ಗುವಾಹಟಿ: “ಬೆಂಗಳೂರಿನ ಮತ್ತಿಕೆರೆಯ ಎಟಿಎಂ ನಲ್ಲಿ ಇಲಿಗಳು 12.38 ಲಕ್ಷ ರೂ. ಮೌಲ್ಯದ ನೋಟುಗಳನ್ನು ತಿಂದುಹಾಕಿವೆ” ಹೀಗೊಂದು ಬರಹದೊಂದಿಗೆ ಎಟಿಎಂನಲ್ಲಿ ಹರಿದ ನೋಟುಗಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ನಿಜವಾಗಿ ಈ ಘಟನೆ ಮತ್ತಿಕೇರೆಯಲ್ಲಿ ನಡೆದಿಲ್ಲ. ಅಸ್ಸಾಂನ ತಿನ್ಸುಕೀಯಾ ಜಿಲ್ಲೆಯಲ್ಲಿರುವ ಎಟಿಎಂನಲ್ಲಿ ಘಟನೆ ನಡೆದಿದ್ದು ಬೆಂಗಳೂರು ಎಂದು ಬರೆದು ವೈರಲ್ ಆಗಿದೆ.
ಗುವಾಹಟಿಯ ಗ್ಲೋಬಲ್ ಬಿಸನೆಸ್ ಸೊಲ್ಯುಶನ್ಸ್ ಕಂಪನಿ ಈ ಎಟಿಎಂನ್ನು ನಿರ್ವಹಣೆ ಮಾಡುತಿತ್ತು. ಮೇ 19 ರಂದು ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಸೇರಿದ ಈ ಎಟಿಎಂ ಮಶಿನ್ ಗೆ 29 ಲಕ್ಷ ರೂಪಾಯಿ ತುಂಬಿಸಿತ್ತು. ಆದರೆ ತಾಂತ್ರಿಕ ತೊಂದರೆಯಿಂದಾಗಿ ಎಟಿಎಂ ಮೇ 20 ರಂದು ಬಂದ್ ಆಗಿತ್ತು. ಈ ಸಮಯದಲ್ಲಿ ಇಲಿಗಳ ಗುಂಪೊಂದು ಅದು ಹೇಗೋ ಎಟಿಎಂ ಮಶಿನ್ ಒಳಗಡೆ ನುಗ್ಗಿದೆ. ಅದರಲ್ಲಿದ್ದ 29 ಲಕ್ಷ ರೂ ಗಳ ಪೈಕಿ 12.38 ಕ್ಷ ರೂ ಮೌಲ್ಯದ ನೋಟುಗಳನ್ನು ಹರಿದು ಚಿಂದಿ ಮಾಡಿವೆ.
ಜೂನ್ 11ರಂದು ಮಶಿನ್ ರಿಪೇರಿ ಮಾಡಲು ಹೋದಾಗ ಇಲಿಗಳ ಈ ಕೃತ್ಯ ಬೆಳಕಿಗೆ ಬಂದಿದೆ. ರೂ. 500 ಹಾಗೂ 2000 ರೂ. ನೋಟುಗಳು ಚಿಂದಿಯಾಗಿ ಬಿದ್ದಿದ್ದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ಅಧಿಕಾರಿಯೊಬ್ಬರು ಗುವಾಹಟಿ ಮೂಲದ ಗ್ಲೋಬಲ್ ಬಿಸಿನೆಸ್ ಸೊಲ್ಯುಶನ್ಸ್ ಕಂಪನಿ ಮೇ 19 ರಂದು ಎಟಿಎಂ ಗೆ 29 ಲಕ್ಷ ರೂ. ಮೌಲ್ಯದ 2000 ರೂ. ಹಾಗೂ 500 ರೂ. ಮೌಲ್ಯದ ನೋಟುಗಳನ್ನು ತುಂಬಿಸಿತ್ತು. ಅದರಲ್ಲಿ 12,38,000 ರೂ. ಮೌಲ್ಯದ ನೋಟುಗಳನ್ನು ಇಲಿಗಳು ಚಿಂದಿ ಮಾಡಿವೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಕುರಿತಂತೆ ಹಲವರಲ್ಲಿ ಈ ಸಂಶಯ ವ್ಯಕ್ತವಾಗಿದೆ. ಈ ಕುರಿತಂತೆ ತನಿಖೆ ನಡೆಸುವಂತೆ ತಿನ್ಸುಕಿಯಾ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಮೇ 20 ರಿಂದ ಜೂನ್ 11 ರ ವರೆಗೆ ಸಾಕಷ್ಟು ಸಮಯಾವಕಾಶ ಇದ್ದು ಯಾಕೆ ಎಟಿಎಂ ರಿಪೇರಿಗೆ ಇಷ್ಟು ಕಾಲವಲಾಶ ಬೇಕಾಯಿತು ಎಂದು ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ.