– ಕರೂರು ಕಾಲ್ತುಳಿತದಲ್ಲಿ ಮೃತರ ಕುಟುಂಬಸ್ಥರಿಗೆ ತಲಾ 1 ಲಕ್ಷ ಪರಿಹಾರ ಘೋಷಿಸಿದ ಬಿಜೆಪಿ ನಾಯಕ
ಚೆನ್ನೈ: ನಟ, ರಾಜಕಾರಣಿ ವಿಜಯ್ (Vijay Thalapathy) ಚುನಾವಣಾ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 1 ಲಕ್ಷ ರೂ. ಪರಿಹಾರವನ್ನು ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ (Annamalai) ಘೋಷಿಸಿದ್ದಾರೆ.
ಕಾರೂರು (Karur Stampede) ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅಣ್ಣಾಮಲೈ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು. ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿದ್ದ ಜನರಿಗೆ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಘಟನೆ ಬಗ್ಗೆ ತೀವ್ರ ನೋವಾಗಿದೆ. ಈವರೆಗೆ ತಮಿಳುನಾಡಿನಲ್ಲಿ ಈ ರೀತಿ ಘಟನೆ ನಡೆದಿರಲಿಲ್ಲ. ಈ ದುರಂತಕ್ಕೆ ನೇರ ಹೊಣೆ ಸ್ಥಳೀಯ ಪೊಲೀಸರು ಮತ್ತು ರಾಜ್ಯ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: TVK Vijay Rally Stampede | ದುರಂತದಲ್ಲಿ 2 ವರ್ಷದ ಕಂದಮ್ಮ ಬಲಿ – ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಇದರಲ್ಲಿ ನಟ, ರಾಜಕಾರಣಿ ವಿಜಯ್ ಅವರದ್ದು ಏನು ತಪ್ಪು ಇಲ್ಲ. ಸಮಾರಂಭಕ್ಕೆ ಅನುಮತಿ ನೀಡಿದ್ದು ಸ್ಥಳೀಯ ಆಡಳಿತ ಮಂಡಳಿ. 10 ಸಾವಿರ ಜನ ಸೇರುತ್ತಾರೆ, ಅನುಮತಿ ಕೊಡಿ ಅಂತ ಕೇಳಿದ್ರು ಕೊಟ್ಟಿದ್ದೇವೆ ಅಂತ ಈಗ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ ಪೊಲೀಸರ ಇಂಟಲಿಜೆನ್ಸ್ ವಿಫಲ ಆಗಿದೆಯಾ? ಪೊಲೀಸರಿಗೆ ಗೊತ್ತಿಲ್ಲವಾ ಅವರು ಒಬ್ಬ ಐಕಾನ್ ಸ್ಟಾರ್ ಅಂತ? ಇಲ್ಲಿನ ಡಿಸಿ ಮತ್ತು ಎಸ್‌ಪಿಯನ್ನು ಅಮಾನತು ಮಾಡಬೇಕು. ಅದರೆ, ಅದನ್ನು ರಾಜ್ಯ ಸರ್ಕಾರ ಮಾಡಿಲ್ಲ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಆರ್‌ಸಿಬಿ ವಿಚಾರವಾಗಿ ಒಂದು ಘಟನೆ ನಡೆದಿತ್ತು. ಅಲ್ಲಿಯೂ ಕೂಡ ರಾಜ್ಯ ಸರ್ಕಾರದ ವಿಫಲತೆ ಇತ್ತು. ಅಲ್ಲಿ ಒನ್ ಮ್ಯಾನ್ ತನಿಖೆಗೆ ಆದೇಶ ನೀಡಲಾಗಿತ್ತು. ಅವರು ರಾಜ್ಯ ಸರ್ಕಾರದ ವಿರುದ್ಧ ರಿಪೋರ್ಟ್ ನೀಡಲು ಸಾಧ್ಯವಿಲ್ಲ. ಅದೇ ರೀತಿ ಇಲ್ಲಿ ಕೂಡ ಆಗುತ್ತಿದೆ. ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ಸಿಬಿಐ ತನಿಖೆಯಲ್ಲಿ ಗೊತ್ತಾಗುತ್ತೆ, ಇದು ಯಾರಾದ್ರು ಹೇಳಿ ಮಾಡಿಸಿದ್ದ ಅಂತ. ಜನಸಂದಣಿಯಲ್ಲಿ ಯಾರದ್ರು ಕುಮ್ಮಕ್ಕು ಕೊಟ್ರ ಎಂಬ ಎಲ್ಲಾ ಮಾಹಿತಿ ಹೊರ ಬರುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಕರೂರು ಕಾಲ್ತುಳಿತ – 39 ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ
ನಮ್ಮ ಪಕ್ಷದಿಂದ ಗ್ರೌಂಡ್ ಲೆವೆಲ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ. ಮೃತ 40 ಜನರಿಗೂ ತಲಾ ಒಂದು ಲಕ್ಷ ಪರಿಹಾರ ನೀಡಲು ಬಿಜೆಪಿಯಿಂದ ತೀರ್ಮಾನ ಮಾಡಲಾಗಿದೆ. ಒಂದು ವಾರದಲ್ಲಿ ಮೃತರ ಎಲ್ಲರ ಮನೆಗೆ ತೆರಳಿ ನಾವು ಚೆಕ್ ತಲುಪಿಸುತ್ತೇವೆ ಎಂದರು.