– ಘೋರ ಶಿಕ್ಷೆ, ವಿಚಿತ್ರ ಆಡಳಿತ ಶೈಲಿಯಿಂದಲೇ ಹೆಸರಾಗಿರೋ ದೇಶ
ಕಿಮ್ ಜಾಂಗ್ ಉನ್ ಎಂಬ ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವ ದೇಶ ಉತ್ತರ ಕೊರಿಯಾ (North Korea). ಈತನ ಕಠೋರ ನೀತಿಗಳು, ಆಡಳಿತ ಶೈಲಿಯಿಂದಲೇ ಕೊರಿಯಾ ಜಗತ್ತಿನಲ್ಲಿ ಕುಖ್ಯಾತಿ ಪಡೆದಿದೆ. ಕಿಮ್‌ನ ಕೆಲವೊಂದು ನೀತಿಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿರುತ್ತವೆ. ಈ ದೇಶದಲ್ಲಿ ಕಿಮ್ ಆಡಿದ್ದೇ ವೇದ ವಾಕ್ಯ, ಆತ ಮಾಡಿದ್ದೇ ಕಾನೂನು. ಸರ್ವಾಧಿಕಾರಿ ಅಧ್ಯಕ್ಷನ ವಿರುದ್ಧ ಯಾರಾದರು ಮಾತನಾಡಿದರೆ, ಅವರ ಕತೆ ಮುಗೀತು ಎಂದೇ ಅರ್ಥ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಕಿಮ್ ತೆಗೆದುಕೊಂಡ ಕೆಲವು ನಿರ್ಧಾರಗಳು ಅಚ್ಚರಿ ಮೂಡಿಸುವಂತಿರುತ್ತದೆ. ಅಂತಹ ಕುಖ್ಯಾತಿ ಹೊಂದಿರುವ ದೇಶ ಇಡೀ ಜಗತ್ತೇ ಗಮನಹರಿಸುವಂತಹ ಆದೇಶವೊಂದನ್ನು ಹೊರಡಿಸಿದೆ. ಸುದೀರ್ಘ 5 ವರ್ಷಗಳ ನಂತರ ಇದೇ ಮೊಟ್ಟ ಮೊದಲ ಬಾರಿಗೆ ವಿದೇಶಿ ಪ್ರವಾಸಿಗರಿಗೆ ಬಾಗಿಲು ತೆರೆದು ಆಹ್ವಾನ ನೀಡಿದೆ. ನಮ್ಮ ದೇಶದಲ್ಲಿ ಪ್ರವಾಸ ಮಾಡಿ ಎಂದು ಕರೆ ಕೊಟ್ಟಿದೆ. ಪ್ರವಾಸಕ್ಕೆ ಬರುವುದಕ್ಕೂ ಕಂಡಿಷನ್ಸ್ ಅಪ್ಲೈ ಎಂದು ವಿಶೇಷ ಸೂಚನೆ ಕೂಡ ಕೊಟ್ಟಿದೆ.
Advertisement
ಅಷ್ಟಕ್ಕೂ ಈ ದೇಶ ವಿದೇಶಿ ಪ್ರವಾಸಿಗರಿಗೆ ಬಾಗಿಲು ಮುಚ್ಚಿದ್ಯಾಕೆ? ಈಗ ಪ್ರವಾಸಕ್ಕೆ ಆಹ್ವಾನಿಸುತ್ತಿರುವುದೇಕೆ? ಉತ್ತರ ಕೊರಿಯಾಗೆ ಹೋಗಲು ಇರುವ ಕಂಡಿಷನ್ಸ್ ಏನು? ಅಪಾಯಕಾರಿ, ವಿವಾದಾತ್ಮಕ ನಾಯಕನ ದೇಶದಲ್ಲಿ ಆಡಳಿತ ಹೇಗಿರುತ್ತೆ? ಕಠಿಣ ನಿರ್ಧಾರಗಳಿಗೆ ಹೆಸರಾಗಿರುವ ದೇಶಕ್ಕೆ ವಿದೇಶ ಪ್ರವಾಸಿಗರು ಹೋಗ್ತಾರಾ? ಹೀಗೆ ಹಲವು ಪ್ರಶ್ನೆಗಳು ಮೂಡುವುದು ಸಹಜ.
Advertisement
Advertisement
ಮೊಟ್ಟ ಮೊದಲ ಬಾರಿಗೆ ವಿದೇಶಿ ಪ್ರವಾಸಿಗರಿಗೆ ಕಿಮ್ ಆಹ್ವಾನ
ಉತ್ತರ ಕೊರಿಯಾದಲ್ಲಿ ಪ್ರವಾಸ ಮಾಡಿ ಎಂದು ವಿದೇಶಿ ಪ್ರವಾಸಿಗರಿಗೆ ಕಿಮ್ ಜಾಂಗ್ ಉನ್ (Kim Jong Un) ಇದೇ ಮೊದಲ ಬಾರಿಗೆ ಕರೆ ಕೊಟ್ಟಿದ್ದಾರೆ. ಪ್ರವಾಸೋದ್ಯಮ ಇಲ್ಲದೇ ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತಗೊಂಡಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗುತ್ತಿಲ್ಲ. ಜನಜೀವನ ಮಟ್ಟ ಸುಧಾರಿಸುವುದು ಕಷ್ಟ ಎನ್ನುವಂತಾಗಿದೆ. ಕುಸಿದಿರುವ ಆರ್ಥಿಕ ಪರಿಸ್ಥಿತಿಯನ್ನು ಪುನರುಜ್ಜೀವನಗೊಳಿಸಲು ಸರ್ವಾಧಿಕಾರಿ ದೇಶಕ್ಕೆ ಈಗ ವಿದೇಶಿ ಕರೆನ್ಸಿಯ ಅಗತ್ಯವಿದೆ. ಆ ಪ್ರಯತ್ನದಲ್ಲಿ ವಿದೇಶಿ ಪ್ರವಾಸಿಗರಿಗೆ ಪ್ರವಾಸ ಕೈಗೊಳ್ಳಲು ಆಹ್ವಾನ ನೀಡಲಾಗಿದೆ. ಈ ಕ್ರಮದಿಂದ ಪ್ರವಾಸೋದ್ಯಮ ಸುಧಾರಣೆ ಕಂಡು, ದೇಶದ ಆರ್ಥಿಕ ಪರಿಸ್ಥಿತಿಗೆ ಬೂಸ್ಟ್ ಸಿಗಲಿದೆ ಎಂಬ ಲೆಕ್ಕಾಚಾರ ಇದೆ.
Advertisement
ಯಾವಾಗ ಲಾಕ್ ಆಗಿತ್ತು ಬಾಗಿಲು?
ಕೊರೊನಾ ಸಾಂಕ್ರಾಮಿಕ ರೋಗ 2020ರ ಸಂದರ್ಭದಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಮಾರಕ ಸೋಂಕಿಗೆ ಲಕ್ಷಾಂತರ ಜನ ಬಲಿಯಾದರು. ಚೀನಾದಿಂದ ಹಬ್ಬಿದ ರಾಕ್ಷಸ ವೈರಸ್ ಅನ್ನು ತಡೆಗಟ್ಟಲು ಎಲ್ಲಾ ದೇಶಗಳು ಗಡಿಯಲ್ಲಿ ಬಾಗಿಲು ಬಂದ್ ಮಾಡಿಕೊಂಡವು. ವಿದೇಶ ಪ್ರವಾಸ, ಪ್ರಯಾಣಕ್ಕೆ ನಿರ್ಬಂಧ ಹೇರಲಾಯಿತು. ವಿಮಾನ, ದೊಡ್ಡ ದೊಡ್ಡ ಹಡಗುಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದವು. ಕೋವಿಡ್ ಹರಡುವ ಭೀತಿಯಲ್ಲಿದ್ದ ನಾಯಕ ಕಿಮ್ ಜಾಂಗ್ ಉನ್ ಗಡಿಗಳನ್ನು ಮುಚ್ಚಿದ್ದರು. ವಿದೇಶಿ ಪ್ರವಾಸಿಗರನ್ನು ನಿಷೇಧಿಸಿದ್ದರು. ಕೋವಿಡ್ ಆರ್ಭಟ ತಣ್ಣಗಾದ ಬಳಿಕ ಎಲ್ಲಾ ದೇಶಗಳು ಎಂದಿನಂತೆ ಗಡಿ ಬಾಗಿಲುಗಳನ್ನು ತೆರೆದವು. ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಟ್ಟವು. ಆದರೆ, ಕೊರಿಯಾ ಮಾತ್ರ ವಿದೇಶಿ ಪ್ರವಾಸಿಗರಿಗೆ ನಿರ್ಬಂಧ ಮುಂದುವರಿಸಿದವು. ಸುದೀರ್ಘ 2025ರ ವರೆಗೂ ಅದು ಮುಂದುವರಿಯಿತು.
