ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಕಿಸ್ತಾನ ವಿರುದ್ಧ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಆಡದಿರುವ ತೀರ್ಮಾನ ಮಾಡುವುದು ಯುದ್ಧ ಮಾಡದೇ ಶರಣಾದಂತೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಶಶಿ ತರೂರ್ ಅಭಿಪ್ರಾಯ ಪಟ್ಟಿದ್ದಾರೆ.
ತಿರುವನಂತಪುರಂ ಸಂಸದರಾಗಿರುವ ಶಶಿ ತರೂರ್ 1999ರ ಕಾರ್ಗಿಲ್ ಯುದ್ಧದ ವೇಳೆಯೂ ಭಾರತ, ಪಾಕಿಸ್ತಾನದ ಎದುರು ಕ್ರಿಕೆಟ್ ಪಂದ್ಯವನ್ನು ಆಡಿ ಗೆಲುವು ಪಡೆದಿತ್ತು ಎಂದು ತಮ್ಮ ಹೇಳಿಕೆಗೆ ಸಮರ್ಥನೆಯನ್ನು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶಶಿ ತರೂರ್, ಪಾಕ್ ವಿರುದ್ಧ ಪಂದ್ಯ ಆಡದಿದ್ದರೆ 2 ಅಂಕಗಳನ್ನು ಮಾತ್ರ ಕಳೆದುಕೊಳ್ಳುವುದಿಲ್ಲ. ಬದಲಿಗೆ ಯುದ್ಧ ಮಾಡದೇ ಶರಣಾಗುವುದಕ್ಕಿಂತ ಕಡೆ ಎಂದು ಬರೆದುಕೊಂಡಿದ್ದಾರೆ.
ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ಜೂನ್ 16 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಆದರೆ ಪುಲ್ವಾಮಾ ದಾಳಿಯ ಬಳಿಕ ಹಲವು ಹಿರಿಯ ಕ್ರಿಕೆಟ್ ಆಟಗಾರರು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ ಆಡಬಾರದು, ಅಲ್ಲದೇ ಇದಕ್ಕೆ ಐಸಿಸಿ ಒಪ್ಪಿಗೆ ನೀಡದಿದ್ದರೆ ಟೂರ್ನಿಯಿಂದಲೇ ಹೊರ ನಡೆಯಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.
ಇದೇ ವೇಳೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧವೂ ಆರೋಪ ಮಾಡಿರುವ ತರೂರ್, ಯೋಧರ ಸಾವಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶೋಕಾಚರಣೆಯ ದಿನವನ್ನು ಘೋಷಿಸದ ಸರ್ಕಾರ 3 ತಿಂಗಳ ಮುಂದೇ ನಿಗದಿಯಾಗಿರುವ ಪಂದ್ಯದ ಮೇಲೆ ರದ್ದು ಪಡಿಸಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಯೋಧರ ಸಾವಿಗೆ ಕ್ರಮಕೈಗೊಳ್ಳದ ಸರ್ಕಾರ ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv