ಚಿಕ್ಕಮಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ವರ್ಗಾವಣೆ ಹಾಗೂ ದೇವಸ್ಥಾನ ಸುತ್ತುವ ಕೆಲಸ ಬಿಟ್ಟರೇ, ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲವೆಂದು ಸಂಸದೆ ಶೋಭ ಕರಂದ್ಲಾಜೆ ಕಿಡಿಕಾರಿದ್ದಾರೆ.
ಜಿಲ್ಲೆಯ ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಒಳಗಿನ ಗುದ್ದಾಟ ಹಾಗೂ ಕಾಂಗ್ರೆಸ್ಸಿನಲ್ಲಿನ ಅಪಸ್ವರ ಜೋರಾಗಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್‍ನ ಮಂತ್ರಿಗಳು ಹಾಗೂ ಶಾಸಕರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಇದರಿಂದಾಗಿ ಕಳೆದ ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕೇವಲ ವರ್ಗಾವಣೆ ಹಾಗೂ ದೇವಸ್ಥಾನ ಸುತ್ತುವ ಕೆಲಸಗಳು ಮಾತ್ರ ಆಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮನದಲ್ಲಿ ಲೋಕಸಭೆಗೆ ಸ್ಪರ್ಧೆ ಮಾಡಬಾರದೆಂದು ಬಂದಿತ್ತು. ಆದರೆ ಅಮಿತ್ ಶಾ ಹಾಗೂ ಬಿಎಸ್‍ವೈ ಯಾವುದೇ ಹೇಳಿಕೆ ನೀಡಬಾರದು, ಪಕ್ಷ ನಿರ್ಣಯ ಮಾಡುತ್ತೆ. ಪಕ್ಷದ ನಿರ್ಣಯವನ್ನ ಎಲ್ಲಾ ಮುಖಂಡರು ಒಪ್ಪಬೇಕು ಎಂದಿದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆ ಸ್ಪರ್ಧೆಯ ಬಗ್ಗೆ ಇನ್ನು ಯಾವುದೇ ತೀರ್ಮಾನವಾಗಿಲ್ಲ ಎಂದು ಸ್ಪಷ್ಟ ಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv