ದುಡಿಯುವ ಜಗತ್ತಿನಲ್ಲಿ ಬದುಕುತ್ತಿರುವ ನಾವೆಲ್ಲ ಸಂಬಳ ಬಂದ ಎರಡು ದಿನಗಳವರೆಗೂ ಖುಷಿಯಾಗಿರುತ್ತೇವೆ. ಅದಾದ ನಂತರ ಮುಂದಿನ ಸಂಬಳದವರೆಗೂ ಪರಿಸ್ಥಿತಿಯೇ ಬೇರೆ ಇರುತ್ತದೆ. ಇದು ಒಂದು ಕಡೆಯಾದರೆ ಇನ್ನೊಂದೆಡೆ ಕೆಲಸದ ಕಿರಿಕಿರಿ… ಒತ್ತಡ ಹಾಗೂ ಅದನ್ನು ಬೇಗ ಮುಗಿಸಿ ಬಿಡುವ ಎಂಬ ಆಲೋಚನೆ ಇದೆಲ್ಲವೂ ನಮ್ಮನ್ನು ತಿಂದು ಹಾಕುತ್ತದೆ. ಒಮ್ಮೆ ಆ ದಿನದ ಕೆಲಸ ಮುಗಿದರೆ ಸಾಕು ಎಂಬ ಸ್ಥಿತಿಯಲ್ಲಿರುತ್ತೇವೆ. ಇನ್ನು ಕೆಲವೊಮ್ಮೆ ಕೆಲಸ ಮುಗಿಯದೆ ಇದ್ದಾಗ ಆಫೀಸ್ ಅವಧಿ ಬಳಿಕವೂ ಕೆಲಸ ಮಾಡಬೇಕಾಗುತ್ತದೆ. ಇದು ಇನ್ನೊಂದು ರೀತಿಯ ಸಮಸ್ಯೆಯಾಗಿ ಬಿಟ್ಟಿದೆ.
ಹೌದು.. ಕೆಲಸ ಮಾಡುವ ನಾವುಗಳೆಲ್ಲ ಕೆಲವೊಮ್ಮೆ ನಿಗದಿತ ಅವಧಿ ಮೀರಿ ಕೆಲಸ ಮಾಡುತ್ತೇವೆ. ಎಲ್ಲಾ ವಲಯಗಳಲ್ಲಿ ಅಲ್ಲದಿದ್ದರೂ ಕೂಡ ಕೆಲವೊಂದು ಕಡೆ ಅವಧಿ ಮೀರಿ ಕೆಲಸ ಮಾಡಬೇಕಾದ ಸಂದರ್ಭ ಹಾಗೂ ಪರಿಸ್ಥಿತಿ ಎದುರಾಗುತ್ತದೆ. ಇದು ಸಾಮಾನ್ಯವಾಗಿ ದುಡಿಯುತ್ತಿರುವ ಎಲ್ಲರಿಗೂ ಅನುಭವವಾಗಿರುತ್ತದೆ. ಆದರೆ ಕೆಲವೊಮ್ಮೆ ಇದು ಹಿತವೆನಿಸಿದರೂ ಕೂಡ ಕೆಲವೊಮ್ಮೆ ಸಾಕಾಗಿಬಿಡುತ್ತದೆ. ಆದರೆ ಇದಕ್ಕೆ ತಡೆ ನೀಡುವ ಉದ್ದೇಶದಿಂದ ಇತ್ತೀಚಿಗೆ ಎನ್ ಸಿ ಪಿ ಸಂಸದೆ ಸುಪ್ರಿಯಾ ಸುಳೆ ಅವರು ಸಂಪರ್ಕ ಕಡಿತಗೊಳಿಸುವ ಹಕ್ಕು ಮಸೂದೆ 2025 ಎಂಬ ಖಾಸಗಿ ಮಸೂದೆಯೊಂದನ್ನು ಮಂಡಿಸಿದರು. ಇದಕ್ಕೂ ಹಾಗೂ ಕೆಲಸಕ್ಕೂ ಏನು ಸಂಬಂಧ? ಏನಿದು ಸಂಪರ್ಕ ಕಡಿತಗೊಳಿಸುವ ಹಕ್ಕು? ಇದೆಲ್ಲ ಪ್ರಶ್ನೆಗಳಿಗೂ ಸಂಪೂರ್ಣ ಮಾಹಿತಿ ಕೆಳಗಿದೆ.
