ಬೆಂಗಳೂರು: ರೌಡಿಗಳ ಕೈಗೆ ಮಾರಕಾಸ್ತ್ರಗಳು ಹೇಗೆ ಸಿಗುತ್ತೆ, ಎಲ್ಲಿ ಸಿಗುತ್ತೆ ಎನ್ನುವುದು ಸಾಮಾನ್ಯರಿಗೆ ತಿಳಿಯದ ವಿಚಾರ. ಎಲ್ಲೋ ಅಜ್ಞಾತ ಸ್ಥಳಗಳಲ್ಲಿ ಈ ಮಚ್ಚು ಲಾಂಗ್‍ಗಳು ರೆಡಿಯಾಗುತ್ತಿದ್ದವು. ಆದರೆ ಮಧ್ಯಪ್ರದೇಶ ಮೂಲದ ಅಲೆಮಾರಿ ಜನರು ರಾಜರೋಷವಾಗಿ ಬೆಂಗಳೂರು ರಸ್ತೆಯ ಪಕ್ಕದಲ್ಲೇ ಇಂತಹ ಮಾರಕಾಸ್ತ್ರಗಳನ್ನ ರೆಡಿ ಮಾಡಿ ಮಾರಾಟ ಮಾಡುತ್ತಿದ್ದಾರೆ.
ರೈತಾಪಿ ವರ್ಗದವರಿಗೆ ಬೇಕಾದ ಸಲಕರಣೆಗಳ ಜೊತೆಗೆ ಭಾರೀ ಹರಿತವಾಗಿರೋ ಮಚ್ಚುಗಳನ್ನ ರಸ್ತೆ ಪಕ್ಕದಲ್ಲೇ ಮಾರಾಟ ಮಾಡುತ್ತಿದ್ದಾರೆ. ಮಾಗಡಿ ರಸ್ತೆಯ ಚಿಕ್ಕ ಗೊಲ್ಲರಟ್ಟಿಯ ರಸ್ತೆ ಪಕ್ಕ ಬಿಡಾರ ಹಾಕಿರುವ ಅಲೆಮಾರಿಗಳು ಹೆಚ್ಚು ಉದ್ದವಾದ ಮಚ್ಚುಗಳನ್ನ ಮಾಡಿಕೊಡಲ್ಲ ಎನ್ನುತ್ತಾರೆ. ಆದರೆ ನಮಗೆ ಸಿನಿಮಾ ಶೂಟಿಂಗ್‍ಗೆ ಲಾಂಗ್ ಬೇಕು ಮಾಡಿ ಕೊಡುತ್ತಿರಾ ಎಂದು ಕೇಳಿದರೆ, “ಮಾಡ್ತಿವಿ ಇದೇ ಲಾಸ್ಟ್ ಸೈಜ್” ಎಂದು ಹೇಳಿ ಚೀಲಗಳ ಮಧ್ಯೆ ಇಟ್ಟಿದ್ದ ದೊಡ್ಡ ಮಚ್ಚುಗಳನ್ನು ತೋರಿಸುತ್ತಾರೆ. ಇದೇ ಅಳತೆಯಲ್ಲಿ ಲಾಂಗ್ ಮಾಡಿಕೊಡುವಂತೆ ಕೇಳಿದರೆ, ಮಾಡಿಕೊಡಲು ಈ ಮಧ್ಯಪ್ರದೇಶದ ಗ್ಯಾಂಗ್ ಒಪ್ಪಿಕೊಂಡಿರುವುದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ವೇಳೆ ಬಯಲಾಗಿದೆ.
ಮೊದಲು ಲಾಂಗ್ ತಯಾರಿಸಿ ಕೊಡಲು ಒಪ್ಪಿಕೊಂಡಿದ್ದ ಅಲೆಮಾರಿಗಳು ನಂತರ ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆಯ ಸುಳಿವು ತಿಳಿದು ಆಗಲ್ಲ ಮುಂದೆ ಇರೋದನ್ನು ತಗೆದುಕೊಳ್ಳಿ, ನಮಗೆ ಆ ಲಾಂಗ್ ತರ ಮಾಡೋದಕ್ಕೆ ಬರೋದಿಲ್ಲ ಎಂದು ದೂರ ಸರಿದಿದ್ದಾರೆ.
ಎಷ್ಟು ಸುಲಭವಾಗಿ ಮಚ್ಚು, ಚೂರಿ, ಲಾಂಗ್‍ಗಳು ಕಡಿಮೆ ಬೆಲೆಗೆ ಸಿಗುತ್ತೆ ಎಂದು ತಿಳಿದ ಪುಡಿ ರೌಡಿಗಳ ಇದನ್ನೇ ಕೊಂಡುಕೊಂಡು ನಾನೇ ಡಾನ್ ಎಂದುಕೊಂಡು ಬಿಲ್ಡಪ್ ನೀಡುತ್ತಿದ್ದಾರೆ. ಇಷ್ಟೆಲ್ಲಾ ರಾಜರೋಷವಾಗಿ ರಸ್ತೆಯಲ್ಲಿ ಮಾರಕಾಸ್ತ್ರಗಳು ತಯಾರಿಕೆಯಾಗಿ, ಮಾರಾಟವಾಗುತ್ತಿದ್ದರೂ ಪೊಲೀಸರು ಮಾತ್ರ ಸುಮ್ಮನಿದ್ದಾರೆ.