ದಾವಣಗೆರೆ: ಸಿಎಂ ಸಿದ್ದರಾಮಯ್ಯ ಅವರಿಗೆ ಪಂಚಮಸಾಲಿ ಪೀಠಕ್ಕೆ ಬರಲು ಬಿಡುವುದಿಲ್ಲ ಎಂದು ಸಮಾಜದ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ವಚನಾನಂದ ಸ್ವಾಮೀಜಿಗಳು ಹರಿಹರ ಜಾತ್ರೆಗೆ ಸಿಎಂ ಸಿದ್ದರಾಮಯ್ಯನವರನ್ನು ಅಹ್ವಾನ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಂಚಮಸಾಲಿ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಸಿಎಂಗೆ ಆಹ್ವಾನ ನೀಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜದ ಮುಖಂಡರು, ಮೀಸಲಾತಿ ಹೋರಾಟವನ್ನು ಹತ್ತಿಕ್ಕಿ, ಮೀಸಲಾತಿ ಬಹಿರಂಗವಾಗಿ ವಿರೋಧ ಮಾಡಿದವರು ಸಿದ್ದರಾಮಯ್ಯನವರು. ಅವರನ್ನು ಮಠಕ್ಕೆ ಕರೆಸಿ ಸನ್ಮಾನ ಮಾಡಲು ಸ್ವಾಮೀಜಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಪಂಚಮಸಾಲಿ ಪೀಠಕ್ಕೆ ಬರುವುದಕ್ಕೆ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಏನಾದರೂ ಬಂದು ಸನ್ಮಾನ ಸ್ವೀಕಾರ ಮಾಡಿದರೆ ಮಠದ ಹೊರಗೆ ಧಿಕ್ಕಾರ ಕೂಗಿ, ಕಪ್ಪುಬಟ್ಟೆಯ ಪ್ರದರ್ಶನ ಮಾಡುತ್ತೇವೆ. ವಚನಾನಂದ ಸ್ವಾಮೀಜಿಗಳು ಮಠವನ್ನು ಬಿಟ್ಟು ಮೀಸಲಾತಿಗಾಗಿ ಹೋರಾಟ ಮಾಡಬೇಕು. ಅದು ಬಿಟ್ಟು ಮೀಸಲಾತಿ ವಿರೋಧ ಮಾಡಿದವರನ್ನು ಕರೆತಂದು ಸನ್ಮಾನ ಮಾಡಿದರೆ ಹೇಗೆ ಎಂದು ಮುಖಂಡರು ಕಿಡಿಕಾರಿದ್ದಾರೆ.
 


 
		 
		 
		 
		 
		
 
		 
		 
		 
		