾಗಿತ್ತು. ಪ್ರತಿ 15 ದಿನಗಳಿಗೊಮ್ಮೆ ದರವನ್ನು ಪರಿಷ್ಕರಿಸುತ್ತಿದ್ದ ತೈಲ ಕಂಪೆನಿಗಳು ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆ ಮಾಡಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಮಾತ್ರ ಪರಿಷ್ಕರಿಸಲಾಗಿತ್ತು.

ಭಾರತ ಸರ್ಕಾರ 2010 ರಲ್ಲಿ ಪೆಟ್ರೋಲ್ ನಿಯಂತ್ರಣ ಮುಕ್ತಗೊಳಿಸಿದರೆ, 2014ರಲ್ಲಿ ಡೀಸೆಲ್ ಅನ್ನು ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿತ್ತು.

 

Click to comment

Leave a Reply

Your email address will not be published. Required fields are marked *

Advertisement
Advertisement