ದಿಸ್ಪುರ್: ಗಾಯಕ ಜುಬೀನ್ ಗಾರ್ಗ್ (Zubeen Garg) ಸಾವು ಆಕಸ್ಮಿಕವಲ್ಲ, ಇದೊಂದು ಕೊಲೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡುವಾಗ ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಇದೊಂದು ಅಪಘಾತವಲ್ಲ. ಕೊಲೆ ಎಂದು ಅಸ್ಸಾಂ ಪೊಲೀಸರಿಗೆ ಖಚಿತವಾಗಿದೆ. ಆರೋಪಿಗಳ ಪೈಕಿ ಓರ್ವ ಕೊಲೆ ಮಾಡಿದ್ದು, ಇನ್ನುಳಿದವರು ಆತನಿಗೆ ಸಹಾಯ ಮಾಡಿದ್ದಾರೆ. ಸದ್ಯ ಕೊಲೆ ಸಂಬಂಧ ನಾಲ್ಕರಿಂದ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸ್ಕೂಬಾ ಡೈವಿಂಗ್ ವೇಳೆ ಬಾಲಿವುಡ್‌ನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು
ಇನ್ನೂ ಈ ಸಂಬಂಧ ರಾಜ್ಯಾದಂತ 60ಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿದ್ದವು. ಜೊತೆಗೆ ಸರ್ಕಾರವು ಗಾರ್ಗ್ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ಸಿಐಡಿ ಅಡಿಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಜೊತೆಗೆ ಗುವಾಹಟಿ ಹೈಕೋರ್ಟ್ ಹಾಲಿ ನ್ಯಾಯಾಧೀಶ, ನ್ಯಾಯಮೂರ್ತಿ ಸೌಮಿತ್ರ ಸೈಕಿಯಾ ಅವರ ನೇತೃತ್ವದಲ್ಲಿ ಏಕವ್ಯಕ್ತಿ ತನಿಖಾ ಆಯೋಗವನ್ನು ಕೂಡ ರಚಿಸಿತ್ತು.
ತನಿಖೆ ವೇಳೆ, ಗಾರ್ಗ್ ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಗಳಾದ ನಂದೇಶ್ವರ್ ಬೋರಾ ಮತ್ತು ಪ್ರಬಿನ್ ಬೈಶ್ಯ ಅವರ ಖಾತೆಗಳಿಂದ 1.1 ಕೋಟಿ ರೂ.ಗಳಿಗೂ ಅಧಿಕ ಹಣಕಾಸಿನ ವಹಿವಾಟು ನಡೆದಿರುವುದು ಪತ್ತೆಯಾಗಿತ್ತು. ಇದಾದ ನಂತರ ಪೊಲೀಸರು ಕಾರ್ಯಕ್ರಮ ಆಯೋಜಕ ಶ್ಯಾಮಕಾನು ಮಹಾಂತ, ವ್ಯವಸ್ಥಾಪಕ ಸಿದ್ಧಾರ್ಥ್ ಶರ್ಮಾ, ಬ್ಯಾಂಡ್ ಸದಸ್ಯರಾದ ಶೇಖರ್ ಜ್ಯೋತಿ ಗೋಸ್ವಾಮಿ ಮತ್ತು ಅಮೃತ್ ಪ್ರಭಾ ಮಹಾಂತ, ಗಾರ್ಗ್ ಸೋದರಸಂಬಂಧಿ, ಹಿರಿಯ ಅಸ್ಸಾಂ ಪೊಲೀಸ್ ಅಧಿಕಾರಿ ಸಂದೀಪನ್ ಗಾರ್ಗ್‌ನ್ನು ಕೊಲೆ ಆರೋಪದಡಿಯಲ್ಲಿ ಅರೆಸ್ಟ್ ಮಾಡಿದರು. ಸದ್ಯ 7 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈಶಾನ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಸಿಂಗಾಪುರಕ್ಕೆ ತೆರಳಿದ್ದ ಜುಬೀನ್ ಗಾರ್ಗ್ ಅವರು ಸೆ.19ರಂದು ಸ್ಕೂಬಾ ಡೈವಿಂಗ್ ವೇಳೆ ಸಾವನ್ನಪ್ಪಿದ್ದರು.ಇದನ್ನೂ ಓದಿ: ಗಾಯಕ ಜುಬೀನ್ ಗರ್ಗ್ ಸಾವು ಕೇಸ್; ಸಹೋದರ ಸಂಬಂಧಿ ಡಿಎಸ್‌ಪಿ ಬಂಧನ

