ನವದೆಹಲಿ: ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆ ಪಡೆದ ವ್ಯಕ್ತಿಗಳಿಗೆ ಆಸ್ಟ್ರೇಲಿಯಾ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಆಸ್ಟ್ರೇಲಿಯಾ ಹೈ ಕಮಿಷನರ್ ಬ್ಯಾರಿ ಓಫಾರೆಲ್ ಹೇಳಿದ್ದಾರೆ.
ಆಸ್ಟ್ರೇಲಿಯದ ಔಷಧಿ ಮತ್ತು ಲಸಿಕೆ ನಿಯಂತ್ರಣ ಮಂಡಳಿ “ಚಿಕಿತ್ಸಕ ಸರಕುಗಳ ಆಡಳಿತವು”(ಟಿಜಿಎ) ವರದಿ ಆಧರಿಸಿ ಬ್ಯಾರಿ ಓಫಾರೆಲ್ ಈ ಹೇಳಿಕೆ ನೀಡಿದ್ದು, ಆಸ್ಟ್ರೇಲಿಯಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೊವ್ಯಾಕ್ಸಿನ್ ಪರಿಣಾಮಕಾರಿತ್ವವನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿದ್ದು ಅದು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ವರದಿಗಳ ಆಧಾರದ ಮೇಲೆ ಟಿಎಜಿ ನಿರ್ಧಾರ ಮಾಡಿದ್ದು ಅನುಮತಿಗೆ ಒಪ್ಪಿದೆ. ಇದನ್ನೂ ಓದಿ: ಗೌಪ್ಯವಾಗಿ ಬೂಸ್ಟರ್ ಡೋಸ್ ಪಡೆಯುತ್ತಿರುವ ಆರೋಗ್ಯ ಸಿಬ್ಬಂದಿ
ಆಸ್ಟ್ರೇಲಿಯಾ ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ಅನುಕೂಲವಾಗಲಿದ್ದು, ಹೆಚ್ಚು ಜನರ ಸಂಚಾರಕ್ಕೆ ಸಹಕಾರಿಯಾಗಲಿದೆ. ಇದನ್ನೂ ಓದಿ: ಮಿಸ್ ಕೇರಳ ಸುಂದರಿಯರ ದುರಂತ ಅಂತ್ಯ
ಕೊವ್ಯಾಕ್ಸಿನ್ ಲಸಿಕೆಗೆ ಈವರೆಗೂ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿಲ್ಲ, ಈಗಾಗಲೇ ಎರಡು ಹಂತದಲ್ಲಿ ಸಭೆಗಳನ್ನು ನಡೆಸಿರುವ ತಜ್ಞರ ಸಮಿತಿ ಹೆಚ್ಚುವರಿ ಮಾಹಿತಿಯನ್ನು ಕೇಳಿದ್ದು ಮೂರನೇ ಹಂತದ ಸಭೆಯಲ್ಲಿ ಬಹುತೇಕ ಮಾನ್ಯತೆ ಸಿಗುವ ಸಾಧ್ಯತೆಗಳಿದೆ. ಅದಕ್ಕೂ ಮುನ್ನ ಆಸ್ಟ್ರೇಲಿಯ ಸರ್ಕಾರ ನೀಡಿರುವ ಈ ಮಾನ್ಯತೆ ಕೊವ್ಯಾಕ್ಸಿನ್ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.