ಕಾಬೂಲ್: ಅಫ್ಘಾನಿಸ್ತಾನದಿಂದ (Afghanistan) ತನ್ನ ಸೇನಾ ಪಡೆಯನ್ನು ಸಂಪೂರ್ಣವಾಗಿ ಹಿಂಪಡೆದುಕೊಂಡಿರುವ ಅಮೆರಿಕ ಇದೀಗ ಮತ್ತೆ ಅಫ್ಫಾನಿಸ್ತಾನದ ಮೇಲೆ ಕಣ್ಣಿಟ್ಟಿದೆ. ಅಫ್ಘಾನಿಸ್ತಾನದ ಬಾಗ್ರಾಮ್ ವಾಯುನೆಲೆಯ ನಿಯಂತ್ರಣವನ್ನು ಅಮೆರಿಕ ಮರಳಿ ಪಡೆಯಬೇಕು ಎಂಬ ಬೇಡಿಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾನುವಾರ ಪುನರುಚ್ಚರಿಸಿದ್ದಾರೆ. ಆದ್ರೆ ಈ ಬೇಡಿಕೆಯನ್ನು ತಾಲಿಬಾನ್ ನಿರಾಕರಿಸಿದೆ.
ಅಮೆರಿಕದ ಯಾವ್ದೇ ಬೆದೆರಿಕೆಗೂ ನಾವು ಹೆದರಲ್ಲ ಎಂದಿದೆ. ಅಲ್ಲದೇ ಒಂದೇ ಒಂದಿಂಚು ಜಾಗವನ್ನೂ ಬಿಡಲ್ಲ ಎಂದು ತಿರುಗೇಟು ನೀಡಿದೆ. ಇದು ಅಮೆರಿಕ ಹಾಗೂ ತಾಲಿಬಾನ್ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ದಟ್ಟವಾಗಿದೆ.
ಅಫ್ಘಾನ್‌ಗೆ ಟ್ರಂಪ್ ಎಚ್ಚರಿಕೆ
ಟ್ರಂಪ್ ಆಡಳಿತವು ಪ್ರಸ್ತುತ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದೊಂದಿಗೆ ವಾಯುನೆಲೆಯನ್ನು ಅಮೆರಿಕದ ನಿಯಂತ್ರಣಕ್ಕೆ ತರುವ ಸಾಧ್ಯತೆಗಳ ಕುರಿತು ಚರ್ಚಿಸುತ್ತಿದೆ. ನಾವು ಶೀಘ್ರದಲ್ಲೇ ವಾಯುನೆಲೆಯನ್ನು ಮರಳಿ ಪಡೆಯಲು ಬಯಸಿದ್ದೇವೆ. ಒಂದು ವೇಳೆ ಇದಕ್ಕೆ ಒಪ್ಪದಿದ್ದರೆ ನಾನು ಏನು ಮಾಡಲಿದ್ದೇನೆ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ. ಅಫ್ಘಾನಿಸ್ತಾನವು ಬಾಗ್ರಾಮ್ ವಾಯುನೆಲೆಯನ್ನು ಅದನ್ನು ನಿರ್ಮಿಸಿದವರಿಗೆ ಮರಳಿ ನೀಡದಿದ್ದರೆ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಲಿದೆ ಎಂದು ಟ್ರಂಪ್ ಅವರು ತಾಲಿಬಾನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಾಯುನೆಲೆ ಮೇಲೆ ಟ್ರಂಪ್ ಕಣ್ಣೇಕೆ?
ಬಾಗ್ರಾಮ್ ಏರ್ ಬೇಸ್ (Bagram Air Base) 2021ರಲ್ಲಿ ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಂಡ ನಂತರ ತಾಲಿಬಾನ್ ನಿಯಂತ್ರಣಕ್ಕೆ ಬಂದಿತ್ತು. ಜುಲೈ 2021 ರಲ್ಲಿ ಬಾಗ್ರಾಮ್ ವಾಯುನೆಲೆಯನ್ನು ಅಧಿಕೃತವಾಗಿ ಖಾಲಿ ಮಾಡಿದ ಅಮೆರಿಕ ಪಡೆಗಳು ಅಫ್ಘಾನಿಸ್ತಾನದಲ್ಲಿ ಅಮೆರಿಕದ 20 ವರ್ಷಗಳ ಮಿಲಿಟರಿ ಉಪಸ್ಥಿತಿಯ ಸಾಂಕೇತಿಕ ಅಂತ್ಯವೆಂದು ಪರಿಗಣಿಸಲಾಯಿತು. ನೆಲೆಯ ಮೇಲಿನ ಅಮೆರಿಕದ ನಿಯಂತ್ರಣವನ್ನು ತ್ಯಜಿಸಿರುವುದನ್ನು ಟ್ರಂಪ್ ಹಲವಾರು ಸಂದರ್ಭಗಳಲ್ಲಿ ಟೀಕಿಸಿದ್ದಾರೆ. ಜೊತೆಗೆ ದೇಶದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಮಾಜಿ ಅಧ್ಯಕ್ಷ ಜೋ ಬಿಡೆನ್ ಸರ್ಕಾರದ ನಿರ್ಧಾರವನ್ನು ʻಸಂಪೂರ್ಣ ದುರಂತʼ ಎಂದು ಕರೆದಿದ್ದಾರೆ. ನಾವು ಅದನ್ನು ಅವರಿಗೆ ವ್ಯರ್ಥವಾಗಿ ನೀಡಿದ್ದೇವೆ. ನಾವು ಆ ನೆಲೆಯನ್ನು ಮರಳಿ ಬಯಸುತ್ತೇವೆ ಎಂದು ಟ್ರಂಪ್ ತಮ್ಮ ಟ್ರುತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.
ಅಫ್ಘಾನ್ ಖಡಕ್ ರಿಯಾಕ್ಷನ್ ಏನು?
ಟ್ರಂಪ್ ಹೇಳಿಕೆಗೆ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಮುಖ್ಯಸ್ಥ ಫಸಿಹುದ್ದೀನ್ ಫಿತ್ರಾತ್ ಪ್ರತಿಕ್ರಿಯಿಸಿದ್ದು, ಕೆಲವರು ರಾಜಕೀಯ ಒಪ್ಪಂದದ ಮೂಲಕ ವಾಯುನೆಲೆಯನ್ನು ಹಿಂದಕ್ಕೆ ಪಡೆಯಲು ಬಯಸುತ್ತಿದ್ದಾರೆ. ಬಾಗ್ರಾಮ್ ವಾಯುನೆಲೆಯನ್ನ ವಾಪಸ್ ಪಡೆಯಲು ಅಫ್ಘಾನಿಸ್ತಾನದೊಂದಿಗೆ ಮಾತುಕತೆ ನಡೆಸಿದ್ದಾರೆ. ಆದ್ರೆ ಅಫ್ಘಾನಿಸ್ತಾನದ ಒಂದು ಇಂಚು ಮಣ್ಣನ್ನೂ ನಾವು ಬಿಟ್ಟುಕೊಡಲ್ಲ. ನಮಗೆ ಅದರ ಅಗತ್ಯವೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.