ರಾಮನಗರ: ನನಗೆ ರಾಜಕಾರಣದ (Politics) ಮೇಲೆ ಒಲವಿಲ್ಲ. ಆದರೆ ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ಬಾರಿಯೂ ನನಗೆ ಚುನಾವಣೆ (Election) ಎದುರಿಸುವ ಆಸಕ್ತಿ ಇರಲಿಲ್ಲ. ಆದ್ರೆ ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣದಲ್ಲಿದ್ದೇನೆ ಎಂದರು. ಇದನ್ನೂ ಓದಿ: ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿ ಆಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ: ಕೆಜೆ ಜಾರ್ಜ್
ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ (BJP) ಜೊತೆ ಮೈತ್ರಿ ಬಗ್ಗೆ ಕೇಳಿದ್ದಕ್ಕೆ, ಇದೆಲ್ಲವೂ ಗಾಳಿ ಸುದ್ದಿ. ಆ ರೀತಿಯ ಯಾವುದೇ ಚರ್ಚೆ ಆಗುತ್ತಿಲ್ಲ. ಈ ವಿಚಾರವನ್ನು ನನ್ನ ಮುಂದೆ ಯಾರೂ ಪ್ರಸ್ತಾಪ ಮಾಡಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ನಾನು ಜಿಲ್ಲಾವಾರು ಸಭೆ ಮಾಡಿದ್ದೇನೆ. ಗೆದ್ದವರು ಹಾಗೂ ಸೋತವರ ಜೊತೆ ಚರ್ಚೆ ಮಾಡಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಉತ್ತರಿಸಿದರು.
ಸಂಸದ ಡಿ.ಕೆ. ಸುರೇಶ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು, “ನನ್ನ ವಿಚಾರ ಬಿಡಿ, ರಾಮನಗರದ ಹಾಲಿ ಸಂಸದರ ವಿಚಾರವನ್ನೇ ಕೇಳಿ. ಭ್ರಷ್ಟಾಚಾರದ ಮಧ್ಯೆ ಚುನಾವಣೆ ಬೇಡ ಅಂತಿದ್ದಾರೆ. ಅಂಥವರೇ ಚುನಾವಣೆ ಬೇಡ ಎಂದು ಹೇಳುತ್ತಿರುವಾಗ ನಮ್ಮದು ಯಾವ ಲೆಕ್ಕ ಎಂದು ಡಿ.ಕೆ. ಸುರೇಶ್ ಹೆಸರೇಳದೆ ವ್ಯಂಗ್ಯವಾಡಿದರು.
ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಆರೋಪ ಮಾಡುವ ಬದಲು ಲೋಕಾಯುಕ್ತಕ್ಕೆ ದೂರು ನೀಡಲಿ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಲೋಕಾಯುಕ್ತಕ್ಕೆ ದೂರು ಕೊಡಬೇಕೆಂಬುದನ್ನು ಇವರಿಂದ ಹೇಳಿಸಿಕೊಂಡು ತಿಳ್ಕೋಬೇಕಾ ಎಂದು ಕಿಡಿಕಾರಿದರು.
ನೀವು ಬಿಜೆಪಿ ವಿರುದ್ಧ 40% ಅಂತ ಡಂಗೂರ ಹೊಡೆದಿದ್ದಿರಲ್ಲ. ಆಗ ನಿವ್ಯಾಕೆ ಲೋಕಾಯುಕ್ತಕ್ಕೆ ದೂರು ಕೊಟ್ಟಿರಲಿಲ್ಲ? ಬಿಜೆಪಿ ಸರ್ಕಾರದ ಮೇಲೆ ಮಾಡಿದ ಆರೋಪಕ್ಕೆ ನೀವು ಯಾವ ಸಾಕ್ಷಿ ಇಟ್ಟಿದ್ರಿ? ಅವನ್ಯಾರೋ ಗುತ್ತಿಗೆದಾರ ದೂರು ಕೊಟ್ಟಿದ್ದಕ್ಕೆ ಸಾಕ್ಷಿ ಕೊಟ್ಟಿದ್ದಾರಾ? ಈಗ ನೀವೇ ಅಧಿಕಾರದಲ್ಲಿರುವಾಗ ಆರೋಪಗಳ ಬಗ್ಗೆ ತನಿಖೆ ಮಾಡಿಸಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಿಎಂ ಹೆಚ್‌ಡಿಕೆ ವಾಗ್ದಾಳಿ ನಡೆಸಿದರು.