ಬೆಂಗಳೂರು: ಭಾರತದ ಸಂವಿಧಾನದ ಮಹತ್ವ ಕುರಿತು ಶಾಲಾ ಹಂತದಲ್ಲೇ ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಶಾಲೆಗಳಲ್ಲಿ ಪ್ರತಿನಿತ್ಯ ಪ್ರಾರ್ಥನೆಯ ಅವಧಿಯಲ್ಲಿ ಸಂವಿಧಾನದ ಪ್ರಸ್ತಾವನೆಯ ವಾಚನವನ್ನು ಕಡ್ಡಾಯಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಸಂವಿಧಾನದ ಪ್ರಸ್ತಾವನೆಯನ್ನು ಓದಿ ಹೇಳುವ ಮತ್ತು ಉಪಸ್ಥಿತರೆಲ್ಲರೂ ಪುನರ್ ಉಚ್ಚರಿಸುವ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಶಾಲಾ ವ್ಯಾಪ್ತಿಯಲ್ಲಿರುವ ಸಂವಿಧಾನ ತಜ್ಞರನ್ನು ಶಾಲೆಗೆ ಆಹ್ವಾನಿಸಿ ಅವರಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸಹ ಸರ್ಕಾರ ಸೂಚಿಸಿದೆ.
Advertisement
Advertisement
ನವೆಂಬರ್ 26 ರಂದು ಪ್ರತಿವರ್ಷ ಸಂವಿಧಾನದ ದಿನಾಚರಣೆ ಆಚರಿಸಲು ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರ ಮುಂದುವರಿದ ಭಾಗವಾಗಿ ಈಗ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನೂ ವಾಚಿಸಲು ಆದೇಶಿಸಲಾಗಿದೆ. ಆ ಮೂಲಕ ಮಕ್ಕಳಲ್ಲಿ ಸಂವಿಧಾನದ ಮಹತ್ವ ಅರಿವಿಗೆ ಬರಲಿ ಎನ್ನುವುದು ಸರ್ಕಾರದ ಆಶಯವಾಗಿದೆ.
Advertisement
ಪ್ರಸ್ತಾವನೆಯಲ್ಲಿ ಏನಿದೆ?
“ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಪ್ರಜಾಸತ್ತಾತ್ಮಕ, ಸಮಾಜವಾದಿ, ಜಾತ್ಯತೀತ, ಗಣರಾಜ್ಯವನ್ನಾಗಿ ನಿರ್ಮಿಸುವ ಸಲುವಾಗಿ ಮತ್ತು ಭಾರತದ ಸಮಸ್ತ ಪ್ರಜೆಗಳಿಗೆ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ದೊರಕುವಂತೆಯೂ ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ, ಮತ್ತು ಉಪಾಸನೆಗಳ ಸ್ವಾತಂತ್ರ್ಯ ದೊರಕುವಂತೆ ಮಾಡುವುದು, ಅಂತಸ್ತು ಮತ್ತು ಅವಕಾಶದಲ್ಲಿ ಸಮಾನತೆಯನ್ನು ಸಾಧಿಸುವ ಹಾಗೂ ಎಲ್ಲರಿಗೂ ವ್ಯಕ್ತಿ ಗೌರವ ದೊರಕಿ ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆ ಇವುಗಳನ್ನು ವೃದ್ಧಿಗೊಳಿಸಿ, ಭ್ರಾತೃ ಭಾವನೆಯನ್ನು ಎಲ್ಲರಲ್ಲೂ ಬೆಳೆಸಲು ದೃಢ ಸಂಕಲ್ಪ ಮಾಡಿ ಈ ದಿನ ಅಂದರೆ ನವೆಂಬರ್ 26, 1949ರಂದು ಈ ಸಂವಿಧಾನವನ್ನು ಅಂಗೀಕರಿಸಿ ಶಾಸನ ಮಾಡಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ”