– ಮುಸ್ಲಿಮರ ಹೃದಯದ ಮೇಲಿನ ಗಾಯಕ್ಕೆ ಸಣ್ಣ ಮುಲಾಮು ಹಚ್ಚಿದ್ದೇವೆ
ಕೋಲ್ಕತ್ತಾ: ಬಾಬರಿ ಮಸೀದಿ ನಿರ್ಮಿಸೋದು ಅಸಾಂವಿಧಾನಿಕ ಅಲ್ಲ ಎಂದು ಟಿಎಂಸಿ ಉಚ್ಛಾಟಿತ ಶಾಸಕ ಹುಮಾಯುನ್ ಕಬೀರ್ (Humayun Kabir) ಹೇಳಿದ್ದಾರೆ.
ಡಿ.6ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯ ಮಾದರಿಯಲ್ಲಿ ಹೊಸ ಮಸೀದಿಗೆ ತೃಣಮೂಲ ಕಾಂಗ್ರೆಸ್‌ನ ಉಚ್ಛಾಟಿತ ಶಾಸಕ ಹುಮಾಯೂನ್ ಕಬೀರ್ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಬಾಬರಿ ಮಸೀದಿ ನಿರ್ಮಿಸೋದು ಅಸಾಂವಿಧಾನಿಕ ಅಲ್ಲ. ಪೂಜಾ ಸ್ಥಳಗಳನ್ನು ನಿರ್ಮಿಸುವುದು ಸಾಂವಿಧಾನಿಕ ಹಕ್ಕು. ಹಾಗಿದ್ದ ಮೇಲೆ ಮಸೀದಿ ನಿರ್ಮಿಸೋದ್ರಲ್ಲಿ ಅಸಂವಿಧಾನಿಕವಾದ್ದದ್ದು ಏನೂ ಇಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬಂಗಾಳದಲ್ಲಿ ʻಬಾಬರಿ ಮಸೀದಿʼ ನಿರ್ಮಾಣಕ್ಕೆ ಅಡಿಪಾಯ – ʻಶಾಹಿ ಬಿರಿಯಾನಿʼ ಆತಿಥ್ಯಕ್ಕೆ 30 ಲಕ್ಷ ರೂ. ಖರ್ಚು
1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ, ಮುಸ್ಲಿಮರ ಹೃದಯದ ಮೇಲೆ ಎಂದಿಗೂ ಮಾಸದ ಗಾಯವನ್ನುಂಟು ಮಾಡಿದರು. ಆದರೆ ನಾವಿಂದು 33 ವರ್ಷಗಳ ಗಾಯಕ್ಕೆ ಈ ಮೂಲಕ ಮುಲಾಮು ಹಚ್ಚುತ್ತಿದ್ದೇವೆ. ಈ ದೇಶದಲ್ಲಿ 40 ಕೋಟಿ ಮುಸ್ಲಿಮರಿದ್ದಾರೆ. ಈ ರಾಜ್ಯದಲ್ಲಿ ನಾಲ್ಕು ಕೋಟಿ ಮುಸ್ಲಿಮರಿದ್ದಾರೆ. ನಾವು ಇಲ್ಲಿ ಒಂದೇ ಒಂದು ಮಸೀದಿಯನ್ನು ನಿರ್ಮಿಸಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
90 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಗೆಲ್ಲುತ್ತಾರೆ. ಇದನ್ನು ತಡೆಯಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ. ನಾವು ಕೋಲ್ಕತ್ತಾ ಹೈಕೋರ್ಟ್ನ ಆದೇಶಗಳನ್ನ ಪಾಲಿಸುತ್ತೇವೆ ಎಂದರಲ್ಲದೇ, ಹಿಂಸಾಚಾರ ಪ್ರಚೋದಿಸುವ ಮೂಲಕ ಕಾರ್ಯಕ್ರಮ ಅಡ್ಡಿಪಡಿಸಲು ಪಿತೂರಿಗಳು ನಡೆಯುತ್ತಿವೆ. ದಕ್ಷಿಣ ಬಂಗಾಳದ ಜಿಲ್ಲೆಗಳ ಲಕ್ಷಾಂತರ ಜನರು ಅಂತಹ ಪ್ರಯತ್ನಗಳನ್ನು ವಿಫಲಗೊಳಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಬಿಗಿ ಭದ್ರತೆಯ ನಡುವೆ, ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರದಲ್ಲಿ ಅಮಾನತುಗೊಂಡ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಮಸೀದಿಗೆ ಅಡಿಪಾಯ ಹಾಕಿದರು. ರೆಜಿನಗರ ಮತ್ತು ಹತ್ತಿರದ ಬೆಲ್ದಂಗಾ ಪ್ರದೇಶದಲ್ಲಿ ಪೊಲೀಸ್, ಆರ್‌ಎಎಫ್ ಹಾಗೂ ಗಡಿ ಭದ್ರತಾ ಪಡೆಗಳ ದೊಡ್ಡ ತುಕಡಿಗಳನ್ನೇ ಭದ್ರತೆಗೆ ನಿಯೋಜಿಸಲಾಗಿತ್ತು. ಮಸೀದಿಯ ಶಿಲಾನ್ಯಾಸ ಸಮಾರಂಭದ ವೇದಿಕೆಯಲ್ಲಿ ಹುಮಾಯೂನ್ ಕಬೀರ್, ಧರ್ಮಗುರುಗಳ ಜೊತೆಗೆ ರಿಬ್ಬನ್ ಕತ್ತರಿಸುವ ಮೂಲಕ ಶಿಲಾನ್ಯಾಸ ನೆರವೇರಿಸಿದ್ರು. ಸಮಾರಂಭದ ಸಮಯದಲ್ಲಿ, `ನಾರಾ-ಎ-ತಕ್ಬೀರ್, ಅಲ್ಲಾಹು ಅಕ್ಬರ್’ ಘೋಷಣೆಗಳು ಮೊಳಗಿದವು. ಬೆಳಿಗ್ಗೆಯಿಂದಲೇ ಸ್ಥಳದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು.
ಈ ವಾರದ ಆರಂಭದಲ್ಲಿ ಹುಮಾಯೂನ್ ಕಬೀರ್ ಅವರನ್ನು ಟಿಎಂಸಿಯಿಂದ ಅಮಾನತುಗೊಳಿಸಿತು. ಪಕ್ಷವು ಕೋಮು ರಾಜಕೀಯ ವಿಷಯ ಎಂದು ವಿವರಿಸಿದ್ದನ್ನು ಉಲ್ಲೇಖಿಸಿತ್ತು. ಕಬೀರ್ ಈ ತಿಂಗಳ ಆರಂಭದಲ್ಲಿ ಶಿಲಾನ್ಯಾಸ ನೆರವೇರಿಸುವುದಾಗಿ ಘೋಷಿಸಿದ್ದರು, ಇದು ರಾಜಕೀಯ ಟೀಕೆಗಳನ್ನು ಹುಟ್ಟುಹಾಕಿತು ಮತ್ತು ರಾಜ್ಯ ಆಡಳಿತವು ಭದ್ರತೆ ಹೆಚ್ಚಿಸುವಂತೆ ಒತ್ತಾಯಿಸಿತು. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ವಾರ್ಷಿಕೋತ್ಸವವಾದ ಡಿಸೆಂಬರ್ 6 ರಂದು ಕಬೀರ್ ಶಿಲಾನ್ಯಾಸ ಸಮಾರಂಭಕ್ಕೆ ಆಯ್ಕೆ ಮಾಡಿಕೊಂಡಿದ್ದರು.ಇದನ್ನೂ ಓದಿ: ಬಾಬರಿ ಮಸೀದಿ ನಿರ್ಮಿಸುವುದಾಗಿ ಘೋಷಿಸಿದ್ದ ತೃಣಮೂಲ ಕಾಂಗ್ರೆಸ್ ಶಾಸಕ ಸಸ್ಪೆಂಡ್

