ಸಿಡ್ನಿ: ವಿಶ್ವದ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಕೋವಿಡ್-19 ಲಸಿಕೆ ಪಡೆಯದೆ ಇದ್ದ ಪರಿಣಾಮ ಆಸ್ಟ್ರೇಲಿಯಾ ಸರ್ಕಾರ ಜೊಕಾವಿಕ್ ವೀಸಾವನ್ನು ಎರಡನೇ ಬಾರಿ ರದ್ದು ಪಡಿಸಿದೆ. ಇದರಿಂದಾಗಿ ಜೊಕೊವಿಕ್ ಇನ್ನೂ 3 ವರ್ಷ ಆಸ್ಟ್ರೇಲಿಯಾಗೆ ಕಾಲಿಡುವಂತಿಲ್ಲ.
Advertisement
ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾನ್‍ಸ್ಲಾಂ ಟೂರ್ನಿಯಲ್ಲಿ ಭಾಗವಹಿಸಲು ಜೊಕೊವಿಕ್ ಆಸ್ಟ್ರೇಲಿಯಾಗೆ ಬಂದಿಳಿದಿದ್ದರು. ಈ ವೇಳೆ ಕೋವಿಡ್ ನಿಯಮದ ಪ್ರಕಾರ ಲಸಿಕೆ ಪಡೆದಿರಬೇಕಿತ್ತು ಆದರೆ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಲಸಿಕೆ ಪಡೆದಿರಲಿಲ್ಲ. ಹಾಗಾಗಿ ವಿಮಾನ ನಿಲ್ದಾಣದಲ್ಲಿ ಅವರ ವೀಸಾವನ್ನು ಆಸ್ಟ್ರೇಲಿಯಾ ಸರ್ಕಾರ ಮೊದಲ ಬಾರಿಗೆ ರದ್ದು ಪಡಿಸಿತ್ತು. ಆ ಬಳಿಕ ವೈದ್ಯಕೀಯ ಅನುಮತಿ ಪಡೆದು ಆಸ್ಟ್ರೇಲಿಯಾ ಪ್ರವೇಶಿಸಿದ್ದ ಜೊಕೊವಿಕ್‍ಗೆ ಮತ್ತೊಮ್ಮೆ ಹಿನ್ನಡೆ ಯಾಗಿದೆ. ಆಸ್ಟ್ರೇಲಿಯಾ ಸರ್ಕಾರ ಎರಡನೇ ಬಾರಿ ಜೊಕೊವಿಕ್ ವೀಸಾವನ್ನು ರದ್ದು ಪಡಿಸಿ 3 ವರ್ಷಗಳ ವರೆಗೆ ಆಸ್ಟ್ರೇಲಿಯಾಕ್ಕೆ ಪ್ರವೇಶ ನಿಷೇಧಿಸಿದೆ. ಹಾಗಾಗಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಕ್ ಪಾಲ್ಗೊಳ್ಳುವಿಕೆಯ ಮೇಲೆ ಅನುಮಾನದ ತೂಗುಗತ್ತಿ ನೇತಾಡುತ್ತಿದೆ.
