ಬೆಂಗಳೂರು: ಇತ್ತೀಚೆಗಷ್ಟೇ ನೆರೆ ಸಂತ್ರಸ್ತರಿಗೆ ಧನ ಸಹಾಯ ಮಾಡಿದ್ದ ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ವಿಶ್ವದ ದುಬಾರಿ ರೋಲ್ಸ್ ರಾಯ್ಸ್ ಸೆಡಾನ್ ಕಾರು ಖರೀದಿಸಿದ್ದಾರೆ.
ಮೂಲಬೆಲೆ ಹಾಗೂ ತೆರಿಗೆ ಸೇರಿದಂತೆ ಒಟ್ಟು 12.75 ಕೋಟಿ ರೂ. ಮೌಲ್ಯದ ಈ ಐಷಾರಾಮಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನಲ್ಲಿ ಎಂಟಿಬಿಯವರು ಗೃಹ ಕಚೇರಿ ಕೃಷ್ಣಾಗೆ ಬಂದಿದ್ದು, ಈ ಮೂಲಕ ಸುತ್ತಮುತ್ತ ಇದ್ದವರಲ್ಲಿ ಅಚ್ಚರಿ ಮೂಡಿಸಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಕಾರಾಗಿರುವ ರೋಲ್ಸ್ ರಾಯ್ಸ್ ಇಂಗ್ಲೆಂಡಿನಲ್ಲಿ ತಯಾರಾಗಿದ್ದು, ಎಂಟಿಬಿಯವರು ವಾರದ ಹಿಂದೆಯಷ್ಟೇ ಖರೀದಿ ಮಾಡಿದ್ದರು.
Advertisement
Advertisement
ಎಂಟಿಬಿ ತಮ್ಮ ಐಷಾರಾಮಿ ಕಾರಿನಲ್ಲಿ ಸಿಎಂ ಕಚೇರಿಗೆ ಬರುತ್ತಿದ್ದಂತೆಯೇ ಎಲ್ಲರ ಚಿತ್ತ ಈ ಕಾರಿನತ್ತ ನೆಟ್ಟಿತ್ತು. ಅಲ್ಲದೆ ಕಾರಿನ ಮುಂದೆ ನಿಂತು ಹಲವರು ಸೆಲ್ಫಿ ತೆಗೆದುಕೊಂಡರೆ, ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ದುಬಾರಿ ಬೆಲೆಯ ಕಾರಿನ ವಿಡಿಯೋ ಮಾಡಿಕೊಂಡ ಪ್ರಸಂಗವೂ ನಡೆಯಿತು.
Advertisement
ಈ ವೇಳೆ ಮಾತನಾಡಿದ ಎಂಟಿಬಿ, ನನಗೆ ರೋಲ್ಸ್ ರಾಯ್ಸ್ ಕಾರಿನಲ್ಲಿ ಓಡಾಡಬೇಕೆಂಬ ಬಯಕೆ ಹಿಂದಿನಿಂದಲೂ ಇತ್ತು. ಆ ಕನಸು ಈಗ ಈಡೇರಿದೆ. ತೆರಿಗೆ ಸೇರಿ 12.75 ಕೋಟಿ ಕೊಟ್ಟು ಕಾರು ಖರೀದಿಸಿದ್ದೇನೆ ಎಂದು ತಿಳಿಸಿದರು.
Advertisement
ಮಳೆ, ನೆರೆಯಿಂದ ಸಂತ್ರಸ್ತರಾದವರಿಗೆ ನೆರವು ನೀಡುವ ಸಲುವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಂ.ಟಿ.ಬಿ ಸಂಸ್ಥೆಯಿಂದ 1 ಕೋಟಿ ನೀಡುವುದಾಗಿ ಹೇಳಿದ್ದೆನು. ಇದೀಗ ಅದರ ಚೆಕ್ ಕೂಡ ಕೊಟ್ಟಿದ್ದೇನೆ’ ಎಂದರು.
ದುಬಾರಿ ಬೆಲೆಯ ಕಾರಿನ ಜೊತೆ ಎಂಟಿಬಿ ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಬನಶಂಕರಿ ಆರ್ ಟಿಒ ಕೇಂದ್ರದಲ್ಲಿ ಕಾರು ನೊಂದಣಿಯಾಗಿದೆ. ಕೆಎ 59 ಎನ್ 888 ಸಂಖ್ಯೆಯನ್ನು ಎಂಟಿಬಿ ಪಡೆದುಕೊಂಡಿದ್ದಾರೆ.
ಕಾರಿನ ವಿಶೇಷತೆ ಏನು?:
ಈ ಕಾರು 5,762 ಮಿ.ಮೀ ಉದ್ದ, 2,018 ಮಿ.ಮಿ. ಅಗಲ ಹಾಗೂ 1,646 ಮಿ.ಮೀ ಎತ್ತರವಿದೆ. 2,560 ಕೆಜಿ ತೂಕದ ಈ ಕಾರಿನಲ್ಲಿ 5 ಮಂದಿ ಪ್ರಯಾಣಿಸಬಹುದು. ಅಲ್ಲದೆ 6749 ಸಿಸಿ ಎಂಜಿನ್, 8 ಗೇರ್, 12 ಸಿಲಿಂಡರ್, 453 ಬಿಎಚ್‍ಪಿ ಪವರ್, 750 ಎನ್‍ಎಂ ಟಾರ್ಕ್ ಹೊಂದಿದೆ. ಗರಿಷ್ಟ 240 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಕೂಡ ಈ ಕಾರು ಪಡೆದುಕೊಂಡಿದೆ. ಝೀರೋದಿಂದ 100 ಕಿ.ಮೀ ವೇಗವನ್ನು ಕೇವಲ 5.3 ಸೆಕೆಂಡಿನಲ್ಲಿ ತಲುಪಬಹುದಾಗಿದ್ದು, ಒಂದು ಲೀಟರ್ ಪೆಟ್ರೋಲಿಗೆ 6.7 ಕಿ.ಮೀ ಮೈಲೇಜ್ ನೀಡುತ್ತದೆ. ಭಾರತದಲ್ಲಿ ಆನ್ ರೋಡ್ ಬೆಲೆ 9.5 ಕೋಟಿ ರೂ. ನಿಂದ ಆರಂಭವಾಗುತ್ತದೆ.