ಮೈಸೂರು: ಸಾಮಾನ್ಯವಾಗಿ ರಸ್ತೆಯಲ್ಲಿ ಹಣ ಬಿದ್ದಿದ್ದರೆ ಅದನ್ನು ಎತ್ತಿಕೊಂಡು ಹೋಗುತ್ತಾರೆ. ಆದರೆ ಈಗ ರಸ್ತೆಯಲ್ಲಿ ಹಣ ಬಿದ್ದಿದ್ದರೆ ಜನ ಭಯಭೀತರಾಗುತ್ತಿದ್ದಾರೆ. ನೋಟು ಮೂಲಕ ಕೊರೊನಾ ವೈರಸ್ ಹರಡಲಾಗುತ್ತಿದೆ ಎಂಬ ವದಂತಿ ಹಬ್ಬಿರುವ ಕಾರಣ ಜನ ರಸ್ತೆಯಲ್ಲಿ ಹಣ ಬಿದ್ದಿದ್ದರೆ ಅದನ್ನು ಕಂಡು ಹೆದರುತ್ತಿದ್ದಾರೆ.
ಇದರಿಂದ ರಸ್ತೆಯಲ್ಲಿ ಬಿದ್ದಿದ್ದ ನೋಟಿಗೆ ಜನ ಬೆಂಕಿ ಇಟ್ಟಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿ ಈ ಘಟನೆ ನಡೆದಿದ್ದು, ಮೈಲಾರಿ ಹೋಟೆಲ್ ಬಳಿ ಬಿದ್ದಿದ್ದ 100ರ ಹೊಸ ನೋಟು ನೋಡಿ ಆತಂಕಗೊಂಡ ಜನ, ತಕ್ಷಣ ಅದಕ್ಕೆ ಸ್ಯಾನಿಟೈಸರ್ ಹಾಕಿ ಬೆಂಕಿ ಹಚ್ಚಿದ್ದಾರೆ. ಇದನ್ನೂ ಓದಿ: ಇದ್ದಕ್ಕಿದ್ದಂತೆ ರಸ್ತೆ ಮೇಲೆ ನೋಟುಗಳ ಮಳೆ
Advertisement
ಎರಡು ದಿನಗಳ ಹಿಂದೆಯೇ ಮೈಸೂರಿನ ಹೆಬ್ಬಾಳ್‍ನಲ್ಲೂ ಹೀಗೆ ಕಿಡಿಗೇಡಿಗಳು 50 ರೂಪಾಯಿ ನೋಟು ಬಿಸಾಕಿ ಹೋಗಿದ್ದರು. ಕರ್ನಾಟಕ ಮಾತ್ರವಲ್ಲದೇ ಮಧ್ಯಪ್ರದೇಶದ ಇಂಧೋರ್‍ನ ಖಾತಿರ್ಪುರ ಪ್ರದೇಶದ ಧರ್ಮಶಾಲಾದಲ್ಲಿ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ರಸ್ತೆಯಲ್ಲಿ ನೋಟುಗಳ ಸುರಿಮಳೆಗೈದಿದ್ದ ಘಟನೆ ನಡೆದಿತ್ತು.
Advertisement
ಮೊದಲೇ ಕೊರೊನಾ ವೈರಸ್ ಭೀತಿಯಿಂದ ತತ್ತರಿಸಿರುವ ಇಂಧೋರ್ ನಲ್ಲಿ ಈ ರೀತಿ ಘಟನೆ ನಡೆದಿರುವುದು ಆತಂಕವನ್ನು ಸೃಷ್ಟಿಸಿದೆ. ಅಪರಿಚಿತ ವ್ಯಕ್ತಿಯೋರ್ವ ರಸ್ತೆ ಮೇಲೆ 500, 200, 100, 50 ಹಾಗೂ 10 ರೂ. ಮುಖಬೆಲೆಯ ನೋಟುಗಳನ್ನು ಎಸೆದು ಹೋಗಿದ್ದನು. ಸಾವಿರಾರು ರೂ. ಹಣ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ ಕೊರೊನಾ ಭೀತಿಯಿಂದ ಯಾರೊಬ್ಬರು ಅದನ್ನು ತೆಗೆದುಕೊಳ್ಳುವ ಸಹಾಸಕ್ಕೆ ಮುಂದಾಗಲಿಲ್ಲ.