Advertisement
ಜೊಕೊವಿಕ್ ವೀಸಾ ರದ್ದು ಪಡಿಸಿದ ಬಗ್ಗೆ ಸ್ಪಷ್ಟತೆ ನೀಡಿದ ಆಸ್ಟ್ರೇಲಿಯಾದ ಸಚಿವ ಅಲೆಕ್ಸ್ ಹ್ವಾಕೆ, ಇದೀಗ ಎರಡನೇ ಬಾರಿ ಟೆನಿಸ್ ಆಟಗಾರ ಜೊಕೊವಿಕ್ ಅವರ ವೀಸಾವನ್ನು ಇಂದು ರದ್ದು ಪಡಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
Advertisement
Australia canceled Novak Djokovic's visa for a second time, effectively ending his bid for a record 21st Grand Slam title at the #AusOpen https://t.co/tPmyhQiPHd pic.twitter.com/wyGO0IYgGi
— Reuters (@Reuters) January 14, 2022
Advertisement
ಜನವರಿ 17 ರಿಂದ ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿ ಆರಂಭಗೊಳ್ಳಲಿದೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾನ್‍ಸ್ಲಾಂ ಟೂರ್ನಿಯ ನಿಯಮದ ಪ್ರಕಾರ ಲಸಿಕೆ ಪಡೆದರಷ್ಟೇ ಆಡಲು ಅವಕಾಶವಿದೆ. ಆದರೆ ಜೊಕೊವಿಕ್ ಲಸಿಕೆ ಪಡೆಯಲು ಬಯಸುತ್ತಿಲ್ಲ. ಇದೀಗ ಟೂರ್ನಿ ಆರಂಭಕ್ಕೂ ಮೊದಲು ವಿವಾದ ಕೊನೆಗೊಳ್ಳದಿದ್ದರೆ ವಿಶ್ವ ನಂ.1 ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾ ಓಪನ್ ಆಡುವುದು ಅನುಮಾನವಾಗಿದೆ. ಈಗಾಗಲೇ ಜೊಕೊವಿಕ್ ಅವರ ಪಂದ್ಯದ ವೇಳಾಪಟ್ಟಿ ಪ್ರಕಟಗೊಂಡಿದೆ. 9 ಬಾರಿಯ ಚಾಂಪಿಯನ್ ಜೊಕೊವಿಕ್ ಮೊದಲ ಸುತ್ತಿನಲ್ಲಿ ಜ.17 ರಂದು ಸರ್ಬಿಯಾದ ಮಿಯೊಮಿರ್ ಕೆಮನೊವಿಚ್ ವಿರುದ್ಧ ಆಡಬೇಕಿದೆ.
ಜೊಕೊವಿಕ್ ಇದುವರೆಗೂ 20 ಟೆನಿಸ್ ಗ್ರ್ಯಾನ್‍ಸ್ಲಾಂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಜೊತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅದ್ಭುತ ದಾಖಲೆ ಹೊಂದಿರುವ ಜೊಕೊವಿಕ್ ಈ ಬಾರಿ ಮತ್ತೊಮ್ಮೆ ಪ್ರಶಸ್ತಿಗೆ ಮುತ್ತಿಕ್ಕುವ ಮೂಲಕ 21ನೇ ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಎತ್ತಿಹಿಡಿಯುವ ತವಕದಲ್ಲಿದ್ದರು. ಆದರೆ ಇದೀಗ ಈ ವಿವಾದದಿಂದಾಗಿ ಅವರ ಆ ಕನಸಿಗೆ ಹಿನ್ನಡೆಯಾಗಿದೆ.
ಯಾಕೆ ಕಠಿಣ ನಿಯಮ?
ಆಸ್ಟ್ರೇಲಿಯಾಕ್ಕೆ ಬರುವವರಿಗೆ ಲಸಿಕೆ ಕಡ್ಡಾಯ ಮಾಡಲಾಗಿದೆ. ಲಸಿಕೆ ಪಡೆಯದವರಿಗೆ ವೀಸಾ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಮೊದಲೇ ಪ್ರಕಟಿಸಿತ್ತು. ಹೀಗಿದ್ದರೂ ಜೊಕೊವಿಕ್ ಆಸ್ಟ್ರೇಲಿಯಾದ ವೀಸಾ ಸಿಕ್ಕಿತ್ತು. ಈ ವಿಚಾರ ತಿಳಿದ ಆಸ್ಟ್ರೇಲಿಯಾದ ಜನತೆ ಬಡವರಿಗೆ ಒಂದು ನಿಯಮ, ಶ್ರೀಮಂತರಿಗೆ ಒಂದು ನಿಯಮ ಎಷ್ಟು ಸರಿ ಎಂದು ಖಾರವಾಗಿ ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಜನಾಕ್ರೋಷ ಹೆಚ್ಚಾಗುತ್ತಿದ್ದಂತೆ ಸರ್ಕಾರ ಈಗ ವೀಸಾವನ್ನೇ ರದ್ದು ಮಾಡಿದೆ.