– ಮತಗಳ್ಳತನ ಆರೋಪಕ್ಕೆ ಅರವಿಂದ್ ಲಿಂಬಾವಳಿ ಸ್ಪಷ್ಟನೆ ಏನು?
ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭೆಯ ಮಹಾದೇವಪುರದಲ್ಲಿ 1,00,250 ಮತಗಳ್ಳತನ ಆಗಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ, ಮಹಾದೇವಪುರ ಕ್ಷೇತ್ರದ ಮಾಜಿ ಶಾಸಕ ಅರವಿಂದ ಲಿಂಬಾವಳಿ (Arvind Limbavali) ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾದೇವಪುರದಲ್ಲಿ ಯಾವುದೇ ಅಕ್ರಮ ಆಗಿಲ್ಲ. ಸಕ್ರಮ ಚುನಾವಣೆ ನಡೆದಿದೆ. ರಾಹುಲ್ ಗಾಂಧಿ ಆರೋಪಗಳು ನಿರಾಧಾರ, ಸತ್ಯಕ್ಕೆ ದೂರ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೇ, ರಾಹುಲ್ ಗಾಂಧಿ ಮಾಡಿರುವ ಐದು ಹಂತದ ಮತಗಳ್ಳತನ ಹಾಗೂ ಏಳು ಉದಾಹರಣೆಗಳಿಗೂ ಲಿಂಬಾವಳಿ ದಾಖಲೆ ಸಹಿತ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಮೋದಿ ಮತಗಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ
ಆರೋಪ 1: ಡುಪ್ಲಿಕೇಟ್ ಮತದಾರರ ಸಂಖ್ಯೆ 11,965
ಉತ್ತರ – ಗುರುಕಿರೀತ್ ಸಿಂಗ್ ದಾಂಗ್ ಹೆಸರು ಸೇರ್ಪಡೆಗೆ 4 ಬಾರಿ ಅರ್ಜಿ ಸಲ್ಲಿಸಿದಾಗ ತಿರಸ್ಕರಿಸಲ್ಪಟ್ಟಿತ್ತು. ಆದರೆ, ಮತದಾರರ ಪಟ್ಟಿಯಲ್ಲಿ ಬೇರೆ ಬೇರೆ ಕಡೆ ಕಾಣಿಸಿಕೊಂಡಿದೆ. 3 ಕಡೆ ಹೆಸರು ರದ್ದತಿಗೆ ಅವರು ಕೋರಿದ್ದಾರೆ.
ಲಕ್ನೋದ ಆದಿತ್ಯ ಶ್ರೀವಾಸ್ತವ್ ಹೆಸರು ಲಕ್ನೋದಲ್ಲಿ ಸೇರ್ಪಡೆಯಾಗಿತ್ತು. ಬಳಿಕ ಕೆಲಸದಲ್ಲಿದ್ದ ಮುಂಬೈನಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ, ಬಳಿಕ ಬೆಂಗಳೂರಿನಲ್ಲಿ ಹೆಸರು ಸೇರಿಸಿ ಮತ ಚಲಾಯಿಸಿದ್ದಾರೆ. ಇವರು ಕೂಡ ಫಾರ್ಮ್ 7 ಮೂಲಕ ಬದಲಾವಣೆಗೆ ಅರ್ಜಿ ಕೊಟ್ಟವರು.
ವಾರಣಾಸಿಯ ವಿನೋದ್ ಸಿಂಗ್ ಬೆಂಗಳೂರಿನ ಮಾರಥಹಳ್ಳಿಯಲ್ಲಿದ್ರು. ಈಗ ಮನೆ ಖರೀದಿಸಿದ್ದಾರೆ. 513 ಬೂತ್‌ಗೆ ಮನೆ ಬದಲಾಯಿಸಿ ವೋಟ್ ಹಾಕಿದ್ದಾರೆ. ವೋಟರ್ ಲಿಸ್ಟ್ ನಿಯಮದ ಪ್ರಕಾರ ಬದಲಾಯಿಸಿಕೊಂಡಿದ್ದಾರೆ. ಇವರು ವಾರಣಾಸಿಯಲ್ಲಿ ಮತ ಹಾಕಿಲ್ಲ, ಹಾಕಿದ್ರೆ ಪ್ರೂವ್ ಮಾಡಿ
ಆರೋಪ 2: ಒಂದೇ ವಿಳಾಸದ 10,452 ಬಲ್ಕ್ ಮತದಾರರು
ಉತ್ತರ – ನಕಲಿ ವಿಳಾಸದ ಚೆಕ್ ಮಾಡಿದ್ದು, 13 ಜನ ಸಿಕ್ಕಿದ್ದಾರೆ. ಇವರು ವಿಳಾಸ ಕೊಟ್ಟರೂ ಆಯೋಗದವರು ಸೇರಿಸಿಲ್ಲ. ಒಂದೇ ಮನೆ ನಂಬರ್ 35 ಅಂತ ಇದೆ. ಇಲ್ಲಿ 80 ವೋಟರ್ಸ್ ಇದ್ದಾರೆ ಅಂದಿದ್ದಾರೆ. ಬಲ್ಕ್ ವೋಟರ್ಸ್ ಬಿಟಿಎಂ ಲೇಔಟ್‌ನಲ್ಲೂ ಇದ್ದಾರೆ. ಬಲ್ಕ್ ಮತದಾರರ ಕುರಿತ ಆರೋಪ ಸರಿಯಲ್ಲ.
