ಬೆಂಗಳೂರು: ಮಹಿಳಾ ಆಯೋಗದಿಂದ (Women’s Commission) ಸ್ವೀಕಾರವಾದ ದೂರುಗಳನ್ನು 7-8 ಗಂಟೆಗಳೊಳಗೆ ನೋಂದಣಿಯಾಗಿ ತನಿಖೆ (Investigation) ಪ್ರಾರಂಭಿಸಬೇಕೆಂದು ಡಿಜಿ ಅವರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಸಿಎಂ ಶುಕ್ರವಾರ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಆಯೋಗಕ್ಕೆ ಸಮರ್ಥ ವಕೀಲರ ನೇಮಕ ಮಾಡಲಾಗುವುದು. ನಿರ್ಭಯ ಯೋಜನೆಯಡಿ ಜಾರಿ ಮಾಡಿರುವ ಕಾನೂನಿನ ಬಗ್ಗೆ ಪುರುಷರಿಗೆ ಜಾಗೃತಿ ಮೂಡಿಸುವುದು ಅಗತ್ಯ. ಅನ್ಯಾಯ ಆಗುವ ಮೂಲದಿಂದಲೇ ಅರಿವು ಮೂಡಿಸಬೇಕು ಎಂದರು.
Advertisement
Advertisement
ಮಹಿಳಾ ಆಯೋಗಕ್ಕೆ ಇನ್ನಷ್ಟು ಅಧಿಕಾರದ ಜೊತೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಲು ಸಿದ್ಧವಿದೆ. ಇದಲ್ಲದೆ ಕಲ್ಯಾಣ ಕೆಲಸಗಳನ್ನು ಸರ್ಕಾರ ಕೈಗೊಂಡಿದೆ. ಮಹಿಳೆಯರ ಪೌಷ್ಟಿಕತೆ ಹೆಚ್ಚಿಸಲು ಕ್ರಮ ವಹಿಸಿದೆ. ಕೆಲಸ ಮಾಡುವ ಗರ್ಭಿಣಿಯರಿಗೆ ವಿಶೇಷ ಸ್ಥಳ ನಿಗದಿ, 5 ಪ್ರಮುಖ ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರಿಗೆ ಹಾಸ್ಟೆಲ್, ಐಐಎಂ ತರಬೇತಿ, ಎಲಿವೆಟ್ ಯೋಜನೆಯಡಿ ಸ್ಟಾರ್ಟ್ಅಪ್‌ಗೆ ಅವಕಾಶ, ಸ್ತ್ರೀಶಕ್ತಿ ಸಂಘಗಳಿಗೆ ಸ್ತ್ರೀ ಸಾಮಾರ್ಥ್ಯ ಯೋಜನೆ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.
Advertisement
5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ ನೀಡುವ ಕೆಲಸ ಮಾಡಲಾಗುತ್ತಿದೆ. 7,500 ಸ್ತ್ರೀಶಕ್ತಿ ಸಂಘಗಳಿವೆ. ಅಮೃತ ಯೋಜನೆಯಡಿ 1 ಲಕ್ಷ ರೂ. ನೀಡಿ ಸ್ವಯಂ ಉದ್ಯೋಗ ನೀಡಲಾಗಿದೆ. ಮಹಿಳೆಯರಿಗೆ ವಿಶೇಷ ಕ್ಲಾಸ್ ರೂಮ್ ನಿರ್ಮಾಣ, ಆಶಾ ಕಾರ್ಯಕರ್ತೆಯರು ಹಾಗೂ ಅಡುಗೆ ಮಾಡುವವರ ಗೌರವಧನ ಹೆಚ್ಚಳ ಮಾಡಿದ್ದೇವೆ. ಎನ್.ಪಿ.ಎಸ್ ಯೋಜನೆ ಮರುಪ್ರಾರಂಭವಾಗಿದೆ. ಈ ವರ್ಷ 4,000 ಹೊಸ ಅಂಗನವಾಡಿ ನಿರ್ಮಾಣವಾಗುತ್ತಿದೆ. ಮಹಿಳೆಯರಿಗೆ ಎಲ್ಲಾ ಹಂತದ ನೆರವು ಒದಗಿಸಲಾಗುತ್ತಿದೆ. ಮಹಿಳೆಯರು ಸಬಲರಾದರೆ ದೇಶ ಸಬಲವಾಗುತ್ತದೆ ಎಂದರು.
Advertisement
ನಿರ್ಭಯ ಅಡಿ ಬೆಂಗಳೂರಿನಲ್ಲಿ 7,500 ಕೃತಕ ಬುದ್ಧಿಮತ್ತೆಯ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ರಾತ್ರಿ ವೇಳೆ ಕೆಲಸ ಮುಗಿಸಿ ಬರುವ ಮಹಿಳೆಯರಿಗೆ ಇದು ಸುರಕ್ಷತೆ ಒದಗಿಸುತ್ತದೆ. ಮಹಿಳಾ ಪೊಲೀಸ್ ಒಳಗೊಂಡ ಪಿಂಕ್ ಹೊಯ್ಸಳ ವಾಹನಗಳು ಮಹಿಳೆಯರನ್ನು ರಕ್ಷಿಸಲು ಸಂಚರಿಸುತ್ತವೆ. ಅಲ್ಪಾವಧಿ ಸ್ವಯಂ ರಕ್ಷಣಾ ತರಬೇತಿಯನ್ನು ಶಾಲಾ ಕಾಲೇಜುಗಳ ಹಾಸ್ಟೆಲ್‌ಗಳಲ್ಲಿ ನೀಡಲಾಗುತ್ತಿದೆ ಎಂದರು.
ಉಳಿತಾಯ ಸಂಸ್ಕೃತಿ:
ವಿಶ್ವದಲ್ಲಿ ಎಲ್ಲಾ ರಾಷ್ಟ್ರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಆದರೆ ಭಾರತದಲ್ಲಿ ಮಹಿಳೆಯರ ಉಳಿತಾಯ ಸಂಸ್ಕೃತಿಯಿಂದಾಗಿ, ಅಡುಗೆ ಮನೆಯಲ್ಲಿ ಜೀರಿಗೆ ಡಬ್ಬದಲ್ಲಿ ಇಡುವ ಹಣವೇ ದೇಶದ ಆರ್ಥಿಕತೆ ರಕ್ಷಣೆ ಮಾಡಿದೆ. ತಾಯಿ ಗರ್ಭದಿಂದ ಭೂತಾಯಿ ಗರ್ಭದವರೆಗೆ ಇರುವ ನಮ್ಮ ಬದುಕಿನಲ್ಲಿ ಮಹಿಳೆಯರಿಗೆ ಗೌರವ, ಸಮಾನತೆ ನೀಡಬೇಕು. ದೇಶ ಕಟ್ಟಲು ತಾಯಂದಿರನ್ನು ಸಶಕ್ತ ಮಾಡುವುದು ಬಹಳ ಮುಖ್ಯ. ಈ ಅರಿವಿನಿಂದ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಮಹಿಳೆಯರ ಗೌರವ ಪುನಃ ಸ್ಥಾಪನೆಯಾಗಬೇಕು:
ಒಂದೆಡೆ ಕಾನೂನು ರಚನೆ, ಶಿಸ್ತಿನ ಕ್ರಮ ತೆಗೆದುಕೊಳ್ಳುವುದು, ಆಯೋಗ ಕೆಲಸ ಮಾಡುವುದು ಇಂದಿನ ದಿನಗಳಲ್ಲಿ ಅತ್ಯಂತ ಅವಶ್ಯಕ. ಅದರ ಜೊತೆಗೆ ಸಮಾಜದಲ್ಲಿ ಮೌಲ್ಯಗಳ ಪರಿವರ್ತನೆ ಆಗುವುದು ಅಗತ್ಯವಿದೆ. ಸಮಾಜದಲ್ಲಿ ಮೊದಲು ಮಹಿಳೆಯರಿಗೆ ಸಿಗುತ್ತಿದ್ದ ಗೌರವ ಪುನಃ ಸ್ಥಾಪನೆಯಾಗಬೇಕು. ಇದಾದರೆ ಸಮಾನತೆ ಅವಕಾಶಗಳು ತೆರೆದುಕೊಳ್ಳುತ್ತವೆ. ಈ ಕೆಲಸವನ್ನು ಆಯೋಗ ಮಾಡಬೇಕು ಎಂದರು.
