ಲಕ್ನೋ: ಖ್ಯಾತ ಹಿರಿಯ ನಟಿ ಮತ್ತು ಬಿಜೆಪಿ ನಾಯಕಿ ಜಯಪ್ರದಾ ವಿರುದ್ಧ ಉತ್ತರ ಪ್ರದೇಶದ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಹೀಗಾಗಿ ನಟಿಯನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.
2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಯಪ್ರದಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಆರೋಪಿಸಲಾಗಿತ್ತು. ಅಷ್ಟೇ ಅಲ್ಲದೇ ಈ ಕುರಿತು ಕಳೆದ ವರ್ಷ ಪ್ರಕರಣ ಸಹ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಈಗ ಉತ್ತರ ಪ್ರದೇಶದ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಅನ್ನು ಹೊರಡಿಸಿದೆ.
ಈ ಪ್ರಕರಣದ ವಿಚಾರಣೆಗೆ ಜಯಪ್ರದಾ ಪದೇ ಪದೇ ಗೈರಾಗುತ್ತಿದ್ದರು. ಇದೇ ಕಾರಣದಿಂದ ಇದೀಗ ಸ್ಥಳೀಯ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 20 ರಂದು ನಡೆಯಲಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಮಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಸಮಾಜವಾದಿ ಪಕ್ಷದ ಆಜಮ್ ಖಾನ್ ಅವರ ವಿರುದ್ಧ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಜಯಪ್ರದಾ ಅವರನ್ನು ಸೋಲಿಸಿದ್ದರು.
ಪಂಚಭಾಷಾ ನಟಿಯಾಗಿರುವ ಜಯಪ್ರದಾ ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ಅಭಿನಯಸಿದ್ದಾರೆ.