ಸಾಮಾನ್ಯವಾಗಿ ದುಡಿಯಲು ಆರಂಭಿಸಿದಾಗ ಸ್ವಲ್ಪ ಕಷ್ಟವಾಗುತ್ತದೆ. ಆರ್ಥಿಕವಾಗಿ ಸಬಲರಾದರೂ ಕೂಡ ನಮ್ಮ ಖಾಸಗಿ ಜೀವನದಲ್ಲಿ ಹಿಂದೆ ಬೀಳುತ್ತೇವೆ. ಕೆಲಸದ ಜೀವನಕ್ಕೆ ಹೆಚ್ಚು ಸಮಯ ಕೊಟ್ಟು ಖಾಸಗಿ ಜೀವನಕ್ಕೆ ಕಡಿಮೆ ಸಮಯ ಕೊಡುವ ಸಂದರ್ಭ ಬರುತ್ತದೆ. ಕೆಲವೊಮ್ಮೆ ಕೆಲಸದ ಅವಧಿ ಮುಗಿದ ಮೇಲೆಯೂ ಕೂಡ ಮನೆಗೆ ಬಂದ ಮೇಲೆ ನಾವು ಮತ್ತೆ ಕೆಲಸ ಮಾಡಬೇಕಾಗುತ್ತದೆ. ಹೀಗಿರುವಾಗ ಕೆಲಸದ ಜೀವನ ಹಾಗೂ ಖಾಸಗಿ ಜೀವನದ ನಡುವೆ ಸಮತೋಲನ ಉಂಟು ಮಾಡುವುದೇ ಈ ಸಂಪರ್ಕ ಕಡಿತಗೊಳಿಸುವ ಹಕ್ಕು. ಸದ್ಯ ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಡಿಸೆಂಬರ್ 5ರಂದು ಸಂಸದೆ ಸುಪ್ರಿಯಾ ಸುಳೆ ಅವರು ಈ ಖಾಸಗಿ ಮಸೂದೆಯನ್ನು ಮಂಡಿಸಿದರು.
ಏನಿದು ಖಾಸಗಿ ಮಸೂದೆ?
ಸಂಸತ್ತಿನಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯ ಸಚಿವರಲ್ಲದ ಸದಸ್ಯರು ಮಂಡಿಸುವ ಮಸೂದೆಯನ್ನು ಖಾಸಗಿ ಮಸೂದೆ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇಲಾಖೆಯ ಸಚಿವರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಮಸೂದೆಗಳನ್ನು ಮಂಡಿಸುತ್ತಾರೆ. ಆದರೆ ಸದನದ ಸಚಿವರಲ್ಲದ ಸದಸ್ಯರು ಈ ಖಾಸಗಿ ಮಸೂದೆಯನ್ನು ಮಂಡಿಸುತ್ತಾರೆ. ಸಾರ್ವಜನಿಕ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಸಂಬಂಧಿಸಿದಂತೆ ಗಮನಸೆಳೆಯುವುದು ಹಾಗೂ ಸರ್ಕಾರದ ಗಮನಕ್ಕೆ ಬರದ, ನಿರ್ಲಕ್ಷಿಸಿದ ವಿಷಯಗಳು ಕುರಿತು ಇವರು ಮಸೂದೆ ಮಂಡಿಸುತ್ತಾರೆ. ಆ ಕುರಿತು ಶಾಸನ ರೂಪಿಸುವುದು ಇದರ ಉದ್ದೇಶವಾಗಿರುತ್ತದೆ. ಇನ್ನು ಈ ಖಾಸಗಿ ಮಸೂದೆಯನ್ನು ಅಧಿವೇಶನ ನಡೆಯುವಾಗ ಪ್ರತಿ ಶುಕ್ರವಾರದಂದು ಮಾತ್ರ ಮಂಡಿಸಲಾಗುತ್ತದೆ. ಈ ಮಸೂದೆ ಮಂಡನೆಗೆ ಅಥವಾ ಚರ್ಚೆಗೆ ದೀರ್ಘ ಅವಕಾಶ ಇರುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಈ ಖಾಸಗಿ ಮಸೂದೆಗಳು ಅಂಗೀಕಾರ ಆಗುವುದಿಲ್ಲ. 1952 ರಿಂದ ಈವರೆಗೂ 14 ಕ್ಕಿಂತ ಕಡಿಮೆ ಖಾಸಗಿ ಖಾಸಗಿ ಮಸೂದೆಗಳು ಅಂಗೀಕಾರಗೊಂಡಿವೆ.
ಸಂಪರ್ಕ ಕಡಿತಗೊಳಿಸುವ ಹಕ್ಕು:
ಈ ಮೊದಲೇ ಹೇಳಿದಂತೆ ಕೆಲಸದ ಅವಧಿ ಮುಗಿದ ಮೇಲೆಯೂ ಕೆಲಸ ಮಾಡುವ ಸಂದರ್ಭ ಎದುರಾಗುತ್ತದೆ. ಈ ಕಾರಣದಿಂದಲೇ ಸಂಸದೆ ಈ ಮಸೂದೆಯನ್ನು ಮಂಡಿಸಿದ್ದು, ಈವರೆಗೂ ಕಾಯ್ದೆಯಾಗಿ ಅಂಗೀಕಾರಗೊಂಡಿಲ್ಲ. ಈ ಮಸೂದೆಯ ಪ್ರಕಾರ ಉದ್ಯೋಗಿಗಳು ಉದ್ಯೋಗಿಗಳು ತಮ್ಮ ಕೆಲಸದ ಅವಧಿ ಮುಗಿದ ನಂತರ ಕಚೇರಿಗೆ ಸಂಬಂಧಿಸಿದ ಕರೆ, ಸಂದೇಶ ಹಾಗೂ ಇಮೇಲ್ ಗಳಿಗೆ ಉತ್ತರಿಸದೇ ಇರಬಹುದು.

ಈ ರೀತಿಯಾಗಿ ಕಚೇರಿಗೆ ಸಂಬಂಧಿಸಿದ ವಿಚಾರವಾಗಿ ದೂರವಿರಲು ಕಾನೂನು ಬದ್ಧ ಹಕ್ಕನ್ನು ನೀಡುವ ಮುಖ್ಯ ಗುರಿಯನ್ನು ಈ ಮಸೂದೆ ಹೊಂದಿದೆ. ತಂತ್ರಜ್ಞಾನ ಬೆಳೆದಂತೆ ಇದೀಗ ಆಫೀಸ್ ಕೆಲಸವನ್ನು ಮನೆಯಲ್ಲಿ ಮಾಡಬಹುದು ಅಥವಾ ಇತ್ತೀಚಿಗೆ ಬಂದಿರುವ ರಿಮೋಟ್ ವರ್ಕ್ ನಿಂದಾಗಿ ಮನೆಯಲ್ಲಿ ಕೆಲಸ ಮಾಡಬಹುದು. ಇದು ಇದೀಗ ಎಲ್ಲಾ ರೀತಿಯ ಕೆಲಸಗಳ ಮೇಲೆ ಪರಿಣಾಮ ಬೀರಿದ್ದು, ಖಾಸಗಿ ಜೀವನಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಹೀಗಾಗಿ ಖಾಸಗಿ ಜೀವನ ಮತ್ತು ಉದ್ಯೋಗದ ಜೀವನದ ನಡುವೆ ಅಂತರವನ್ನು ಸೃಷ್ಟಿಸಬೇಕು. ಕೆಲಸದ ಒತ್ತಡವನ್ನ ಈ ಮಸೂದೆಯ ಮೂಲಕ ಕಡಿಮೆ ಮಾಡಬಹುದು ಎನ್ನುವುದೇ ಇದರ ಉದ್ದೇಶ.
ಏನಿದರ ಗುರಿ?
– ಕೆಲಸದ ಅವಧಿಯ ನಂತರವೂ ಕಚೇರಿಯ ಕೆಲಸ ಮಾಡುವುದನ್ನು ಈ ಮೂಲಕ ನಿಲ್ಲಿಸಬಹುದು.
– ಕೆಲಸದ ಸಮಯದ ನಂತರ ಉದ್ಯೋಗಿಗಳು ಕೆಲಸಕ್ಕೆ ಸಂಬಂಧಿಸಿದ ಕರೆ ಹಾಗೂ ಇ-ಮೇಲ್ಗಳಿಗೆ ಉತ್ತರಿಸಲೇಬೇಕಾದ ಅವಶ್ಯಕತೆ ಇರುವುದಿಲ್ಲ.
– ಇನ್ನು ಕೆಲವೊಮ್ಮೆ ಇ-ಮೇಲ್ ಅಥವಾ ಕರೆಗಳಿಗೆ ಉತ್ತರಿಸದಿದ್ದರೆ ದಂಡ ಅಥವಾ ಇನ್ನಿತರ ಕ್ರಮ ಕೈಗೊಳ್ಳಲಾಗುತ್ತದೆ. ಈ ಮಸೂದೆಯಿಂದಾಗಿ ಇವುಗಳನ್ನು ತಡೆಯಬಹುದು
– ಇನ್ನು ಕೆಲಸದ ಅವಧಿ ನಂತರ ಕೆಲಸ ಕೆಲಸ ಮಾಡಲು ಉದ್ಯೋಗಿಗಳಿಗೆ ಅಧಿಕ ಅವಧಿಯ ವೇತನ ನೀಡಬೇಕು.

ಸದ್ಯ ಈ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಇನ್ನು ಅಂಗೀಕಾರ ಆಗಿಲ್ಲ. ಒಂದು ವೇಳೆ ಅಂಗೀಕಾರವಾದರೆ ಕೆಲಸದ ಅವಧಿಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ.
ಈ ಮಸೂದೆ ಅಮೇರಿಕಾ, ಆಸ್ಟ್ರಿಯ, ಒಮೆನಿಯಾ ದೇಶಗಳಲ್ಲಿ ಕಾನೂನಾಗಿಲ್ಲ. ಜರ್ಮನಿಯಲ್ಲೂ ಕೂಡ ಇದನ್ನು ಕಾನೂನಾಗಿ ಅಂಗೀಕಾರ ಮಾಡದೆ ಇದ್ದರೂ ಕೂಡ ಕೆಲವು ಕಂಪನಿಗಳು ಇದನ್ನು ಅಳವಡಿಸಿಕೊಂಡಿವೆ. ಇದರ ಹೊರತಾಗಿ ಡೆನ್ಮಾರ್ಕ್, ಫಿನ್ಲ್ಯಾಂಡ್ ಹಾಗೂ ಸ್ವೀಡನ್ ದೇಶಗಳಲ್ಲಿ ಈ ಕಾನೂನು ಜಾರಿಯಲ್ಲಿಲ್ಲದಿದ್ದರೂ ಸಮಯ ಹಾಗೂ ವಿಶ್ರಾಂತಿಯ ಬಗ್ಗೆ ಕೆಲವು ಕಾನೂನುಗಳಿವೆ.
ಇನ್ನು ಫ್ರಾನ್ಸ್, ಇಟಲಿ, ಸ್ಪೇನ್, ಐರ್ಲ್ಯಾಂಡ್, ಪೋರ್ಚುಗಲ್ ಹಾಗೂ ಬೆಲ್ಜಿಯಂ ದೇಶಗಳಲ್ಲಿ ಸಂಪರ್ಕ ಕಡಿತಗೊಳಿಸುವ ಹಕ್ಕು ಕಾನೂನಾಗಿ ಅಂಗೀಕಾರಗೊಂಡಿದೆ.

