ಬಾಗಲಕೋಟೆ: ಕೊರೊನಾ ವೈರಸ್ ಭೀತಿ ಸದ್ಯ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ತಾಣಗಳಿಗೆ ತಟ್ಟಿದೆ. ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಸ್ಥಳಗಳಿಗೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ.
ಬೇಸಿಗೆ ಶುರುವಾಗುತ್ತಿದ್ದಂತೆ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಭೇಟಿ ಕೊಡುತ್ತಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದ ಐತಿಹಾಸಿಕ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವಂತೆ ಮಾಡಿದೆ. 2019ರ ಜನವರಿಯಲ್ಲಿ 1,406 ಜನ, ಫೆಬ್ರವರಿಯಲ್ಲಿ 1,502 ಮಂದಿ ವಿದೇಶಿಗರು ಭೇಟಿ ನೀಡಿದರು. ಆದರೆ ಸದ್ಯ ಫೆಬ್ರವರಿ ತಿಂಗಳಲ್ಲಿ 966 ವಿದೇಶಿಗರು ಭೇಟಿ ನೀಡಿದ್ದಾರೆ.
Advertisement
Advertisement
ಅದೇ ರೀತಿ ಪಟ್ಟದಕಲ್ಲಿಗೆ ಜನವರಿಯಲ್ಲಿ 951 ಜನ, ಫೆಬ್ರವರಿಯಲ್ಲಿ 994 ಮಂದಿ. ಆದರೆ ಈ ಬಾರಿಯ ಫೆಬ್ರವರಿಯಲ್ಲಿ 543 ಜನ ವಿದೇಶಿಗರು ಭೇಟಿ ನೀಡಿದ್ದಾರೆ. ಐಹೊಳೆಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಅಂತಹ ಗಣನೀಯ ಇಳಿಕೆ ಕಂಡು ಬಂದಿಲ್ಲ ಎಂದು ಪುರತತ್ವ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
Advertisement
ಸೋಂಕು ತಗುಲಿರುವ ದೇಶಗಳಿಂದ ಯಾವುದೇ ವಿದೇಶಿಗರು ಬಂದಿಲ್ಲವಾದರೂ, ಜಿಲ್ಲಾ ಆರೋಗ್ಯ ಇಲಾಖೆ ಐತಿಹಾಸಿಕ ತಾಣಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಬೇರೆ ದೇಶಗಳಿಂದ ಬರುವ ವಿದೇಶಿ ಪ್ರಜೆಗಳ ಮಾಹಿತಿ ಕಲೆ ಹಾಕುತ್ತಿದ್ದು, ಸೋಂಕು ಹರಡದಂತೆ ಎಚ್ಚರವಹಿಸಿದೆ. ಅಲ್ಲದೆ ಸೋಂಕು ಕಾಣಿಸಿಕೊಂಡಿರುವ ದೇಶದಿಂದ ಸದ್ಯಕ್ಕೆ ಯಾವುದೇ ಪ್ರವಾಸಿಗರು ಬಂದಿಲ್ಲ ಎಂಬುದು ಆರೋಗ್ಯ ಇಲಾಖೆ ಅಭಿಪ್ರಾಯವಾಗಿದೆ.