ಕೊಪ್ಪಳ: ಹೈದರಾಬಾದ್ ಕರ್ನಾಟಕ ಭಾಗದಲ್ಲೇ ಬಯಲು ಶೌಚಮುಕ್ತ ಮೊದಲ ಜಿಲ್ಲೆ ಎಂಬ ಹಣೆ ಪಟ್ಟಿಯನ್ನು ಕೊಪ್ಪಳ ಜಿಲ್ಲೆ ಪಡೆದುಕೊಂಡಿದೆ. ಆದರೆ ಗಂಗಾವತಿ ನಗರದಲ್ಲಿ ಮಾತ್ರ ಸ್ವಚ್ಛತೆ ಅನ್ನುವುದು ಮರೀಚಿಕೆಯಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಸಮುದಾಯ ಶೌಚಾಲಯಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಬಯಲು ಬಹಿರ್ದೆಸೆ ಪ್ರವೃತ್ತಿ ಮುಂದುವರಿದಿದೆ.
ನಗರದ ಗಡಿ ಅಂಚಿನ ಬಹುತೇಕ ಜನ ಈಗಲೂ ನಿತ್ಯ ಕರ್ಮಕ್ಕೆ ಪೊದೆ, ಗುಡ್ಡ, ಹೊಲ-ಗದ್ದೆ, ದುರ್ಗಮ್ಮನ ಹಳ್ಳ, ಮೈದಾನ ಪ್ರದೇಶ, ರೈಲ್ವೆ ಟ್ರ್ಯಾಕ್ ನ್ನೇ ಆಶ್ರಯಿಸಿದ್ದಾರೆ. ಸೂರ್ಯ ಮೂಡುವುದಕ್ಕೂ ಮುನ್ನ ಹಾಗೂ ಸೂರ್ಯ ಮುಳುಗಿದ ನಂತರ ಚೊಂಬು ಹಿಡಿದು ಜನಸಂಚಾರ ವಿರಳವಿರುವ ಜಾಗಗಳನ್ನು ಹುಡುಕುತ್ತಾ ಹೋಗುವ ದೃಶ್ಯಗಳು ಸಾಮಾನ್ಯವಾಗಿವೆ.
Advertisement
Advertisement
ನಗರ ಪ್ರದೇಶದಲ್ಲಿ ನೂರು ಪುರುಷರಿಗೆ ಒಂದರಂತೆ ಹಾಗೂ ನೂರು ಮಹಿಳೆಯರಿಗೆ ಎರಡರಂತೆ ಶೌಚಾಲಯ ಇರಬೇಕು ಎಂದು ಸ್ವಚ್ಛ ಸರ್ವೇಕ್ಷಣಾ ಮಿಷನ್ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ. ಅಲ್ಲದೆ ಪ್ರತಿ 7 ಕಿ.ಮೀ.ಗೆ ಒಂದು ಸಾರ್ವಜನಿಕ ಶೌಚಾಲಯವಿರಬೇಕು ಎಂದೂ ಸೂಚಿಸಿದೆ. ಆದರೆ 1 ಲಕ್ಷದ 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ನಗರದಲ್ಲಿ ಸಮುದಾಯ ಶೌಚಾಲಯಗಳ ಸಂಖ್ಯೆ 51 ಹಾಗೂ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ 5 ಮಾತ್ರ. ಅವೂ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿವೆ.
Advertisement
ನಗರದ ಒಟ್ಟು ಜನಸಂಖ್ಯೆಯಲ್ಲಿ ಶೇ 60ಕ್ಕೂ ಹೆಚ್ಚು ಜನ ಮನೆಗಳಲ್ಲಿ ಶೌಚಾಲಯ ಹೊಂದಿದ್ದಾರೆ. ಆದರೆ ಹಿರೇಜಂತಕಲ್, ಚಲುವಾದಿ ಓಣಿ, ಪೊಲೀಸ್ ಕ್ವಾಟ್ರಾಸ್, ವಾಲ್ಮೀಕಿ ಸರ್ಕಲ್, ಶರಣಬಸವೇಶ್ವರ ನಗರ, ಲಿಂಗರಾಜ್ ಕ್ಯಾಂಪ್, ಅಮರ್ ಭಗತ್ ಸಿಂಗ್ ನಗರ, ಬನ್ನಿಗಿಡ ಕ್ಯಾಂಪ್, ಲಕ್ಷ್ಮೀ ಕ್ಯಾಂಪ್ ಹಾಗೂ ಪ್ರಶಾಂತ ನಗರದ ಕೆಲ ಭಾಗಗಳಲ್ಲಿ ಈಗಲೂ ಬಯಲು ಶೌಚಾಲಯ ಪ್ರವೃತ್ತಿಯೇ ಮುಂದುವರಿದಿದೆ.
Advertisement
ನಿರ್ವಹಣೆ ಕಾಣದ ಶೌಚಾಲಯಗಳು: 35 ವಾರ್ಡ್ ಗಳನ್ನು ಹೊಂದಿರುವ ನಗರಸಭೆ ವ್ಯಾಪ್ತಿಯಲ್ಲಿ ಸದ್ಯ 51 ಸಮುದಾಯ ಶೌಚಾಲಯಗಳಿದ್ದು, ಬೆರಳೆಣಿಕೆಯಷ್ಟು ಶೌಚಾಲಯಗಳಲ್ಲಿ ಮಾತ್ರ ನೀರಿದ್ದು, ಉಳಿದ ಎಲ್ಲಾ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆಯೆ ಇಲ್ಲ. ಕೆಲವು ಶೌಚಾಲಯಗಳ ಸುತ್ತ ಗಿಡ-ಗಂಟಿಗಳು ಬೆಳೆದು, ಅವು ಜನರ ಕಣ್ಣಿಗೆ ಕಾಣಿಸುತ್ತಲೂ ಇಲ್ಲ.
ಬಹುತೇಕ ಸಮುದಾಯ ಶೌಚಾಲಯಗಳಲ್ಲಿ ನೀರು, ವಿದ್ಯುತ್, ಡೋರ್, ನಳದ ಟ್ಯಾಪ್ ಗಳು ಇಲ್ಲವೇ ಇಲ್ಲ. ಅಲ್ಲದೆ ಶೌಚಾಲಯದ ನಾಮಫಲಕಗಳನ್ನೇ ಅಳವಡಿಸಿಲ್ಲ. ಶರಣಬಸವೇಶ್ವರ ಕ್ಯಾಂಪ್, ಪ್ರಶಾಂತ ನಗರ, ಕಾಟಿಗಾರ್ ಓಣಿ, ಮೆಹಬೂಬ್ ನಗರ, ರಾಯರ ಓಣಿ, ಗಾಂಧಿ ನಗರ, ಕಂದಗಲ್ಲು ಓಣಿ, ನೀಲಕಂಠೇಶ್ವರ ಕ್ಯಾಂಪ್ ನಲ್ಲಿ ಶೌಚಾಲಯಗಳೇ ನಿರ್ಮಿಸಿಲ್ಲ.
ಸಾರ್ವಜನಿಕ ಶೌಚಾಲಯಗಳ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಕೆಲವು ಶೌಚಾಲಯಗಳಲ್ಲಿ ನೀರಿನ ಸಮಸ್ಯೆ ಇದ್ದರೆ, ಇನ್ನು ಹಲವೆಡೆ ನೀರಿದ್ದರೂ ಬಕೆಟ್‍ಗಳೇ ಮುರಿದು ಹೋಗಿವೆ. ಮೂತ್ರ ವಿಸರ್ಜನೆಗೆ ಹಾಕಿದ್ದ ಬೇಸಿನ್‍ಗಳೂ ಕಳಚಿ ಬಿದ್ದಿವೆ. ದುರ್ನಾತದ ನಡುವೆಯೂ ಹೇಗೋ ಮೂಗು ಮುಚ್ಚಿಕೊಂಡು ಒಳಗೆ ಹೋದರೆ ಗೋಡೆಗಳ ಮೇಲೆ ಬರೆದಂತಹ ಆಕ್ಷೇಪಾರ್ಹ ಬರಹಗಳು ಎಂತಹವರನ್ನೂ ಮುಜುಗರಕ್ಕೀಡು ಮಾಡುತ್ತವೆ.
ನಗರದ ಹಲವು ಏರಿಯಾಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕಳೆದೆರಡು ವರ್ಷಗಳ ಹಿಂದೆ ನಿರ್ಮಿಸಿದ ಶೌಚಾಲಯಗಳು ಇದುವರೆಗೂ ಸಾರ್ವಜನಿಕರಿಗೆ ಮುಕ್ತವಾಗದೇ ಇರುವುದು ಶೋಚನಿಯ ಸಂಗತಿಯಾಗಿದೆ. ಕೆಲವು ಕಡೆ ಶೌಚಾಲಯಗಳಿಗೆ ಸುಣ್ಣ ಬಣ್ಣ ಬಳಿದು ಶೌಚಾಲಯಗಳ ಬಗ್ಗೆ ಜಾಗೃತಿ ಮೂಡಿಸುವ ಬರಹಗಳನ್ನು ಬರೆಸಲಾಗಿದೆ. ಆದರೆ ಅಂತಹ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ.