ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ 13 ಮಂದಿ ಶಾಸಕರು ಈಗಾಗಲೇ ಸ್ಪೀಕರ್ ಕಚೇರಿಗೆ ರಾಜೀನಾಮೆ ಪತ್ರವನ್ನು ನೀಡಿ ಮುಂಬೈಗೆ ತೆರಳಿದ್ದಾರೆ. ಇನ್ನೇನು ಬೆಳವಣಿಗೆಗಳು ಆಗುತ್ತವೆ ಎಂಬುದನ್ನು ಕಾದು ನೋಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿ ರಾಜೀನಾಮೆ ಅಂಗೀಕಾರ ಆಗಬೇಕಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಏನ್ ಹೇಳ್ತಾರೆ, ಸಿದ್ದರಾಮಯ್ಯ ಏನ್ ಹೇಳ್ತಾರೆ ಅನ್ನೋದಕ್ಕೆ ಉತ್ತರ ಕೊಡಲ್ಲ. ಸ್ಪೀಕರ್ ಗೆ ಮತ್ತು ರಾಜೀನಾಮೆ ನೀಡಿದ ಶಾಸಕರಿಗೆ ಸಂಬಂಧಿಸಿದ ವಿಚಾರ ಅದು. ಮುಂಬೈನಲ್ಲಿ ನಮ್ಮ ಪಕ್ಷದ ನಾಯಕರು ಯಾರು ಅತೃಪ್ತ ಶಾಸಕರ ಜೊತೆ ಇಲ್ಲ. ಬಿಜೆಪಿ ಮುಂದಿನ ನಡೆ ಬಗ್ಗೆ ಕಾದು ನೋಡುತ್ತೇವೆ ಎಂದು ತಿಳಿಸಿದ್ದಾರೆ.
ಶಾಸಕರ ರಾಜೀನಾಮೆ ವಿಚಾರದಲ್ಲಿ ನಾನು ಮಧ್ಯಪ್ರವೇಶ ಮಾಡಲ್ಲ, ಅದು ನನಗೆ ಸಂಬಂಧ ಇಲ್ಲದ ವಿಷಯವಾಗಿದೆ. ಅದು ಸ್ಪೀಕರ್ ಮತ್ತು ಶಾಸಕರಿಗೆ ಬಿಟ್ಟ ವಿಚಾರವಾಗಿದೆ. ರಾಜಕೀಯ ಬೆಳವಣಿಗೆ ಕಾದು ನೋಡೋಣ. ನಾನು ಏನು ಸಮಯ, ದಿನ ನಿಗದಿ ಮಾಡಿಲ್ಲ, ಇನ್ನು ಮುಂದೆಯೂ ಮಾಡಲ್ಲ. ಮುಂಬೈನಲ್ಲಿ ರಾಜೀನಾಮೆ ನೀಡಿರುವ ಶಾಸಕರ ಜೊತೆ ನಮ್ಮ ನಾಯಕರು ಯಾರೂ ಇಲ್ಲ. ಶಾಸಕರು ಮುಂಬೈನಲ್ಲಿ ಅವರ ರಕ್ಷಣೆಗಾಗಿ ಸ್ವತಃ ಅವರೇ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದರು.
ಅತೃಪ್ತರ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ವಿಳಂಬ ಧೋರಣೆ ಅನುಸರಿಸಲ್ಲ ಅನ್ನುವ ನಂಬಿಕೆ ಇದೆ. ಸ್ಪೀಕರ್ ಬಗ್ಗೆ ನನಗೆ ಅಪಾರ ಗೌರವ ಇದೆ. ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ತಾರೆ ಅನ್ನುವ ನಂಬಿಕೆ ಇದೆ. ಕರ್ನಾಟಕದ ಆರೂವರೆ ಕೋಟಿ ಜನರಿಗೂ ಸ್ಪೀಕರ್ ಮೇಲೆ ನಂಬಿಕೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.
ಇಂದು ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಬಾಗೂರು, ನವಿಲೆ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದೇನೆ. ಯಡಿಯೂರು ಸಿದ್ಧಲಿಂಗೇಶ್ವರ ದರ್ಶನ ಪಡೆಯುತ್ತೇನೆ ಎಂದರು.