ಲಕ್ನೋ: ರಾಜ್ಯ ಸರ್ಕಾರದ ಯಾವುದೇ ಅಧಿಕಾರಿ ಯಾರಿಂದಲೂ ಉಡುಗೊರೆಗಳನ್ನು ಪಡೆಯುವಂತಿಲ್ಲ ಎಂದು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ಸಚಿವ ಸಂಪುಟ ಸಭೆಗಳಲ್ಲಿ ಮೊಬೈಲ್ ನಿಷೇಧ, ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ಹಾಜರಾಗುವುದು ಸೇರಿದಂತೆ ವಿವಿಧ ನಿಯಮಗಳನ್ನು ಅಧಿಕಾರಿಗಳ ಮೇಲೆ ಹೇರಿದ್ದರು. ಇದೀಗ ಯಾರಿಂದಲೂ, ಯಾವುದೇ ರೀತಿಯ ಉಡುಗೊರೆಗಳನ್ನು ಪಡೆಯುವಂತಿಲ್ಲ ಎಂದು ಯುಪಿ ಸರ್ಕಾರದ ಅಧೀನ ಕಾರ್ಯದರ್ಶಿ ಮಹೇಶ್ ಗುಪ್ತಾ ಸುತ್ತೋಲೆ ಹೊರಡಿಸಿದ್ದಾರೆ.
Advertisement
Advertisement
ಉಡುಗೊರೆಗಳೊಂದಿಗೆ ಯಾವುದೇ ಸರ್ಕಾರಿ ವ್ಯಕ್ತಿ ಕಾರ್ಯದರ್ಶಿಗಳ ಕಚೇರಿಯನ್ನು ಪ್ರವೇಶಿಸುವಂತಿಲ್ಲ. ಅಲ್ಲದೆ, ಉನ್ನತ ಅಧಿಕಾರಿಗಳ ಅನುಮತಿ ಇಲ್ಲದೆ, ಯಾವುದೇ ಉಡುಗೊರೆಗಳನ್ನು ಸ್ವೀಕರಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ಆದೇಶಿಸಲಾಗಿದೆ.
Advertisement
ಐಎಎಸ್ ಅಧಿಕಾರಿಗಳು ಉಡುಗೊರೆಗಳನ್ನು ತಮ್ಮ ಮನೆಗೆ ಸಾಗಿಸುತ್ತಾರೆ, ಸಿಹಿಯನ್ನು ಕಚೇರಿಯಲ್ಲಿ ಪಡೆಯುತ್ತಾರೆ. ಇದನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದು, ದುಬಾರಿ ಬೆಲೆ ಬಾಳುವ ವಸ್ತುಗಳು ಅಧಿಕಾರಿಗಳ ಮನೆ ತಲುಪಿದರೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಹಲವು ವರ್ಷಗಳಿಂದ ಸರ್ಕಾರದ ಅಧಿಕಾರಿಗಳು ಲಂಚದ ರೂಪದಲ್ಲಿ ಗಿಫ್ಟ್ ಗಳನ್ನು ಪಡೆಯುತ್ತಿದ್ದರು. ಹೊಸ ವರ್ಷದ ಸಂದರ್ಭದಲ್ಲಿ ಕ್ಯಾಲೆಂಡರ್, ಸ್ವೀಟ್ ಹಾಗೂ ದೀಪಾವಳಿ, ಹೋಳಿಯಂತಹ ಹಬ್ಬ ಹರಿದಿನಗಳ ಸಂದರ್ಭದಲ್ಲಿ, ಅಲ್ಲದೆ, ಮದುವೆ ಸಂದರ್ಭದಲ್ಲಿ ಬೆಲೆ ಬಾಳುವ ಗಿಫ್ಟ್ ಗಳನ್ನು ಪಡೆಯುತ್ತಿದ್ದರು. ಇದೀಗ ಕಾರ್ಯದರ್ಶಿಗಳ ಕಚೇರಿಯಲ್ಲಿ ಯಾವುದೇ ರೀತಿಯ ಗಿಫ್ಟ್ ಗಳನ್ನು ನಿಷೇಧಿಸಲಾಗಿದೆ.
ಈ ಹಿಂದೆ ಸರ್ಕಾರಿ ಕಚೇರಿ ಆವರಣದಲ್ಲಿ ಬಂದೂಕುಗಳನ್ನು ತರದಂತೆ ಹಾಗೂ ಭದ್ರತಾ ಸಿಬ್ಬಂದಿಗಳು ತಮ್ಮ ಆಯುಧವನ್ನು ಗೇಟ್ ಬಳಿಯೇ ಇಡುವಂತೆ ಆದೇಶಿಸಿದ್ದರು. ಅಲ್ಲದೆ, ಸರ್ಕಾರಿ ಕಚೇರಿ ಅವರಣದಲ್ಲಿ ಅಧಿಕಾರಿಗಳು ಗುಟ್ಕಾ, ಪಾನ್ ಜಗಿಯುವುದನ್ನು ನಿಷೇಧಿಸಿದ್ದರು. ನಿಯಮ ಉಲ್ಲಂಘನೆಯಾದಲ್ಲಿ 500 ರೂ. ದಂಡ ವಿಧಿಸುವಂತೆ ಸುತ್ತೋಲೆ ಹೊರಡಿಸಲಾಗಿತ್ತು.
ಈ ಹಿಂದೆ ಅಧಿಕೃತ ಸಭೆಯಲ್ಲಿ ಮೊಬೈಲ್ ಫೋನ್ ಬಳಸದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಚಿವರಿಗೆ ಸೂಚನೆ ನೀಡಿದ್ದಾರೆ. ಚರ್ಚೆಯಲ್ಲಿ ಸಚಿವರು ಭಾಗಿಯಾಗುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಮೊಬೈಲ್‍ನಿಂದ ಉಂಟಾಗುವ ಅಡಚಣೆ ತಡೆಯುವ ನಿಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಆದೇಶವು ಕ್ಯಾಬಿನೆಟ್ ಸಭೆಗೂ ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿಗಳ ಹಿರಿಯ ಕಾರ್ಯದರ್ಶಿಯೊಬ್ಬರು ತಿಳಿಸಿದ್ದರು.
ಈ ಮೊದಲು ಸಭೆಗೆ ಮೊಬೈಲ್ ಫೋನ್ ತರಲು ಮಂತ್ರಿಗಳಿಗೆ ಅವಕಾಶವಿತ್ತು. ಆದರೆ ಸೈಲೆಂಟ್ ಮೂಡ್‍ನಲ್ಲಿ ಇಡಬೇಕು, ಇಲ್ಲವೆ ಸ್ವಿಚ್‍ಆಫ್ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಈಗ ಸಭೆಗೂ ಮುನ್ನ ಕೌಂಟರ್ ನಲ್ಲಿ ಮೊಬೈಲ್ ಇಟ್ಟು ಟೋಕನ್ ಪಡೆಯಬೇಕು. ಸಭೆಯ ಬಳಿಕ ಟೋಕನ್ ನೀಡಿ ತಮ್ಮ ತಮ್ಮ ಮೊಬೈಲ್ ಪಡೆಬೇಕು ಎನ್ನುವ ಸೂಚನೆಯನ್ನು ಯೋಗಿ ಆದಿತ್ಯನಾಥ್ ನೀಡಿದ್ದಾರೆ ಎನ್ನಲಾಗಿದೆ.