ಪ್ರವಾಸಕ್ಕೆ ಈಗಿರುವ ಕಂಡಿಷನ್ಸ್ ಏನು?
ದೇಶದಲ್ಲಿ ಪ್ರವಾಸ ಮಾಡಿ, ಆದರೆ ಕೆಲವು ಕಂಡಿಷನ್ಸ್ ಅಪ್ಲೈ ಎಂದು ಉತ್ತರ ಕೊರಿಯಾ ಪಾಶ್ಚಿಮಾತ್ಯ ಪ್ರವಾಸಿಗರಿಗೆ ಸೂಚನೆ ನೀಡಿದೆ. ಪ್ರತಿ ಪ್ರವಾಸಿಗರು ಸ್ಥಳೀಯ ಮಾರ್ಗದರ್ಶಕರನ್ನು ನೇಮಿಸಿಕೊಂಡು ಪ್ರವಾಸ ಮಾಡಬೇಕು. ಸೂಕ್ಷ್ಮ ಸ್ಥಳಗಳಲ್ಲಿ ಫೋಟೊ, ವೀಡಿಯೋ ಚಿತ್ರೀಕರಿಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರವಾಸೋದ್ಯಮ ಉತ್ತೇಜಿಸುವ ಪ್ರಯತ್ನ ಭಾಗವಾಗಿ, ಜೂನ್‌ನಲ್ಲಿ ಪೂರ್ವ ಕರಾವಳಿಯಲ್ಲಿ ಬೃಹತ್ ಪ್ರವಾಸೋದ್ಯಮ ತಾಣ ತೆರೆಯಲು ಯೋಜಿಸಿದೆ. ಪೂರ್ವ ಕರಾವಳಿ ಮತ್ತು ರಾಜಧಾನಿ ಪ್ಯೊಂಗ್ಯಾಂಗ್, ವಿದೇಶಿ ಪ್ರವಾಸಿಗರನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಲು ಸೂಕ್ತ ಸ್ಥಳಗಳಾಗಿವೆ. ಪ್ರವಾಸೋದ್ಯಮಕ್ಕೆ ಪೂರಕವಾದ ಮೂಲಸೌಕರ್ಯ ಇರುವುದು ಈ ಭಾಗದಲ್ಲೇ ಎಂದು ತಜ್ಞರು ಅಭಿಪಾಯಪಟ್ಟಿದ್ದಾರೆ.
ಉತ್ತರ ಕೊರಿಯಾ ಪ್ರವಾಸಿಗರು ಯಾರು?
