ಮುಂಬೈ: ಟಾಟಾ ಟ್ರಸ್ಟ್ (Tata Trust) ಅಧ್ಯಕ್ಷ ಸ್ಥಾನಕ್ಕೆ ರತನ್ ಟಾಟಾ (Ratan Tata) ಅವರ ಮಲಸಹೋದರ ಹಾಗೂ ಟ್ರೆಂಟ್ ಅಧ್ಯಕ್ಷ ನೋಯೆಲ್ ಟಾಟಾ (Noel Tata) ಅವರನ್ನು ಆಯ್ಕೆ ಮಾಡಲಾಗಿದೆ.
67 ವರ್ಷದ ನೋಯೆಲ್ ಈಗಾಗಲೇ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿದ್ದಾರೆ, ಇದು ಟಾಟಾ ಸನ್ಸ್‌ನಲ್ಲಿ 66% ಪಾಲನ್ನು ಹೊಂದಿದೆ. 2019ರಲ್ಲಿ ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿ ಸೇರಿಕೊಂಡಿದ್ದ ಇವರು 2022ರಲ್ಲಿ ಸರ್ ದೊರಾಬ್ಜಿ ಟ್ರಸ್ಟ್ ಮಂಡಳಿಗೂ ನೇಮಕಗೊಂಡಿದ್ದರು.
Advertisement
ರತನ್ ಟಾಟಾ ಅವರ ತಂದೆ ನೇವಲ್ ಎರಡು ಮದುವೆಯಾಗಿದ್ದರು. ಮೊದಲ ಪತ್ನಿ ಸೂನಿ ಕಮಿಶರಿಯಟ್, ಎರಡನೇ ಪತ್ನಿ ಸ್ವಿಟ್ಜರ್ಲೆಂಡ್‌ನ ಉದ್ಯಮಿ ಸಿಮೋನ್ ಡ್ಯುನೊಯರ್. ನೇವಲ್ ಮತ್ತು ಸೂನಿ ದಂಪತಿಗೆ ರತನ್ ಮತ್ತು ಜಿಮ್ಮಿ ಟಾಟಾ ಜನಿಸಿದರು. 1940 ರದಶಕದಲ್ಲಿ ನೇವಲ್ ಮತ್ತು ಸೂನಿ ದಂಪತಿ ಬೇರ್ಪಟ್ಟಿದ್ದರು. ಬೇರ್ಪಟ್ಟ ನಂತರ ಸಿಮೋನ್ ಡ್ಯುನೊಯರ್ ಅವರನ್ನು 1955 ರಲ್ಲಿ ನೇವಲ್ ವಿವಾಹವಾದರು. ಈ ದಂಪತಿಯ ಪುತ್ರನೇ ನೇಯಲ್ ಟಾಟಾ.
Advertisement
ಟಾಟಾ ಟ್ರಸ್ಟ್‌ನ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ ಅವರನ್ನೇ ಆಯ್ಕೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಈಗ ಅಧಿಕೃತವಾಗಿ ಹೆಸರು ಘೋಷಣೆಯಾಗಿದೆ. ನೋಯೆಲ್ ಅವರನ್ನು ಆಯ್ಕೆ ಮಾಡುವ ಮೂಲಕ ಟಾಟಾ ಕುಟುಂಬದ ಸದಸ್ಯರ ಬಳಿಯೇ ಅಧಿಕಾರ ಉಳಿಸಿದಂತೆ ಆಗುತ್ತದೆ. ಇದನ್ನೂ ಓದಿ: ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್ – ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?
Advertisement
Advertisement
ನೇವಲ್ ಸಾಧನೆ ಏನು?
ನೋಯೆಲ್ ಅವರು ಟ್ರೆಂಟ್ ಮತ್ತು ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್‌ನ ಅಧ್ಯಕ್ಷರಾಗಿದ್ದಾರೆ. ನೋಯೆಲ್ ಅವರು ಟಾಟಾ ಇಂಟರ್‌ನ್ಯಾಶನಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಟೈಟಾನ್ ಕಂಪನಿ ಮತ್ತು ಟಾಟಾ ಸ್ಟೀಲ್‌ನ ಉಪಾಧ್ಯಕ್ಷರಾಗಿಯೂ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ.
ನೋಯೆಲ್ ಅವರು ನೇವಲ್ ಟಾಟಾ ಮತ್ತು ಸಿಮೋನ್ ಟಾಟಾ ಅವರ ಮಗ. ನೋಯೆಲ್ ನೇವಲ್ ಟಾಟಾ ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಹೋದರಿ ಆಲೂ ಮಿಸ್ತ್ರಿ ಅವರನ್ನು ವಿವಾಹವಾಗಿದ್ದಾರೆ. 2016 ರಲ್ಲಿ ಸೈರಸ್ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಯಿತು. ನಂತರ ರತನ್ ಟಾಟಾ ಅವರು ಫೆಬ್ರವರಿ 2017 ರವರೆಗೆ ನಾಲ್ಕು ತಿಂಗಳ ಕಾಲ ಗ್ರೂಪಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಇದನ್ನೂ ಓದಿ: ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್ ಆಗಿದ್ದು ಯಾಕೆ?
ನೋಯೆಲ್ ಅವರು ಸಸೆಕ್ಸ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. 2003 ರಲ್ಲಿ ಟೈಟಾನ್ ಇಂಡಸ್ಟ್ರೀಸ್ ಮತ್ತು ವೋಲ್ಟಾಸ್‌ನ ನಿರ್ದೇಶಕರಾಗಿ ನೋಯೆಲ್ ಆಯ್ಕೆ ಆಗಿದ್ದರು.