ಬೆಂಗಳೂರು : ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಮತ್ತು ಎಂ.ಆರ್ಕ್ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ನ.8 ಕೊನೆ ದಿನವಾಗಿದ್ದು, ನ.9ರಂದು ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಅಣಕು ಫಲಿತಾಂಶ ನಂತರ ನ.9ರಿಂದ 12ರ ಬೆಳಿಗ್ಗೆ 11ಗಂಟೆವರೆಗೆ ಅಗತ್ಯಬಿದ್ದರೆ ಆಪ್ಷನ್ಸ್ ಬದಲಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಅದರ ನಂತರ ಅಂದೇ ಸಂಜೆ 6 ಗಂಟೆಗೆ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು (students)ತಮ್ಮ ಪೋಷಕರ ಜತೆ ಚರ್ಚಿಸಿ, ಸೂಕ್ತವಾದ ಛಾಯ್ಸ್ ದಾಖಲಿಸಲು ನ.13ರಿಂದ 14ರವರೆಗೆ ಅವಕಾಶ ಇರುತ್ತದೆ. ಛಾಯ್ಸ್-1 ಮತ್ತು 2 ಅನ್ನು ಆಯ್ಕೆ ಮಾಡಿದವರು ಶುಲ್ಕ ಪಾವತಿ ಮಾಡಬೇಕು. ಛಾಯ್ಸ್-1 ದಾಖಲಿಸಿದವರು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ನ.16ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ. ಈ ಕೋರ್ಸ್‌ಗಳ ಸೀಟ್ ಮ್ಯಾಟ್ರಿಕ್ಸ್ ಕೂಡ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಪಿಜಿ ಆಯುಷ್-2024 ಮೊದಲ ಸುತ್ತು:
ಪಿಜಿ ಆಯುಷ್-2024 ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ನ.8ರ ಮಧ್ಯಾಹ್ನ 1ಗಂಟೆವರೆಗೆ ಆಪ್ಷನ್ಸ್ ದಾಖಲಿಸಿಕೊಳ್ಳಬಹುದು. ಅಂದೇ ಸಂಜೆ 8 ಗಂಟೆಗೆ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ನ.11ರ ಬೆಳಿಗ್ಗೆ 11ರವರೆಗೆ ಆಪ್ಷನ್ಸ್ ಬದಲಿಸಿಕೊಳ್ಳಲು ಅವಕಾಶ ನೀಡುತ್ತಿದ್ದು, ಅಂದೇ ಸಂಜೆ 6ಗಂಟೆಗೆ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗತ್ತದೆ ಎಂದು ಪ್ರಸನ್ನ ಅವರು ತಿಳಿಸಿದ್ದಾರೆ.
ಪೋಷಕರ ಜತೆ ಚರ್ಚಿಸಿ, ನ.11ರಿಂದ 12ರವರೆಗೆ ಛಾಯ್ಸ್ ದಾಖಲಿಸಬೇಕು. ನಂತರ ಶುಲ್ಕ ಪಾವತಿಸಿ ಕಾಲೇಜಿಗೆ ವರದಿ ಮಾಡಿಕೊಳ್ಳಲು ನ.14ರವರೆಗೆ ಅವಕಾಶ ಇರುತ್ತದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್‌ಸೈಟ್ ಗೆ ಭೇಟಿ ನೀಡಬೇಕು ಎಂದಿದ್ದಾರೆ.