ಕಠಿಣ ಕಾನೂನು ಕ್ರಮ:
ಎಲ್ಲಾ ಸಮಾಜದಲ್ಲಿ ವ್ಯಾಗ್ರ ಚಿಂತನೆಗಳಿರುವ ವ್ಯಕ್ತಿಗಳಿದ್ದಾರೆ. ಅವರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಅಮಾನವೀಯವಾಗಿ ಮಹಿಳೆಯರ ಮೇಲೆ ಹಲ್ಲೆ, ಕೊಲೆ, ದೌರ್ಜನ್ಯ ಅತ್ಯಾಚಾರ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ರಾಕ್ಷಸ ಕೃತ್ಯ. ಉಗ್ರ ಕಾನೂನು ಇದ್ದರೂ, ಶಿಕ್ಷೆಗೆ ಒಳಪಟ್ಟಿದ್ದರೂ, ಆದರೆ ಆ ಕಾನೂನು ಅಪರಾಧಗಳನ್ನು ತಡೆಹಿಡಿಯಲು ಸಫಲವಾಗಿಲ್ಲ. ಸಾಮಾಜಿಕ ಚಿಂತನೆ ಬದಲಾವಣೆಯ ಜೊತೆಗೆ ಕಠಿಣ ಕಾನೂನು ಕ್ರಮ ಕೂಡ ಅವಶ್ಯಕ. ಮಹಿಳಾ ಆಯೋಗಕ್ಕೆ ಶಕ್ತಿ ತುಂಬುವ ಕೆಲಸ ಆಗಬೇಕು ಎಂದರು. ಇದನ್ನೂ ಓದಿ: ಹಿರಿಯ ನಟ ದ್ವಾರಕೀಶ್‌ಗೆ ಗೌರವ ಡಾಕ್ಟರೇಟ್
ಜನ್ಮಪೂರ್ವದ ಸಂಬಂಧ:
ಈ ಭೂಮಿ ಮೇಲೆ ಜನ್ಮ ಪೂರ್ವದ ಸಂಬಂಧ ತಾಯಿಯೊಂದಿಗೆ ಇರುತ್ತದೆ. ತಾಯಿತನ ಎಲ್ಲಕ್ಕಿಂತ ಶ್ರೇಷ್ಠ. ತಾಯಿಯ ಪ್ರೀತಿ ಮಿತಿ ಇಲ್ಲದ್ದು, ನೂರಕ್ಕೆ ನೂರು ಶುದ್ಧವಾಗಿರುತ್ತದೆ. ಹೀಗಾಗಿ ಹೆಣ್ಣು ಮಕ್ಕಳು ಶ್ರೇಷ್ಠ ಎಂದರು.
ಸಮಾನತೆ:
ಹೆಣ್ಣಿಗೆ ನಿಸರ್ಗ, ಪುರಾಣ, ಇತಿಹಾಸ ದೊಡ್ಡ ಸ್ಥಾನ ಕೊಟ್ಟಿದ್ದರೂ ಸಮಾಜ ಕೊಡುತ್ತಿಲ್ಲ. ಸಮಾಜ ಯಾವಾಗ ಮಹಿಳೆಯರಿಗೆ ಗೌರವ, ಸಮಾನತೆ ಕೊಡುತ್ತದೆಯೋ ಅಂದು ಮಹಿಳೆಗೆ ಸಮಾನ ಅವಕಾಶಗಳು ದೊರೆಯುತ್ತವೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಶಾಸಕಿ ರೂಪಾಲಿ ನಾಯಕ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಂಜುಳಾ ಹಾಗೂ ಮತ್ತಿತರರು ಹಾಜರಿದ್ದರು. ಇದನ್ನೂ ಓದಿ: ಗುತ್ತಿಗೆದಾರರ ಸಂಘದಲ್ಲಿ ಒಳ ರಾಜಕೀಯ – ಇಕ್ಕಟ್ಟಿನಲ್ಲಿ ಇಂಧನ ಇಲಾಖೆ