ಬೆಂಗಳೂರು/ನವದೆಹಲಿ: ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿರೋ ಹೊತ್ತಲ್ಲೇ ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ಶುರುವಾದಂತೆ ಕಾಣುತ್ತಿದೆ. ಹೈಕಮಾಂಡ್ ಮೇಲೆ ಡಿಸಿಎಂ ಡಿ.ಕೆ. ಶಿವಕುಮಾರ್ ಬಣ ಒತ್ತಡಕ್ಕೆ ಮುಂದಾಗಿದೆ. ಗುರುವಾರ ಮಧ್ಯಾಹ್ನ 2 ಪ್ರತ್ಯೇಕ ವಿಮಾನಗಳಲ್ಲಿ ಡಿಕೆಶಿ ಬಣದ ಶಾಸಕರು ದೆಹಲಿಗೆ ಹಾರಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಒಕ್ಕಲಿಗ ಶಾಸಕರಾದ ಕುಣಿಗಲ್ ರಂಗನಾಥ್, ನೆಲಮಂಗಲದ ಶ್ರೀನಿವಾಸ್, ಗುಬ್ಬಿ ಶ್ರೀನಿವಾಸ್, ಮಂಡ್ಯದ ಗಣಿಗ ರವಿ, ಮದ್ದೂರಿನ ಕದಲೂರು ಉದಯ್, ಶೃಂಗೇರಿಯ ರಾಜೇಗೌಡ, ಆನೇಕಲ್ ಶಿವಣ್ಣ, ಕುಡಚಿಯ ಮಹೇಂದ್ರ ತಮ್ಮಣ್ಣನವರ್, ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಮೇಲ್ಮನೆ ಸದಸ್ಯರಾದ ಎಸ್.ರವಿ, ದಿನೇಶ್ ಗೂಳಿಗೌಡ ದೆಹಲಿಯಲ್ಲಿ ಖರ್ಗೆ ಭೇಟಿಗೆ ಯತ್ನಿಸಿದ್ದಾರೆ.

ಈ ಕುರಿತು ಕಾಂಗ್ರೆಸ್‌ನ ಕೆಲ ಶಾಸಕರು, ಸಚಿವರು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ್ದಾರೆ.
ಹೈಕಮಾಂಡ್ ಓಕೆ ಅಂದ್ರೆ ಡಿಕೆಶಿ ನಾಳೇನೆ ಸಿಎಂ: ಶಾಸಕ ಶಿವಗಂಗಾ ಬಸವರಾಜ್
ದೆಹಲಿಗೆ ಸಚಿವರು, ಶಾಸಕರು ಹೋಗಿರೋ ಬಗ್ಗೆ ನನಗೆ ಮಾಹಿತಿ ಇಲ್ಲ. ಸಚಿವರು ಇಲಾಖೆ ವಿಚಾರಕ್ಕೆ ಹೋಗಿರಬಹುದು. ಶಾಸಕರು ವೈಯಕ್ತಿಕ ವಿಚಾರಕ್ಕೆ ಹೋಗಿರಬಹುದು. ಸಿಎಂ ಬದಲಾವಣೆ ವಿಚಾರವನ್ನ ಪಕ್ಷದ ಒಳಗೆ ಚರ್ಚೆ ಮಾಡುವಂತೆ ಈ ಹಿಂದೆಯೇ ಹೈಕಮಾಂಡ್ ಸೂಚಿಸಿದೆ. ಈ ಬಗ್ಗೆ ನಾನು ಏನೂ ಮಾತಾನಾಡೋಲ್ಲ. ಜನವರಿ ವರೆಗೆ ಕಾಯಿರಿ, ಜನವರಿಯಲ್ಲಿ ಈ ಬಗ್ಗೆ ಮಾತಾನಾಡುತ್ತೇನೆ. ನಾನಂತೂ ದೆಹಲಿಗೆ ರಾಷ್ಟ್ರೀಯ ನಾಯಕರ ಭೇಟಿಗೆ ನಾನು ಹೋಗಲ್ಲ. ಹೈಕಮಾಂಡ್ ಸಮ್ಮತಿಸಿದ್ರೇ ನಾಳೆಯೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ. ಹೈಕಮಾಂಡ್ ಯಾವ ನಿರ್ಧಾರ ಮಾಡ್ತಾರೆ ನೋಡೋಣ. ಸಿಎಂ ಸೀಟ್ ಖಾಲಿ ಇಲ್ಲ, ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವ ಆಸೆಯನ್ನ ನಾನು ಮೊದಲ ದಿನದಿಂದಲೂ ಹೇಳ್ತಾನೆ ಇದ್ದಾನೆ. ಅವ್ರು ಸಿಎಂ ಆಗೋದನ್ನ ಕಾಯ್ತಿದ್ದೇನೆ.
ನಾನಂತೂ ಟೈಮ್ ತಗೋಂಡಿಲ್ಲ ಎಂದ ಶಾಸಕ ಗಣಿಗ ರವಿಕುಮಾರ್
ನಾನು ದೆಹಲಿಗೆ ಹೋಗಿರೋದು ಬೇರೆ ಉದ್ದೇಶಕ್ಕೆ. ಬೇರೆಯವ್ರು ದೆಹಲಿಗೆ ಹೋಗಿರೋದು ನನಗೆ ಗೊತ್ತಿಲ್ಲ. ನಾನು ವೇಣುಗೋಪಾಲ್ ಅವರನ್ನಾಗಲಿ ಖರ್ಗೆಯವರನ್ನ ಆಗಲಿ ಭೇಟಿ ಮಾಡ್ತಿಲ್ಲ. ರಾಜಕೀಯ ಉದ್ದೇಶಕ್ಕೆ ಬಂದಿಲ್ಲ. ನನ್ನ ಜೊತೆ ದೆಹಲಿ ಫ್ಲೈಟ್‌ನಲ್ಲಿ ಚಲುವರಾಯಸ್ವಾಮಿ ಸ್ವಾಮಿ, ದಿನೇಶ್ ಗೂಳಿಗೌಡ ಇದ್ರು. ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವರನ್ನ ಭೇಟಿ ಮಾಡೋಕ್ಕೆ ಬಂದಿದ್ದಾರೆ. ನಾನು ಹೈಕಮಾಂಡ್ ನಾಯಕರನ್ನು ಭೇಟಿ ಮಾಡ್ತಿಲ್ಲ. ನಾನಂತೂ ಟೈಮ್ ತಗೊಂಡಿಲ್ಲ. ಯಾರದ್ದಾದ್ರೂ ಭೇಟಿ ಮಾಡಿದ್ರೆ ಫೊಟೋ ಬಿಡುಗಡೆ ಮಾಡ್ತೇನೆ.
