ಚರಂಡಿ, ಶೌಚಾಲಯ ಸ್ವಚ್ಛಗೊಳಿಸಲು ಆಯ್ಕೆಯಾಗಿಲ್ಲ: ಸಾಧ್ವಿ ಪ್ರಜ್ಞಾ ಸಿಂಗ್

Public TV
2 Min Read
sadhvi pragya singh

ಭೋಪಾಲ್: ನಾನು ಶೌಚಾಲಯ ಹಾಗೂ ಚರಂಡಿ ಸ್ವಚ್ಛಗೊಳಿಸಲು ಸಂಸದೆಯಾಗಿ ಆಯ್ಕೆಯಾಗಿಲ್ಲ ಎಂದು ಹೇಳುವ ಮೂಲಕ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸೆಹೋರೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡುವ ವೇಳೆ ಈ ರೀತಿ ಹೇಳಿದ್ದು, ನಾನು ಚರಂಡಿ ಹಾಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಆಯ್ಕೆಯಾಗಿಲ್ಲ ಅರ್ಥ ಮಾಡಿಕೊಳ್ಳಿ. ನಾನು ಯಾವ ಕೆಲಸ ಮಾಡಲು ಚುನಾಯಿತಳಾಗಿದ್ದೇನೆ ಎನ್ನುವುದು ತಿಳಿದಿದೆ. ಆ ಕೆಲಸವನ್ನು ನಾನು ಮಾಡುತ್ತೇನೆ, ಈ ಕುರಿತು ಹಲವು ಬಾರಿ ಹೇಳಿದ್ದೇನೆ ಎಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ.

swachh bharat

ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ಪ್ರದೇಶದಲ್ಲಿ ಹೆಚ್ಚು ನೈರ್ಮಲ್ಯವಿದ್ದು ಸ್ವಚ್ಛತೆಯ ಕೊರತೆ ಇದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ನಿಮ್ಮ ಶೌಚಾಲಯ, ಚರಂಡಿ ಸ್ವಚ್ಛಗೊಳಿಸುವುದು ನನ್ನ ಕೆಲಸವಲ್ಲ ಎಂದು ಕಿಡಿಕಾರಿದ್ದಾರೆ.

ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸ್ಥಳೀಯ ಶಾಸಕರು, ಪುರಸಭೆ ಕೌನ್ಸಿಲರ್ ಗಳು ಸೇರಿದಂತೆ ಸ್ಥಳೀಯ ಸಾರ್ವಜನಿಕ ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುವುದು ಸಂಸತ್ ಸದಸ್ಯರ ಕರ್ತವ್ಯ. ಕ್ಷೇತ್ರದ ಜನರು ಹಾಗೂ ಕಾರ್ಯರ್ತರೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು ಎಂದು ಪ್ರಧಾನಿ ಮೋದಿ ಅವರು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಹಲವು ಬಾರಿ ಹೇಳಿದ್ದಾರೆ. ಆದರೂ ಸಹ ಪ್ರಜ್ಞಾ ಸಿಂಗ್ ಠಾಕೂರ್ ಅವರು ಕಾರ್ಯರ್ತರ ಬಳಿ ನಿರ್ಲಕ್ಷ್ಯದಿಂದ ವರ್ತಿಸಿದ್ದು, ಸ್ಥಳಿಯ ಸಮಸ್ಯೆಗಳನ್ನು ನಿಮ್ಮ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತನ್ನಿ ಎಲ್ಲ ಸಮಸ್ಯೆಗಳನ್ನೂ ನನ್ನ ಬಳಿ ಹೇಳಿಕೊಳ್ಳಬೇಡಿ ಎಂದು ಗುಡುಗಿದ್ದಾರೆ.

Modi Pragya Thakur

ಪ್ರಜ್ಞಾ ಸಿಂಗ್ ಹೇಳಿಕೆಗೆ ಕಾಂಗ್ರೆಸ್ ನಾಯಕ ತಾರಿಖ್ ಅನ್ವರ್ ಪ್ರತಿಕ್ರಿಯಿಸಿ, ಈ ಹೇಳಿಕೆಯಿಂದ ಸ್ವಚ್ಛ ಭಾರತದ ಬಗ್ಗೆ ಅವರು ಯಾವ ರೀತಿಯ ಮನಸ್ಥಿತಿ ಹೊಂದಿದ್ದಾರೆ ಎನ್ನುವುದು ತಿಳಿಯುತ್ತದೆ. ಮೋದಿ ಸ್ವಾಧ್ವಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Pragya Thakur BJP

ಲೋಕಸಭಾ ಚುನಾವಣೆಯ ಪ್ರಚಾರ ಮಾಡುವ ಸಂದರ್ಭದಲ್ಲಿ 2008ರ ಮಲೆಗಾಂವ್ ಸ್ಫೋಟದ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್, ಗಾಂಧಿ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ದೇಶಭಕ್ತ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ, ಗಾಂಧಿ ಹತ್ಯೆ ಕುರಿತು ಯಾರೇ ಹೇಳಿಕೆ ನೀಡಿದರೂ ಅವರನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *