– ಕಲುಷಿತ ನೀರು ಸೇವಿಸಿ ಸಾವು ಪ್ರಕರಣ; ಬಿಜೆಪಿಗೆ ತರಾಟೆ
ನವದೆಹಲಿ/ಭೋಪಾಲ್: ಇಂದೋರ್‌ನಲ್ಲಿ ನೀರು ಇರಲಿಲ್ಲ ಹಾಗಾಗಿ ಕುಡಿಯೋಕೆ ವಿಷ ಹಂಚಲಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ದೇಶದ ನಂ.1 ಸ್ವಚ್ಛ ನಗರಿ ಆಗಿರುವ ಇಂದೋರ್‌ನಲ್ಲಿ ಕಲುಷಿತ ನೀರು (Contaminated Water) ಸೇವಿಸಿ 14 ಮಂದಿ ಸಾವನ್ನಪ್ಪಿದ್ದ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಆಡಳಿತ ಗಾಢ ನಿದ್ರೆಯಲ್ಲಿದೆ. ಇಂದೋರ್‌ನಲ್ಲಿ ನೀರು ಇರಲಿಲ್ಲ, ಆದ್ದರಿಂದ ವಿಷ ಹಂಚಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
इंदौर में पानी नहीं, ज़हर बंटा और प्रशासन कुंभकर्णी नींद में रहा।
घर-घर मातम है, गरीब बेबस हैं – और ऊपर से BJP नेताओं के अहंकारी बयान। जिनके घरों में चूल्हा बुझा है, उन्हें सांत्वना चाहिए थी; सरकार ने घमंड परोस दिया।
लोगों ने बार-बार गंदे, बदबूदार पानी की शिकायत की – फिर भी…
— Rahul Gandhi (@RahulGandhi) January 2, 2026
ಈಗ ಅಲ್ಲಿನ ಪ್ರತಿ ಮನೆಯಲ್ಲೂ ಶೋಕ ಮಡುಗಟ್ಟಿದೆ. ಬಡವರು ಅಸಹಾಯಕರಾಗಿದ್ದಾರೆ. ಆದ್ರೆ ಬಿಜೆಪಿ ನಾಯಕರು (BJP Leaders) ದುರಹಂಕಾರದ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಮನೆ ದೀಪ ಆರಿಹೋದವರಿಗೆ ಸಾಂತ್ವನ ಹೇಳುವುದನ್ನ ಬಿಟ್ಟು, ಧಿಮಾಕಿನ ಹೇಳಿಕೆಗಳನ್ನ ನೀಡುತ್ತಿದೆ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಸೇವನೆಯಿಂದ ಸಾವಿನ ಸಂಖ್ಯೆ 14ಕ್ಕೆ ಏರಿಕೆ – 200 ಮಂದಿ ಆಸ್ಪತ್ರೆಗೆ ದಾಖಲು
ಪ್ರಶ್ನೆಗಳ ಸುರಿಮಳೆ
ಕಲುಷಿತ ಹಾಗೂ ದುರ್ವಾಸನೆ ಬೀರುವ ನೀರಿನ ಬಗ್ಗೆ ಜನರು ಪದೇ ಪದೇ ದೂರು ನೀಡುತ್ತಾ ಬಂದಿದ್ದರು. ಆದ್ರೆ ಸರ್ಕಾರ ಅವರ ದೂರುಗಳನ್ನ ಏಕೆ ಆಲಿಸಿಲ್ಲ? ಕುಡಿಯೋ ನೀರಿನೊಂದಿಗೆ ಕೊಳಚೆ ನೀರು ಹೇಗೆ ಬೆರೆತುಹೋಯಿತು? ಸಕಾಲದಲ್ಲಿ ಏಕೆ ನೀರು ಸರಬರಾಜು ಮಾಡಲಿಲ್ಲ? ಜವಾಬ್ದಾರಿಯುತ ಅಧಿಕಾರಿಗಳು ಮತ್ತು ನಾಯಕರ ವಿರುದ್ಧ ಕ್ರಮ ಕೈಗೊಳ್ಳೋದು ಯಾವಾಗ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಗೆ ಮಹತ್ವದ ಮೈಲುಗಲ್ಲು

ಬಡವರು ಸತ್ತಾಗಲೆಲ್ಲ ಮೋದಿ ಮೌನ
ಇವು ಕ್ಷುಲ್ಲಕ ಪ್ರಶ್ನೆಗಳಲ್ಲ, ಪ್ರತಿಯೊಬ್ಬರ ಹೊಣೆಗಾರಿಕೆಯನ್ನು ಸೂಚಿಸುತ್ತದೆ. ಶುದ್ಧ ನೀರು ಪೂರೈಕೆ ಔದಾರ್ಯವಲ್ಲ, ಅದು ಬದುಕುವ ಹಕ್ಕು. ಆದ್ರೆ ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ನಿರ್ಲಕ್ಷ್ಯ ಆಡಳಿತ ಜನರ ಹಕ್ಕುಗಳನ್ನ ಸಂಪೂರ್ಣ ನಾಶಪಡಿಸಿದೆ. ಮಧ್ಯಪ್ರದೇಶ ಈಗ ದುರಾಡಳಿತದ ಕೇಂದ್ರಬಿಂದುವಾಗಿದೆ. ಕೆಮ್ಮಿನ ಸಿರಪ್‌ನಿಂದ ಸಾವುಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಇಲಿಗಳಿಂದ ಮಕ್ಕಳ ಸಾವು, ಈಗ ಒಳಚರಂಡಿ ಕಲುಷಿತ ನೀರು ಕುಡಿದು ಸಾವು ಸಂಭವಿಸಿದೆ. ಬಡವರು ಸತ್ತಾಗಲೆಲ್ಲಾ ಮೋದಿ (Narendra Modi) ಮೌನವಾಗಿರುತ್ತಾರೆ ಎಂದು ಕುಟುಕಿದ್ದಾರೆ.
ಸಾವು 14ಕ್ಕೆ ಏರಿಕೆ
ಇಂದೋರ್‌ನ (Indore) ಭಾಗೀರಥಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 200 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, 1,400ಕ್ಕೂ ಅಧಿಕ ಜನರು ವಾಂತಿ, ಭೇದಿಯಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಸ್ವೀಟ್ ಕೊಡ್ತೀನಿ ಅಂತ ಕರೆಸಿ ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ ಮಹಿಳೆ!

ಕಳೆದ 8 ವರ್ಷಗಳಿಂದ ಇಂದೋರ್ ಭಾರತದ ಅತ್ಯಂತ ಸ್ವಚ್ಛ ನಗರವೆಂದು ಖ್ಯಾತಿ ಪಡೆದಿದೆ. ಈಗ ಅದೇ ಪ್ರದೇಶದಲ್ಲಿ ಕಲುಷಿತ ನೀರು ಸೇವನೆಯಿಂದ ಜನ ಸಾವನ್ನಪ್ಪುತ್ತಿದ್ದ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಯೋಗಾಲಯದಲ್ಲಿ ನೀರಿನ ಪರೀಕ್ಷೆ ನಡೆದಿದ್ದು, ಕಲುಷಿತ ನೀರಿನಿಂದಾಗಿ ಜನರು ಅಸ್ವಸ್ಥರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೂವರು ಸಸ್ಪೆಂಡ್, ಓರ್ವ ಅಧಿಕಾರಿ ಡಿಸ್‌ಮಿಸ್
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಅಧಿಕಾರಿಗಳನ್ನ ಅಮಾನತುಗೊಳಿಸಲಾಗಿದೆ. ಒಬ್ಬ ಅಧಿಕಾರಿಯನ್ನ ಕೆಲಸದಿಂದಲೇ ವಜಾಗೊಳಿಸಲಾಗಿದೆ. ಮೂವರು ಸದಸ್ಯರ ಸಮಿತಿಗೆ ತನಿಖೆಯ ಜವಾಬ್ದಾರಿ ನೀಡಲಾಗಿದೆ. ಈ ಮಧ್ಯೆ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ. ಇದನ್ನೂ ಓದಿ: ಜನಾರ್ದನ್ ರೆಡ್ಡಿ ಮೇಲೆ ಗುಂಡು ಹಾರಿತು, ಒಬ್ಬ ಪೆಟ್ರೋಲ್ ಬಾಂಬ್ ಎಸೆದ: ಶ್ರೀರಾಮುಲು ಗಂಭೀರ ಆರೋಪ