ಆರೋಪ 3: 40,009 ನಕಲಿ ವಿಳಾಸಗಳು ಮತ್ತು ಅಸಿಂಧು ಮತಗಳು
ಉತ್ತರ – ನಮ್ಮ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಮನೆ ವಿಳಾಸದ ಜಾಗದಲ್ಲಿ ಜೀರೋ ಇದೆ ಅಂತ ಅಂದಿದ್ದಾರೆ. ಸಿಎಂ ಅವರ ವರುಣಾ ಕ್ಷೇತ್ರದಲ್ಲಿ ಮನೆ ವಿಳಾಸದ ಜಾಗದಲ್ಲಿ ಜೀರೋ ಜೀರೋ ಅಂತ ಇದೆ. ವರುಣಾದ ವಾರ್ಡ್ ನಂಬರ್ 8 ರಲ್ಲಿ ವಿಳಾಸ ಜಾಗದಲ್ಲಿ ಜೀರೋ ಅಂತ ಇದೆ. ನಮ್ಮಲ್ಲಿ ಇದು ತಪ್ಪಾಗಿದ್ರೆ, ಸಿದ್ದರಾಮಯ್ಯ ಕ್ಷೇತ್ರದ್ದೂ ತಪ್ಪೇ ಅಲ್ಲವಾ? ಸಂಡೂರು, ಮಾನ್ವಿ, ಮಸ್ಕಿ ಕ್ಷೇತ್ರಗಳಲ್ಲೂ ಮನೆ ವಿಳಾಸದ ಜಾಗದಲ್ಲಿ ಜೀರೋ ಜೀರೋ ಅಂತ ಇದೆ. ಇದು ಒಂದು ಎರರ್, ಸರಿಪಡಿಸುವ ಹೊಣೆ ಆಯೋಗದ್ದು. ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ – ರಾಹುಲ್ ವಿರುದ್ಧ ಹೆಚ್‌ಡಿಕೆ ಕಿಡಿ
ಆರೋಪ 4: ಫಾರ್ಮ್ 6ರ (ಹೊಸ ಮತದಾರ) ದುರ್ಬಳಕೆ-33692
ಉತ್ತರ – ಶಕುನ್ ರಾಣಿಯಯವರು 2 ಕಡೆ ಮತ ಹಾಕಿದ್ದಾರೆ ಎಂದು ರಾಹುಲ್ ಆರೋಪಿಸಿದ್ದು, ಅದನ್ನೂ ತಪಾಸಣೆ ಮಾಡಿದ್ದೇವೆ. ಅವರು ಒಂದೇ ಕಡೆ ಮತ ಹಾಕಿದ್ದಾರೆ.
ಆರೋಪ 5: ನಕಲಿ ಫೋಟೋಗಳು 4,132
ಉತ್ತರ – ಅಪ್‌ಲೋಡ್ ಮಾಡುವಾಗ ಫೋಟೋಗಳು ಹಾಗೆ ಬಂದಿವೆ. ಮಂಡೂರಿನ ಬೂತ್ ನಂಬರ್ 5 ರಲ್ಲಿ ಈ ಮತದಾರರು ಇದ್ದಾರೆ. ಫೋಟೋ ಸರಿಯಿಲ್ಲ ಅಂದ್ರೆ ವೋಟರ್ ಕಾರ್ಡ್ ಒಂದೇ ನೋಡಲ್ಲ, ಬೇರೆ ಗುರುತು ಚೀಟಿ ನೋಡಿಯೇ ವೋಟ್ ಹಾಕೋಕೆ ಅವಕಾಶ ಕೊಡೋದು ಎಂದು ಅರವಿಂದ್ ಲಿಂಬಾವಳಿ ಉತ್ತರಿಸಿದ್ದಾರೆ. ಆ ಮೂಲಕ ರಾಹುಲ್ ಗಾಂಧಿ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ.