ಆರ್ ಡಿ ಸಂಖ್ಯೆ ಸರಿಪಡಿಸದಿದ್ದರೆ ಸಾಮಾನ್ಯ ಕೋಟಾದಲ್ಲಿ ಸೀಟು ಹಂಚಿಕೆ
ಬೆಂಗಳೂರು: ವೃತ್ತಿಪರ ಕೋರ್ಸುಗಳಿಗೆ (Professional Courses) ಪ್ರವೇಶಾತಿ ಬಯಸಿ ಸಿಇಟಿ (CET) ಬರೆದಿರುವ ಅಭ್ಯರ್ಥಿಗಳು (Candidate) ಜಾತಿ/ಆದಾಯ/ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳ ಆರ್.ಡಿ ಸಂಖ್ಯೆಯನ್ನು (RD Number) ಸರಿಪಡಿಸಿಕೊಳ್ಳದಿದ್ದರೆ ಮೀಸಲಾತಿ ಸೌಲಭ್ಯಗಳು ರದ್ದಾಗಿ, ಜನರಲ್ ಮೆರಿಟ್ ಕೋಟಾದಡಿ ಬರಲಿದ್ದಾರೆ. ಆದ್ದರಿಂದ ಕೂಡಲೇ ಕಂದಾಯ ಇಲಾಖೆಯ ಆರ್.ಡಿ ಸಂಖ್ಯೆ ಜತೆ ತಾಳೆಯಾಗುವಂತೆ ಜೂನ್ 12ರ ಬೆಳಿಗ್ಗೆ 11 ಗಂಟೆಯ ವೇಳೆಗೆ ಸೂಕ್ತ ತಿದ್ದುಪಡಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತೊಮ್ಮೆ ಹೇಳಿದೆ. ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಶುಕ್ರವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಸಿಇಟಿ ಬರೆದಿರುವ 2.6 ಲಕ್ಷ ಅಭ್ಯರ್ಥಿಗಳ ಪೈಕಿ 80 ಸಾವಿರಕ್ಕೂ ಹೆಚ್ಚು ಮಂದಿ ಆರ್.ಡಿ ಸಂಖ್ಯೆಯನ್ನು ತಪ್ಪಾಗಿ ಅರ್ಜಿಯಲ್ಲಿ ನಮೂದಿಸಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರವು ಅದರ ತಿದ್ದುಪಡಿಗೆ ಜೂನ್ 7ರಿಂದ 12ರವರೆಗೆ ಕೊನೆಯ ಅವಕಾಶ ನೀಡಿದೆ. ಆದರೂ ಇನ್ನೂ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಅರ್ಜಿಗಳಲ್ಲಿನ ದೋಷಗಳು ಹಾಗೆಯೇ ಉಳಿದುಕೊಂಡಿವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಶವ ಇಟ್ಟಿದ್ದಕ್ಕೆ ಶಾಲೆಗೆ ಬರಲು ಮಕ್ಕಳು ಹಿಂದೇಟು – ಶಾಲೆ ನೆಲಸಮ
ಇದರ ಜತೆಗೆ ಕೆಲವರು ಆದಾಯ ಪ್ರಮಾಣ ಪತ್ರದ (Income Certificate) ಬದಲು ಇಡಬ್ಲ್ಯುಎಸ್ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ಸಿಇಟಿ ನಿಯಮಗಳ ಪ್ರಕಾರ ಇದಕ್ಕೆ ಮನ್ನಣೆ ಇಲ್ಲ. ಆದ್ದರಿಂದ ಅಭ್ಯರ್ಥಿಗಳು ಪ್ರಾಧಿಕಾರದ ಪೋರ್ಟಲ್‍ನಲ್ಲಿ ಜೂನ್ 12ರ ನಿಗದಿತ ಕಾಲಮಿತಿಯೊಳಗೆ ತಿದ್ದುಪಡಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮಗಳಿಗೆ ವಿದ್ಯಾರ್ಥಿಗಳೇ ಹೊಣೆಗಾರರಾಗಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಆರ್‌ಡಿ ಸಂಖ್ಯೆಗಳು ತಾಳೆಯಾಗದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಈಗಾಗಲೇ ಈ ಸಂಖ್ಯೆಗಳನ್ನು ಕಂದಾಯ ಇಲಾಖೆಯ ಆರ್‌ಡಿ ಸಂಖ್ಯೆ ಜತೆ ನಮೂದಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದ್ದರಿಂದ ಸಂಬಂಧಿಸಿದ ಅಭ್ಯರ್ಥಿಗಳು ತಿದ್ದುಪಡಿಗೆ ನೀಡಿರುವ ಕೊನೆಯ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ. ಇದನ್ನೂ ಓದಿ: ವಿಮಾನದಲ್ಲಿ ಕುಳಿತು ಫೋನ್‌ನಲ್ಲಿ ‘ಬಾಂಬ್’ ಕುರಿತು ಸಂಭಾಷಣೆ – ದೆಹಲಿ ಏರ್‌ಪೋರ್ಟ್‌ನಲ್ಲಿ ವ್ಯಕ್ತಿ ಅರೆಸ್ಟ್