ಬೆಂಗಳೂರು: ಹಸುಗಳ ಮೇಲೆ ಕ್ರೌರ್ಯ ಮೆರೆಯುತ್ತಿರುವ ವ್ಯಕ್ತಿಗಳ ಹಿನ್ನಲೆಗಳನ್ನು ಪರಿಶೀಲನೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ತಿಳಿಸಿದ್ದಾರೆ.
ಹೊನ್ನಾವರದಲ್ಲಿ ಹಸು ಕೊಂದಿರುವ ಪ್ರಕರಣ ಮತ್ತು ಚಾಮರಾಜಪೇಟೆ ಹಸು ಕೆಚ್ಚಲು ಕೊಯ್ದ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಘಟನೆ ಆಗದಂತೆ ಏನಾದರೂ ಉಪಾಯ ಕಂಡು ಹಿಡಿಯಬೇಕಾಗಿದೆ. ಇಂದು ಬೆಳಗ್ಗೆ ಹಿರಿಯ ಅಧಿಕಾರಿಗಳ ಜೊತೆ ಗಂಭೀರವಾಗಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಯಾರು ಈ ರೀತಿಯ ಮನಸ್ಥಿತಿಯವರು ಇದ್ದಾರೋ ಅಂತಹವರನ್ನ ಪತ್ತೆ ಹಚ್ಚಬೇಕು. ಇಂತಹ ಕೃತ್ಯಗಳು ಸಂಘಟನೆಯಿಂದ ಮಾಡ್ತಾ ಇರೋದಾ? ಏಕಾಂಗಿಯಾಗಿ ಮಾಡಿರೋದಾ? ಯಾರಾದ್ರು ಪ್ರಚೋದನೆಯಿಂದ ಆಗ್ತಿದೆಯಾ? ಎಂದು ತನಿಖೆಗೆ ಸೂಚನೆ ನೀಡಿದ್ದೇನೆ. ಇದರ ಬಗ್ಗೆ ಪರಿಶೀಲನೆ ಮಾಡಿ ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾಡ್ತೀವಿ ಎಂದು ತಿಳಿಸಿದರು.ಇದನ್ನೂ ಓದಿ: ಬ್ಯಾಂಕ್-ATMಗಳು ಸರ್ಕಾರ ಕೊಟ್ಟ ಮಾರ್ಗಸೂಚಿ ಪಾಲನೆ ಮಾಡಬೇಕು – ಪರಮೇಶ್ವರ್
ಇನ್ನೂ ಇದೇ ವೇಳೆ, ಸೆಂಟ್ರಲ್ ಜೈಲು ವಿಭಜನೆ ಕುರಿತು ಮಾತನಾಡಿ, ವಿಭಜನೆ ಮಾಡುವ ಪ್ರಸ್ತಾಪ ಸದ್ಯ ಸರ್ಕಾರದ ಮುಂದೆ ಇಲ್ಲ. ಯಾವುದೇ ಪ್ರಪೋಸಲ್ ಇಲ್ಲ. ಆದರೆ ಬಂಧಿಖಾನೆಗಳನ್ನು ಬಿಗಿ ಮಾಡಬೇಕು ಎಂದು ನಿರ್ಧರಿಸಿದ್ದೇವೆ. ಸೆಕ್ಯುರಿಟಿಯನ್ನು ಮತ್ತಷ್ಟು ಜಾಸ್ತಿ ಮಾಡಬೇಕು ಎಂದು ಚರ್ಚೆ ಆಗಿದೆ. ಬಂಧಿಖಾನೆಗಳಿಗೆ ಸಿಬ್ಬಂದಿ ನೇಮಕ ಮಾಡಿ ಬಹಳ ವರ್ಷಗಳು ಆಗಿವೆ. ಹೀಗಾಗಿ ನೇಮಕಾತಿಗೆ ಈಗಾಗಲೇ ಪ್ರಪೋಸಲ್ ಕಳಿಸಿದ್ದೇವೆ. ಬಂಧೀಖಾನೆಗಳನ್ನು ಮತ್ತಷ್ಟು ಬಿಗಿ ಮಾಡುವ ಸಂಬಂಧ ಗೃಹ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಇದೇ ವೇಳೆ ಮೈಕ್ರೋ ಫೈನಾನ್ಸ್ ಬಡ್ಡಿ ದಬ್ಬಾಳಿಕೆಗೆ ಕಡಿವಾಣ ಹಾಕಲು ಕಾನೂನು ತರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ತರುವ ವಿಚಾರ ನನ್ನ ವ್ಯಾಪ್ತಿಗೆ ಬರೋದಿಲ್ಲ. ಈ ವಿಷಯ ಆರ್ಥಿಕ ಇಲಾಖೆಗೆ ಬರುತ್ತದೆ. ನಮ್ಮ ಬಳಿ ಅನ್ಯಾಯ ಆದಾಗ ದೂರು ಕೊಟ್ಟಾಗ ಕೇಸ್ ನಮ್ಮ ಬಳಿ ಬರುತ್ತದೆ. ಆಗ ನಮ್ಮ ವ್ಯಾಪ್ತಿಗೆ ಬರುತ್ತದೆ. ಇದಕ್ಕೆ ಕಡಿವಾಣ ಹಾಕೋದು ಆರ್ಥಿಕ ಇಲಾಖೆಗೆ ವ್ಯಾಪ್ತಿಗೆ ಬರುತ್ತದೆ. ಕಾನೂನು ಮಾಡೋದು ಕಾನೂನು ಇಲಾಖೆಗೆ ಬರುತ್ತದೆ ಎಂದು ಹೇಳಿದರು.ಇದನ್ನೂ ಓದಿ: ಕೆಲಸಕ್ಕೆ ಬರಲ್ಲ ಎಂದಿದ್ದಕ್ಕೆ ಕಾರ್ಮಿಕರ ಮೇಲೆ ಮನಬಂದಂತೆ ಥಳಿತ