ಅಸೋಸಿಯೇಷನ್ ಪ್ರೆಸ್ ಪ್ರಕಾರ, ಉತ್ತರ ಕೊರಿಯಾಗೆ 2024ರ ಫೆಬ್ರವರಿಯಲ್ಲಿ 100 ರಷ್ಯಾ ಪ್ರವಾಸಿಗರು ಪ್ರವಾಸ ಕೈಗೊಂಡಿದ್ದರು. ಕೋವಿಡ್ ನಂತರ ಅಲ್ಲಿಗೆ ಭೇಟಿ ಕೊಟ್ಟ ಮೊದಲ ವಿದೇಶಿ ಪ್ರಜೆಗಳು ಇವರೇ ಆದರು. ತಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಮಿತ್ರ ಆಗಿರುವ ಚೀನಾದ ಪ್ರಜೆಗಳು ಬರುತ್ತಾರೆಂದು ಭಾವಿಸಿದ್ದ ಉತ್ತರ ಕೊರಿಯಾಗೆ ರಷ್ಯನ್ನರು ಬಂದಿದ್ದು ಅಚ್ಚರಿ ಮೂಡಿಸಿತ್ತು. 2024ರ ವರ್ಷದಲ್ಲಿ ಒಟ್ಟು 880 ರಷ್ಯಾದ ಪ್ರವಾಸಿಗರು ಉ.ಕೊರಿಯಾಗೆ ಭೇಟಿ ನೀಡಿದ್ದಾರೆ ಎಂದು ಅಧಿಕೃತ ರಷ್ಯಾದ ಡೇಟಾವನ್ನು ಉಲ್ಲೇಖಿಸಿ ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯ ತಿಳಿಸಿದೆ. ಕೊರಿಯಾ ಮತ್ತು ರಷ್ಯಾ ಪರಸ್ಪರ ಎಷ್ಟು ಸ್ನೇಹಪರವಾಗಿವೆ ಎಂಬುದನ್ನು ಇದು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿಯೇ ಉಕ್ರೇನ್ ಮೇಲಿನ ಯುದ್ಧದಲ್ಲಿ ರಷ್ಯಾಗೆ ಕೊರಿಯಾ ಶಸ್ತ್ರಾಸ್ತ್ರ ಪೂರೈಸಿತು.
ವಿಶೇಷವೆಂದರೆ, ಕೋವಿಡ್ ಸಾಂಕ್ರಾಮಿಕಕ್ಕೂ ಮುಂಚಿತವಾಗಿ ಉ.ಕೊರಿಯಾಗೆ ಭೇಟಿ ನೀಡಿದ್ದ ಪ್ರವಾಸಿಗರಲ್ಲಿ ಚೀನೀಯರೇ ಶೇ.90 ರಷ್ಟಿದ್ದರು. ಕಳೆದ ವರ್ಷದಲ್ಲಿ 3,00,000 ಚೀನೀ ಪ್ರವಾಸಿಗರು ಕೊರಿಯಾಗೆ ಭೇಟಿ ನೀಡಿದ್ದರು ಎಂದು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ ನಡೆಸುತ್ತಿರುವ ಇನ್‌ಸ್ಟಿಟ್ಯೂ ಫಾರ್ ನ್ಯಾಷನಲ್ ಸೆಕ್ಯುರಿಟಿ ಸ್ಟ್ರಾಟಜಿ ತಜ್ಞ ಲೀ ಸಾಂಗ್‌ಕ್ಯೂನ್ ತಿಳಿಸಿದ್ದಾರೆ.
ಕೊರಿಯಾ ಪ್ರವಾಸೋದ್ಯಮ ಇತಿಹಾಸವೇನು?
ಶೀತಲ ಸಮರ ಸಂದರ್ಭದಲ್ಲಿ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ (ಡಿಪಿಆರ್‌ಕೆ) ಸೋವಿತ್ ಒಕ್ಕೂಟದ ಭಾಗವಾಗಿತ್ತು. 1950 ರಿಂದ 80ರ ದಶಕದ ಅಂತ್ಯದ ವರೆಗೆ ಉ.ಕೊರಿಯಾಕ್ಕೆ ಹೆಚ್ಚಿನ ಪ್ರವಾಸಿಗರು ಸಮಾಜವಾದಿ ಬಣದ ಇತರೆ ದೇಶಗಳಿಂದ ಬರುತ್ತಿದ್ದರು. ಪಾಶ್ಚಿಮಾತ್ಯ ಸಮಾಜವಾದಿಗಳು ಕೊರಿಯಾಕ್ಕೆ ಭೇಟಿ ನೀಡುತ್ತಿದ್ದರು. ಗ್ರೇಟ್ ಬ್ರಿಟನ್‌ನ ಕಮ್ಯುನಿಸ್ಟ್ ಭಾಗವು ಟ್ರಾವೆಲ್ ಏಜೆನ್ಸಿಯನ್ನು ನಡೆಸುತ್ತಿತ್ತು. ಅದು ಜನರನ್ನು ಸಮಾಜವಾದಿ ದೇಶಗಳಿಗೆ ಕರೆದೊಯ್ಯುತ್ತಿತ್ತು. 1990ರ ದಶಕದಲ್ಲಿ ಯುಎಸ್‌ಎಸ್‌ಆರ್ ಪತನದ ನಂತರ, ಶೀತಲ ಸಮರ ಕೊನೆಗೊಂಡಿತು. ಸರ್ಕಾರಗಳು ಕುಸಿದವು. ಆಗ ಉ.ಕೊರಿಯಾದಲ್ಲಿ ಸಾಕಷ್ಟು ಬದಲಾವಣೆಯಾಯಿತು. 1990ರ ದಶಕದ ಮಧ್ಯಭಾಗದಲ್ಲಿ ಉ.ಕೊರಿಯಾದಲ್ಲಿ ಪಶ್ಚಿಮ ಪ್ರವಾಸೋದ್ಯಮ ಪ್ರಾರಂಭವಾಯಿತು. ಆಗ ಪಶ್ಚಿಮದಿಂದ ಡಾಲರ್ ವಹಿವಾಟು ಚೆನ್ನಾಗಿ ಆಗುತ್ತಿತ್ತು.
ಕೊರಿಯಾಗೆ ಚೀನಾ ಏಕೆ ಮುಖ್ಯ?
ಚೀನಾ ಮತ್ತು ಉ.ಕೊರಿಯಾ ನಡುವಿನ ಸಂಬಂಧ ವಿಶ್ವ ಯುದ್ಧ-2ರ ನಂತರ ಬಲಗೊಂಡಿತು. ಎರಡೂ ಕಮ್ಯುನಿಸ್ಟ್ ರಾಷ್ಟ್ರಗಳಾಗಿ ರೂಪುಗೊಂಡವು. ಅಲ್ಲಿಂದ ಕೊರಿಯಾ ಚೀನಾಗೆ ಒಳ್ಳೆಯ ಮಿತ್ರರಾಷ್ಟçವಾಯಿತು ಎನ್ನುತ್ತಾರೆ ವಿಶ್ಲೇಷಕರು. 2000 ಇಸವಿಯಿಂದಲೂ ಉ.ಕೊರಿಯಾಗೆ ಚೀನಾ ತನ್ನ ಕ್ಷಿಪಣಿ ಮತ್ತು ಪರಮಾಣು ಶಸ್ತ್ರಾಸ್ತ್ರ ನೀಡಿ ನೆರವಾಗುತ್ತಿದೆ. ಇತ್ತ ಅಮೆರಿಕ ಪೂರ್ವ ಏಷ್ಯಾದ ಮಿತ್ರರಾಷ್ಟçಗಳಾದ ಜಪಾನ್ ಮತ್ತು ದ.ಕೊರಿಯಾಗೆ ಶಸ್ತಾçಸ್ತç ಒದಗಿಸುತ್ತಿದೆ. ಚೀನಾ ಮತ್ತು ಉತ್ತರ ಕೊರಿಯಾ 1949 ರಲ್ಲಿ ಔಪಚಾರಿಕ ಸಂಬAಧಗಳನ್ನು ಸ್ಥಾಪಿಸಿದವು. ವಿಶ್ವ ಸಮರ-2 ರ ನಂತರದ ವರ್ಷಗಳಲ್ಲಿ ಹೊಸ ಕಮ್ಯುನಿಸ್ಟ್ ರಾಷ್ಟ್ರಗಳಾಗಿ ಹೊರಹೊಮ್ಮಿದವು. ಕೊರಿಯನ್ ಯುದ್ಧದಲ್ಲಿ (1950-53) ಚೀನಾ ಉತ್ತರ ಕೊರಿಯಾವನ್ನು ಬೆಂಬಲಿಸಿತು. ಎರಡು ದೇಶಗಳು 1961 ರಲ್ಲಿ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದವು.
