ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ತೆರವುಗೊಳಿಸಿದ ನಂತರ ಇದೇ ಮೊದಲಬಾರಿಗೆ ಚುನಾವಣೆ ನಡೆಯುತ್ತಿದ್ದು, ಸ್ಥಳೀಯರಲ್ಲದವರಿಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 2019 ರಲ್ಲಿ 370ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಾಗಲಿದೆ. ಇದರಿಂದ ಕಾಶ್ಮೀರೇತರೂ ಮತ ಚಲಾಯಿಸಲು ಮತ್ತು ಭೂಮಿಯನ್ನು ಹೊಂದಲು ಅನುವು ಮಾಡಿಕೊಡಲಿದೆ. ಇದನ್ನೂ ಓದಿ: ಹಬ್ಬಕ್ಕೂ ಮುನ್ನ ಎಕೆ 47 ಒಳಗೊಂಡ ದೋಣಿ ಪತ್ತೆ – ಮಹಾರಾಷ್ಟ್ರದಲ್ಲಿ ಹೈ ಅಲರ್ಟ್
ಜಮ್ಮು ಹಾಗೂ ಕಾಶ್ಮೀರ ಮುಖ್ಯ ಚುನಾವಣಾ ಅಧಿಕಾರಿ ಹಿರ್ದೇಶ್ ಕುಮಾರ್, ಚುನಾವಣೆಗೆ ಮುನ್ನ 20 ಲಕ್ಷಕ್ಕೂ ಅಧಿಕ ಹೊಸ ಮತದಾರರು ಈ ಪ್ರದೇಶದಲ್ಲಿ ನೋಂದಣಿಯಾಗುವ ಸಾಧ್ಯತೆ ಇದೆ. ಇದರಿಂದ ಮತದಾರರ ಸಂಖ್ಯೆ ಶೇ.33ಕ್ಕೂ ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ಈ ಕೇಂದ್ರಾಡಳಿತ ಪ್ರದೇಶದಲ್ಲಿ 76 ಲಕ್ಷ ಮತದಾರರಿದ್ದಾರೆ ಎಂದು ಹೇಳಿದ್ದಾರೆ.
370ನೇ ವಿಧಿಯನ್ನು ತೆಗೆದುಹಾಕಿದ ಬಳಿಕ ಈ ಮೊದಲು ಮತ ಹಾಕಲು ಸಾಧ್ಯವಿಲ್ಲದವರೂ ಈಗ ಮತದಾರರಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ಈ ಹಿನ್ನೆಲೆ ಕಾಶ್ಮೀರಿಯಲ್ಲದವರು ಸೇರಿ ಮತದಾರರ ಅಂತಿಮ ಪಟ್ಟಿಯಲ್ಲಿ 20 – 25 ಲಕ್ಷ ಹೊಸ ಮತದಾರರು ಸೇರ್ಪಡೆಯಾಗುವ ಸಾಧ್ಯತೆಯಿದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ವಾಸಿಸುತ್ತಿರುವ ಹಾಗೂ ಕೆಲಸ ಮಾಡುತ್ತಿರುವ ಯಾರಾದರೂ ಅಲ್ಲಿ ಇನ್ಮುಂದೆ ಮತ ಹಾಕಬಹುದಾಗಿದೆ ಎಂದು ಹಿರ್ದೇಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ ನಾಗಿಣಿ ಡ್ಯಾನ್ಸ್ – ಇಬ್ಬರು ಎತ್ತಂಗಡಿ
ಚುನಾವಣಾ ಆಯೋಗದ ಈ ನಡೆಗೆ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಈ ಕುರಿತು ಟ್ವೀಟ್ ಮಾಡಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ, `ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ತಾತ್ಕಾಲಿಕ ಮತದಾರರನ್ನು ಆಮದು ಮಾಡಿಕೊಳ್ಳುವ ಅಗತ್ಯವಿದೆಯೇ? ಜಮ್ಮು ಹಾಗೂ ಕಾಶ್ಮೀರದ ಜನರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಿದಾಗ ಇವುಗಳಲ್ಲಿ ಯಾವುದೂ ಬಿಜೆಪಿಗೆ ಸಹಾಯ ಮಾಡುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.
ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಬಿಜೆಪಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವತ್ತ ಗಮನ ಹರಿಸಿದೆ. ಸ್ಥಳೀಯರಲ್ಲದವರಿಗೆ ಮತ ಚಲಾಯಿಸಲು ಅವಕಾಶ ನೀಡುವುದು ಅಂದರೆ ನಿಸ್ಸಂಶಯವಾಗಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವುದು. ಸ್ಥಳೀಯರನ್ನು ಬಲಹೀನಗೊಳಿಸಲು ಕಬ್ಬಿಣದ ಮುಷ್ಟಿಯೊಂದಿಗೆ ಜಮ್ಮು ಹಾಗೂ ಕಾಶ್ಮೀರದ ಆಡಳಿತವನ್ನು ಮುಂದುವರಿಸುವುದು ನಿಜವಾದ ಗುರಿಯಾಗಿದೆ. ಅದಕ್ಕಾಗಿ ಹಿಂಬಾಗಿಲಿನಿಂದ 25 ಲಕ್ಷ ಬಿಜೆಪಿ ಮತದಾರರನ್ನು ತರುವ ಪ್ರಯತ್ನ ಮಾಡುತ್ತಿದೆ ಎಂದು ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.