ಬೆಂಗಳೂರು: ಕಲ್ಯಾಣ ಕರ್ನಾಟಕದಲ್ಲಿ ವರುಣನ ಅಬ್ಬರ ಜೋರಾಗಿದೆ. ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಂತೂ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯ÷ಸ್ತವಾಗಿದ್ದು, ನಿರಂತರ ಮಳೆಗೆ ಕಲ್ಯಾಣ ಕರ್ನಾಟಕ ತತ್ತರಿಸಿದೆ.
ಕಾಗಿಣಾ ನದಿ ಪ್ರವಾಹಕ್ಕೆ ಸೇಡಂ ತಾಲೂಕಿನ ಮಳಖೇಡ ತಾಂಡಾದ ಹಲವು ಮನೆಗಳಿಗೆ ನೀರು ನುಗ್ಗಿದೆ. ಒಂದು ತಿಂಗಳ ಕಂದಮನನ್ನು ಹೊತ್ತು ಎರಡು ದಿನಗಳಿಂದ ಛಾವಣಿ ಮೇಲೆ ತಾಯಿ ಆಶ್ರಯ ಪಡೆದಿದ್ದಾಳೆ. ಜೇವರ್ಗಿ ತಾಲೂಕಿನ ಮಾಹೂರ ಗ್ರಾಮ ನಡುಗಡ್ಡೆಯಾಗಿದೆ. ಶಾಸಕ ಡಾ.ಅಜಯ್ ಸಿಂಗ್ ಬೋಟ್‌ನಲ್ಲಿ ಮಾಹೂರ ಗ್ರಾಮಕ್ಕೆ ಭೇಟಿ ನೀಡಿ, ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ. ಚಿಂಚೋಳಿ ತಾಲೂಕಿನ ಜೆಟ್ಟೂರ್ ಗ್ರಾಮದಲ್ಲಿ ಹಳ್ಳದ ನೀರು ಕೊಟ್ಟಿಗೆ ನುಗ್ಗಿ 42 ಎತ್ತುಗಳು ಮೃತಪಟ್ಟಿದ್ದು, 5 ಜಾನುವಾರು ನೀರು ಪಾಲಾಗಿವೆ.ಇದನ್ನೂ ಓದಿ:ಬಾಗಲ ಕೋಟೆ| ಭಾರೀ ಮಳೆಗೆ ಜಿಲ್ಲೆಯಲ್ಲಿ 321 ಮನೆ ಕುಸಿತ
ಭೀಮಾ ನದಿಯ ಅಬ್ಬರಕ್ಕೆ ಯಾದಗಿರಿ ನಗರದಲ್ಲಿನ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ನಗರದ ಹಲವು ಪ್ರಮುಖ ರಸ್ತೆಗಳು ಬಂದ್ ಆಗಿರುವುದರಿಂದ ಜನ ಪರದಾಟ ನಡೆಸಿದ್ದಾರೆ. ಹೀರೇಹಳ್ಳದ ಸೇತುವೆ ಮುಳುಗಡೆಯಿಂದ ಯಾದಗಿರಿ-ಕಲಬುರಗಿ ರಸ್ತೆ ಮಾರ್ಗ ಬಂದ್ ಆಗಿದೆ. ಇನ್ನೂ ಗಡಿಜಿಲ್ಲೆ ಬೀದರ್‌ನಲ್ಲಿ ಭಾರೀ ಮಳೆಯಾಗಿದೆ. ಭಾಲ್ಕಿಯ ಎಡದಂಡೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಸಾವಿರಾರು ಎಕರೆ ಬೆಳೆ ನೀರುಪಾಲಾದ್ರೆ ಕಟ್ಟಿತೂಗಾಂವ್ ಗ್ರಾಮದ ಮಹಾದೇವ ದೇವಸ್ಥಾನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ.
ವಿಜಯಪುರ ಜಿಲ್ಲೆಯಲ್ಲೂ ಪ್ರವಾಹ ಸೃಷ್ಟಿಸಿದೆ. `ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೆ ಪ್ರವಾಹ ಪೀಡಿತ ಪ್ರದೇಶಕ್ಕೆ ಸಚಿವ ಎಂ.ಬಿ.ಪಾಟೀಲ್ ಭೇಟಿ ನೀಡಿದ್ದಾರೆ. ಆಲಮೇಲ ತಾಲೂಕಿನ ಕುಮಸಗಿ ಗ್ರಾಮದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ. ಮಳೆ ಸಂಬಂಧ ಭಾನುವಾರ (ಸೆ.28) ಸಿಎಂ ಸಿದ್ದರಾಮಯ್ಯ ಸಭೆ ಮಾಡಿದ್ದಾರೆ. ಕೃಷ್ಣೆ ಮತ್ತು ಭೀಮಾ ನದಿ ತೀರದಲ್ಲಿ ಪ್ರವಾಹದ ಸ್ಥಿತಿ ಹಿನ್ನೆಲೆ ತೀವ್ರ ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕೆ ಸಿಎಂ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ರಾಯಚೂರು | ಜಾತಿಗಣತಿ ಸಮೀಕ್ಷಾ ಕಾರ್ಯಕ್ಕೆ ನಿರ್ಲಕ್ಷ್ಯ ತೋರಿದ ಅಧಿಕಾರಿ ಅಮಾನತು

