ಬೆಂಗಳೂರು: ಬೈಕ್ ಅಲ್ಲ ತಲೆ ಕೆಳಗಾಗಿ ಮಂಗಳೂರಿಗೆ ಹೋದರೂ ರಾಜ್ಯಕ್ಕೆ ಏನು ಪ್ರಯೋಜನವಿಲ್ಲ ಎಂದು ಆಹಾರ ಸಚಿವ ಯುಟಿ ಖಾದರ್ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಬಿಜೆಪಿಯ ಬೈಕ್ ರ‍್ಯಾಲಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯುವ ಮೋರ್ಚಾದವರು ಬೈಕಿನಲ್ಲಿ ಅಲ್ಲ. ತಲೆ ಕೆಳಗಾಗಿ ಹೋದರೂ ಸತ್ಯ ಏನು ಎನ್ನುವುದು ರಾಜ್ಯದ ಜನತೆಗೆ ತಿಳಿದಿದೆ. ಈ ರ‍್ಯಾಲಿಯಿಂದ ರಾಜ್ಯಕ್ಕೆ ಏನು ಪ್ರಯೋಜನವಿಲ್ಲ ಎಂದು ಅವರು ಹೇಳಿದರು.
Advertisement
ರಾಹುಲ್‍ಗಾಂಧಿ ದಲಿತರನ್ನು ಮದ್ವೆಯಾಗಲಿ ಹೆಣ್ಣು ಕೊಡಲು ನಾವು ಸಿದ್ಧ ಎನ್ನುವ ಬಿಜೆಪಿ ನಾಯಕ ಗೋವಿಂದ ಕಾರಜೋಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜನರು ಅವರ ಗೌರವ ಘನತೆಗೆ ತಕ್ಕಂತೆ ಮಾತನಾಡಬೇಕು. ಕೆಲವರು ಸುಳ್ಳು ಹೇಳಿ ಮೇಲಕ್ಕೆ ಬರುತ್ತಾರೆ, ಅದೇ ರೀತಿ ಕೆಳಕ್ಕೆ ಬೀಳುತ್ತಾರೆ. ರಾಹುಲ್ ಗಾಂಧಿ ಇಂದಲ್ಲ, ನಾಳೆ ಈ ದೇಶದ ಪ್ರಧಾನಿ ಆಗುತ್ತಾರೆ. ಈಗ ದಲಿತ ಯುವತಿ ಮದುವೆ ವಿಚಾರ ಸರಿಯಲ್ಲ. ಮಾತನಾಡುವಾಗ ಚಿಂತಿಸಿ ಮಾತನಾಡಬೇಕು ಎಂದು ತಿರುಗೇಟು ನೀಡಿದರು.
Advertisement
ಬ್ಯಾಗ್‍ಗಳಲ್ಲಿ ಪಡಿತರ: ಸೆಪ್ಟೆಂಬರ್ ಕೊನೆಯ ವೇಳೆಗೆ ಎಪಿಎಲ್, ಬಿಪಿಎಲ್ ಕಾರ್ಡ್‍ಗಳು ಎಲ್ಲಾ ಅರ್ಜಿದಾರರ ಮನೆ ತಲುಪಲಿವೆ. 90 ಸಾವಿರಕ್ಕೂ ಹೆಚ್ಚು ಅರ್ಜಿಗಳಿರುವ ಬಳ್ಳಾರಿ ಜಿಲ್ಲೆಗೆ ಒಂದೇ ದಿನ ಕಾರ್ಡ್ ವಿತರಿಸಲು ಕ್ರಮವನ್ನು ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಬೃಹತ್ ಕಾರ್ಯಕ್ರಮ ಸಂಘಟನೆಗೆ ಸಿದ್ಧತೆ ನಡೆಯುತ್ತಿದ್ದು ಸೆ.11ಕ್ಕೆ ಕಾರ್ಯಕ್ರಮ ನಡೆಯಲಿದೆ. ಅಕ್ಕಿ ವಿತರಣೆಯಲ್ಲಿ ಆಗುತ್ತಿರುವ ಅಕ್ರಮ ತಡೆಗಟ್ಟಲು ಇನ್ನು ಮುಂದೆ ಬ್ಯಾಗ್ ಗಳಲ್ಲಿ ಪಡಿತರ ವಿತರಣೆ ಮಾಡುವ ಚಿಂತನೆ ಇದೆ. ನಿಗದಿ ಪಡಿಸಿರುವ ತೂಕದ ಪಡಿತರ ಆ ಬ್ಯಾಗ್ ಗಳಲ್ಲಿ ಇರಲಿದೆ. ಇದರಿಂದ ವರ್ಷಕ್ಕೆ 120 ಕೋಟಿ ರುಪಾಯಿ ಸರ್ಕಾರಕ್ಕೆ ಹೊರೆಯಾಗಲಿದೆ ಎಂದು ತಿಳಿಸಿದರು.
Advertisement
ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಹಿಂದೆ ಪಿಎಫ್‍ಐ ಸಂಘಟನೆ ಭಾಗಿಯಾಗಿದ್ದು, ಇದನ್ನು ನಿಷೇಧಿಸುವ ಸಲುವಾಗಿ ಸೆಪ್ಟೆಂಬರ್ 7 ರಂದು ಬಿಜೆಪಿ ಯುವಾ ಮೋರ್ಚಾ ಮಂಗಳೂರು ಚಲೋವನ್ನು ಆಯೋಜಿಸಿದೆ. ಸೆಪ್ಟೆಂಬರ್ 5 ರಿಂದ ಬಿಜೆಪಿ ಬೈಕ್ ರ‍್ಯಾಲಿ ಆರಂಭವಾಗಲಿದ್ದು, ಬೆಂಗಳೂರು, ಹುಬ್ಬಳ್ಳಿಯಿಂದ ರ‍್ಯಾಲಿ ಹೊರಟರೆ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರಿನಿಂದ ಸೆಪ್ಟೆಂಬರ್ 6ರಂದು ರ‍್ಯಾಲಿ ಹೊರಡಲಿದೆ. ಕೆಎಫ್ ಡಿ, ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಲಿದ್ದು, ಬಿಎಸ್ ಯಡಿಯೂರಪ್ಪ ಭಾಗವಹಿಸಲಿದ್ದಾರೆ.