ನೊಯ್ಡಾ: ಗರ್ಭಿಣಿಯನ್ನು ಕೊಲೆಗೈದು ಚಿನ್ನಾಭರಣ ಹಾಗೂ ದುಬಾರಿ ಬೆಲೆಯ ಬಟ್ಟೆಗಳನ್ನು ಕದ್ದು, ಅದೇ ಸೂಟ್ ಕೇಸ್ ನಲ್ಲಿ ಶವವನ್ನು ತುಂಬಿಸಿ ಎಸೆದ ಅಮಾನವೀಯ ಘಟನೆಯೊಂದು ಗಾಜಿಯಾಬಾದ್ ನಲ್ಲಿ ನಡೆದಿದೆ.
ಮೃತ ದುರ್ದೈವಿ ಮಹಿಳೆಯನ್ನು ಮಾಲಾ ಎನ್ನಲಾಗಿದ್ದು ಈಕೆಯನ್ನು ಪಕ್ಕದಲ್ಲೇ ನೆಲೆಸಿದ್ದ ಸೌರಭ್ ದಿವಾಕರ್ ಹಾಗೂ ರಿತು ಕೊಲೆ ಮಾಡಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ ಅಂತ ಗೌತಮ್ ಬುದ್ದ ನಗರದ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ತಿಳಿಸಿದ್ದಾರೆ.
Advertisement
Advertisement
ಘಟನೆ ವಿವರ:
ಕಳೆದ ಗುರುವಾರ ಮೃತ ಮಹಿಳೆ ನೆಲೆಸಿದ್ದ ಬಾಡಿಗೆ ಮನೆಗೆ ಆಕೆಯ ಸಂಬಂಧಿಕರು ಬಂದಿದ್ದರು. ಈ ವೇಳೆ ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರಿಂದ ಮಾಲಾ ತನ್ನ ಬಳಿಯಿದ್ದ ಚಿನ್ನ ಹಾಗೂ ದುಬಾರಿ ಬೆಲೆಯ ಉಡುಪುಗಳನ್ನು ತೋರಿಸಿದ್ದಾರೆ. ಇವೆಲ್ಲವೂ ಪಕ್ಕದ ಮನೆಯಲ್ಲಿದ್ದ ರಿತು ಅವರ ಕಣ್ಣಿಗೂ ಬಿದ್ದಿದೆ. ಆರೋಪಿ ರಿತು ಮನೆಗೆ ಹಿಂದುರುಗಿ ತನ್ನ ಗಂಡ ಸೌರಭ್ ಜೊತೆ ಮಾಲಾ ಬಳಿ ಚಿನ್ನಾಭರಣ ಹಾಗೂ ದುಬಾರಿ ಬೆಲೆಯ ಉಡುಪುಗಳು ಇರುವ ಬಗ್ಗೆ ಹೇಳಿದ್ದಾಳೆ. ಅಲ್ಲದೇ ಮರುದಿನ ಮಾಲಾ ಪತಿ ಶಿವಂ ಕೆಲಸಕ್ಕೆ ಹೋದ ಬಳಿಕ ತನ್ನ ಮನೆಗೆ ಮಾಲಾರನ್ನು ಕರೆಸಿಕೊಂಡಿದ್ದಾಳೆ ಅಂತ ಶರ್ಮಾ ವಿವರಿಸಿದ್ದಾರೆ.