ಖರ್ಗೆ ಭೇಟಿಗೆ ಸಮಯ ಸಿಕ್ಕಿಲ್ಲ ಎಂದ ಸಚಿವ ಶಿವಾನಂದ ಪಾಟೀಲ್
ನಾನು ದೆಹಲಿಗೆ ಬಂದಿದ್ದಕ್ಕೂ, ಸಿಎಂ ಬದಲಾವಣೆ ವಿಚಾರಕ್ಕೂ ಸಂಬಂಧ ಇಲ್ಲ. ನಾನು ಸಕ್ಕರೆ ವಿಚಾರವಾಗಿ ದೆಹಲಿಗೆ ಬಂದಿದ್ದೆ ಅಷ್ಟೇ. ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿಲ್ಲ. ನನಗೆ ಇಲ್ಲಿ ಸಮಯ ಸಿಕ್ಕಿಲ್ಲಾ, ನಾನು ಖರ್ಗೆ ಭೇಟಿಗೆ ಸಮಯವನ್ನೂ ಕೇಳಿಲ್ಲ. ಶುಕ್ರವಾರ ಖರ್ಗೆ ಬೆಂಗಳೂರಿಗೆ ಬರ್ತಾ ಇದ್ದಾರೆ, ಅವಶ್ಯಕತೆ ಇದ್ರೆ ನಾನು ಅಲ್ಲೇ ಭೇಟಿ ಆಗ್ತೇನೆ. ಸಿಎಂ ಬದಲಾವಣೆ ಬಗ್ಗೆ ನಾನು ಏನು ಮಾತಾಡಲ್ಲ, ಅದ್ಕೆ ಅಂತ ಜನ ಇದ್ದಾರೆ. ಎರಡೂ ವರೆ ವರ್ಷ, ಸಿಎಂ ಬದಲಾವಣೆ ಎಲ್ಲಾ ನಿಮ್ಮ ಸೃಷ್ಟಿ ಅಷ್ಟೇ. ನಮ್ಮಲ್ಲಿ ಆ ಥರ ಗೊಂದಲ ಇಲ್ಲಾ. ಅಗ್ರಿಮೆಂಟ್ ಬಗ್ಗೆ ನಾನೇನು ಅಭಿಪ್ರಾಯ ಹೇಳಲ್ಲ, ನಮ್ಮಲ್ಲಿ ಸ್ಪೋಕ್ಸ್ ಪರ್ಸನ್ ಇದಾರೆ ಅವ್ರು ಮಾತಾಡ್ತಾರೆ. ಸಕ್ಕರೆ ವಿಚಾರ ಸಂಬಂಧ ಒಂದು ಲೆಟರ್ ಕೊಡ್ಬೇಕಿತ್ತು, ಅದ್ಕೆ ಡೆಲ್ಲಿಗೆ ಬಂದಿದ್ದೀನಿ. ಈ ಕೆಲಸ ಬಿಟ್ಟು ಬೇರೆ ಯಾವ ವಿಚಾರವೂ ಸಹ ಇಲ್ಲಾ. ಪಕ್ಷದ ವಿಚಾರ ಏನೇ ಇದ್ರೂ ಹೈ ಕಮಾಂಡ್ ತೀರ್ಮಾನ ಮಾಡುತ್ತೆ ಅಷ್ಟೇ.
ಗುಟ್ಟು ಬಿಟ್ಟುಕೊಡದ ಶಾಸಕ ಹೆಚ್.ಸಿ ಬಾಲಕೃಷ್ಣ
ದೆಹಲಿಗೆ ಕೆಲವರು ಹೋಗಿರುವ ಮಾಹಿತಿ ಇದೆ. ಯರ‍್ಯಾರು ಏನೇನು ಮಾಡ್ತಿದ್ದಾರೆ ಗೊತ್ತಿಲ್ಲ. ಚರ್ಚೆ ಮಾಡಿ ಹೇಳ್ತೇನೆ. ನನ್ನನ್ನ ಯಾರೂ ಸಂಪರ್ಕ ಮಾಡಿಲ್ಲ. ದೆಹಲಿಗೆ ಹೋಗಿರೋದು ಗೊತ್ತಾಯ್ತು. ಸದ್ಯಕ್ಕೆ ದೆಹಲಿಗೆ ಹೋಗೋ ಬಗ್ಗೆ ಪ್ಲ್ಯಾನ್ ಇಲ್ಲ. ಇಕ್ಬಾಲ್ ಹುಸೇನ್ ಸಂಪರ್ಕಕ್ಕೆ ಸಿಗ್ತಿಲ್ಲ. ನನಗ್ಯಾರು ಡೈರಕ್ಷನ್ ಕೊಡ್ತಿಲ್ಲ. ಹೈಕಮಾಂಡ್ ಎಲ್ಲವನ್ನ ಬಗೆಹರಿಸುತ್ತೆ ಅನ್ನೋ ವಿಶ್ವಾಸವಿದೆ.