2018 ರಲ್ಲಿ ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಸರಿಪಡಿಸಲು ಚೀನಾದ ಪ್ರಯತ್ನದ ನಂತರ, ಕ್ಸಿ ಜಿನ್‌ಪಿಂಗ್ ಮತ್ತು ಕಿಮ್ ಇಬ್ಬರೂ ಅಣ್ವಸ್ತ್ರೀಕರಣದ ಬದ್ಧತೆಯನ್ನು ಪುನರುಚ್ಚರಿಸಿದರು. 2021 ರಲ್ಲಿ ಉಭಯ ದೇಶಗಳು ತಮ್ಮ 60 ವರ್ಷಗಳ ಪರಸ್ಪರ ರಕ್ಷಣಾ ಒಪ್ಪಂದವನ್ನು ಇನ್ನೂ 20 ವರ್ಷಗಳವರೆಗೆ ನವೀಕರಿಸಿದವು. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಉತ್ತರ ಕೊರಿಯಾ, ರಷ್ಯಾದೊಂದಿಗೆ ಆಳವಾದ ಮಿಲಿಟರಿ ಸಂಬಂಧಗಳನ್ನು ಸ್ಥಾಪಿಸಿದೆ. ಉಕ್ರೇನ್ ವಿರುದ್ಧದ ಯುದ್ಧವನ್ನು ರೂಪಿಸಿದೆ. ಇದು ಚೀನಾದೊಂದಿಗಿನ ಸಂಬAಧವನ್ನು ಹದಗೆಡಿಸಿದೆ.
ಕೊರಿಯಾದ ಕಠಿಣ ಕಾನೂನುಗಳು ಹೇಗಿರುತ್ತವೆ?
* 2022ರ ಸಂದರ್ಭದಲ್ಲಿ ದಕ್ಷಿಣ ಕೊರಿಯಾದ ನಾಟಕಗಳನ್ನು ವೀಕ್ಷಿಸಿ, ಸ್ನೇಹಿತರೊಂದಿಗೆ ಅದನ್ನು ಹಂಚಿಕೊಂಡ ಕಾರಣಕ್ಕಾಗಿ ಉ.ಕೊರಿಯಾದ ಇಬ್ಬರು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಲಾಯಿತು. ದಕ್ಷಿಣ ಕೊರಿಯಾ ಸಿನಿಮಾ ವೀಕ್ಷಿಸುವುದನ್ನು ಉ.ಕೊರಿಯಾದಲ್ಲಿ ನಿಷೇಧಿಸಿದೆ.
* 2024ರ ಸೆಪ್ಟೆಂಬರ್ ಸಂದರ್ಭದಲ್ಲಿ ಉತ್ತರ ಕೊರಿಯಾದಲ್ಲಿ ಸುರಿದ ಭಾರಿ ಮಳೆಯಿಂದ ಸೃಷ್ಟಿಯಾದ ಪ್ರವಾಹ ಪರಿಸ್ಥಿತಿ ನಿಭಾಯಿಸಲು ವಿಫಲರಾದರು ಎಂಬ ಕಾರಣಕ್ಕೆ 30 ಅಧಿಕಾರಿಗಳಿಗೆ ಮರಣದಂಡನೆ ವಿಧಿಸಲಾಯಿತು. ಪ್ರವಾಹದಿಂದಾಗಿ ದೇಶದ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದರು. ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿದ್ದವು.
* ಉ.ಕೊರಿಯಾದ ಮಾಜಿ ನಾಯಕ ಕಿಮ್ ಜಾಂಗ್ ಇಲ್ ಅವರ 10ನೇ ಪುಣ್ಯಸ್ಮರಣೆ ಪ್ರಯುಕ್ತ (2021) ಮುಂದಿನ 10 ದಿನಗಳ ವರೆಗೆ ದೇಶದ ನಾಯಕರು ಶೋಕಿಸಬೇಕಾಗಿತ್ತು. ಈ ಸಮಯದಲ್ಲಿ ಯಾರಾದರೂ ಸಂತೋಷವಾಗಿದ್ದರೆ ಅಥವಾ ಮದ್ಯಪಾನ ಮಾಡುವುದು ಕಂಡುಬಂದರೆ ಅವರನ್ನು ನೇರವಾಗಿ ಮರಣದಂಡನೆಗೆ ಗುರಿಪಡಿಸಲಾಗುವುದು ಎಂದು ಕಿಮ್ ಜಾಂಗ್ ಉನ್ ಆದೇಶಿಸಿದ್ದರು.
* ಕೊರಿಯಾ ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. ಇದನ್ನು ಮನಗಂಡು ಕಿಮ್ ದೇಶದ ಜನತೆಗೆ ಒಂದು ಸಂದೇಶ ನೀಡಿದರು. 10 ಮಕ್ಕಳನ್ನು ಪಡೆಯುವಂತೆ ಹೆಣ್ಣುಮಕ್ಕಳಿಗೆ ಮನವಿ ಮಾಡಿಕೊಂಡರು. ದೇಶದಲ್ಲಿ ಜನಸಂಖ್ಯೆ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿ ಸರ್ವಾಧಿಕಾರಿ ಕಣ್ಣೀರಿಟ್ಟರು. ದೇಶದ ನಾಯಕ ಕಣ್ಣೀರಿಡುತ್ತಿರುವುದನ್ನು ನೋಡಿ ಪ್ರಜೆಗಳು ಸಹ ಕಣ್ಣೀರು ಹಾಕಿದರು. ಒಂದು ವೇಳೆ, ತಮ್ಮ ನಾಯಕ ಕಣ್ಣೀರು ಹಾಕುತ್ತಿರುವಾಗ, ತಾವು ಸುಮ್ಮನೆ ಕುಳಿತರೆ ಮರಣದಂಡನೆ ವಿಧಿಸಬಹುದು ಎಂಬ ಆತಂಕ ಎಲ್ಲರಲ್ಲಿತ್ತು ಎಂಬ ವಿಶ್ಲೇಷಣೆಗಳು ಬಂದಿವೆ.
ಪ್ರವಾಸಕ್ಕೆ ಹೋಗ್ತಾರಾ ವಿದೇಶಿಗರು?
ವಿಚಿತ್ರ ಆಡಳಿತ ಶೈಲಿ ಮತ್ತು ಕಾನೂನುಗಳಿಗೆ ಕುಖ್ಯಾತಿ ಪಡೆದಿರುವ ಉತ್ತರ ಕೊರಿಯಾಗೆ ಪಾಶ್ಚಾತ್ಯ ಪ್ರವಾಸಿಗರು ಪ್ರವಾಸ ಕೈಗೊಳ್ಳುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಕೊರಿಯಾದಲ್ಲಿ ಇರುವುದು ಕಮ್ಯುನಿಸ್ಟ್ ಆಡಳಿತ ವ್ಯವಸ್ಥೆ. ಚೀನಾ ಮತ್ತು ರಷ್ಯಾದಲ್ಲೂ ಕಮ್ಯುನಿಸ್ಟ್ ಆಡಳಿತ ಇದೆ. ಹೀಗಾಗಿ, ಈ ಎರಡು ದೇಶಗಳ ನಾಗರಿಕರು ಕೊರಿಯಾಗೆ ಪ್ರವಾಸ ಕೈಗೊಳ್ಳುವವರಾಗಿದ್ದಾರೆ. ಆದರೆ, ಇತರೆ ದೇಶಗಳ ಜನರು ಕೊರಿಯಾಗೆ ಪ್ರವಾಸ ಹೋಗಲು ಹಿಂದೇಟು ಹಾಕುತ್ತಾರೆ. ಕಾರಣ, ಅಲ್ಲಿನ ಆಡಳಿತ ವ್ಯವಸ್ಥೆ. ಹುಚ್ಚು ದೊರೆಯ ನಿಯಮಗಳು ಹೊರಗಿನವರಲ್ಲಿ ಅಚ್ಚರಿ ಮೂಡಿಸುವಂತಿವೆ. ಬೇರೆಯವರು ಅಲ್ಲಿ ಹೋದರೆ ಕಥೆ ಏನು ಎಂಬಂಥ ಭಾವನೆ ಇರುತ್ತದೆ.