Advertisement
Advertisement
ಮನೆಗೆ ಕರೆಸಿಕೊಂಡ ಬಳಿಕ ದಂಪತಿ ಮಾಲಾರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಮಾಲಾ ಮದುವೆ ಬಳಿಕ ಚಿನ್ನಾಭರಣ ಹಾಗೂ ಬಟ್ಟೆಗಳನ್ನು ಇಡುತ್ತಿದ್ದ ಸೂಟ್ ಕೇಸ್‍ನಲ್ಲಿ ಮಾಲಾ ಶವವನ್ನು ತುಂಬಿಸಿದ್ದಾರೆ. ಈ ಮೊದಲು ಮಾಲಾ ಅವರ ಸೂಟ್ ಕೇಸ್ ನಲ್ಲಿದ್ದ ಎಲ್ಲಾ ವಸ್ತುಗಳನ್ನು ಹಾಗೂ ಮೊಬೈಲನ್ನು ತೆಗೆದಿಟ್ಟುಕೊಂಡಿದ್ದಾರೆ. ಈ ಎಲ್ಲಾ ಕೃತ್ಯಗಳ ಬಳಿಕ ಅಂದರೆ 9 ಗಂಟೆಯ ನಂತರ ದಂಪತಿ ಶವ ತುಂಬಿದ ಸೂಟ್ ಕೇಸ್ ನ್ನು ತೆಗೆದುಕೊಂಡು ಗಾಜಿಯಾಬಾದ್ ಗೆ ಹೋಗುತ್ತಾರೆ. ಅಲ್ಲಿಂದ ಇಬ್ಬರು ಸೋದರಮಾವನ ಬಳಿಗೆ ಹೋಗುತ್ತಾರೆ. ಹೀಗೆ ಹೋಗುವಾಗ ಇಂದಿರಾಪುರಂ ಎಂಬ ಪ್ರದೇಶದಲ್ಲಿ ತಮ್ಮ ಕೈಲಿದ್ದ ಸೂಟ್ ಕೇಸನ್ನು ಎಸೆದಿದ್ದಾರೆ.
ಇತ್ತ ಮಾಲಾ ಕಾಣೆಯಾಗಿರುವ ಬಗ್ಗೆ ಬಿಸ್ರಾಖ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ನಾಪತ್ತೆ ಪ್ರಕರಣ ದಾಖಲಾದಂತೆ ಗಾಜಿಯಾ ಬಾದ್ ನಲ್ಲಿ ಸೂಟ್ ಕೇಸ್ ಒಳಗೆ ಮಹಿಳೆಯೊಬ್ಬರ ಶವ ಪತ್ತೆಯಾಗಿರುವುದು ಪೊಲೀಸರಿಗೆ ಮಾಹಿತಿ ದೊರೆಯುತ್ತದೆ. ಹೀಗಾಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲಿಸಿದಾಗ ಮಾಲಾ ಶವ ಇರುವುದಾಗಿ ಶಂಕೆ ವ್ಯಕ್ತಪಡಿಸುತ್ತಾರೆ. ಈ ಮಧ್ಯೆ ಮಾಲಾ ಸಂಬಂಧಿಕರು ವರದಕ್ಷಿಣೆಗೋಸ್ಕರ ಪತಿ ಹಾಗೂ ಆತನ ಕುಟುಂಬಸ್ಥರು ಸೇರಿ ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಪ್ರಕರಣ ಸಂಬಂಧ ತನಿಖೆ ನಡೆಸಿದಾಗ, ಮಾಲಾ ಪತಿ ಶಿವಂ ಕೆಲಸಕ್ಕೆ ತೆರಳಿದ ಬಳಿಕ ಕೊಲೆ ಮಾಡಿರುವುದು ಬೆಳಕಿಗೆ ಬರುತ್ತದೆ. ಅಲ್ಲದೇ ಘಟನೆ ನಡೆದ ಬಳಿಕ ಪಕ್ಕದ ಮನೆ ನಿವಾಸಿಗಳಾದ ರೀತು, ಸೌರಭ್ ಮನೆಗೆ ವಾಪಸ್ಸಾಗಿಲ್ಲ. ಇದು ದಂಪತಿ ಮೇಲೆ ಮತ್ತುಷ್ಟು ಸಂಶಯ ಮೂಡಲು ಕಾರಣವಾಯಿತು. ಬಳಿಕ ದಂಪತಿಯನ್ನು ಪೊಲೀಸರು ಬಂಧಿಸಿದಾಗ ಚಿನ್ನಾಭರಣ, ಡ್ರೆಸ್ ಹಾಗೂ ಮೊಬೈಲ್ ಫೋನ್ ಕದ್ದಿರುವುದು ಬೆಳಕಿಗೆ ಬಂದಿದೆ ಅಂತ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ. ಆದ್ರೆ ಕೊಲೆಯಾದ ಮಾಲಾ ಗರ್ಭಿಣಿ ಅಂತ ಹೇಳಲಾಗಿದ್ದು, ಎಷ್ಟು ತಿಂಗಳಾಗಿತ್ತು ಎಂಬುದರ ಬಗ್ಗೆ ವರದಿಯಾಗಿಲ್ಲ.
ಸದ್ಯ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ), 201(ಸಾಕ್ಷಿ ನಾಶ), 316, 394(ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಅಂತ ಶರ್ಮಾ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv