ಪಾಟ್ನಾ: ವಿದ್ಯಾರ್ಥಿಗಳು ತರಗತಿಗೆ ಬರುತ್ತಿಲ್ಲ. ಹೀಗಾಗಿ ನನಗೆ ಸಂಬಳ ಬೇಡ ಎಂದು ಪ್ರಾಧ್ಯಾಪಕರೊಬ್ಬರು 24 ಲಕ್ಷ ರೂ. ಸಂಬಳವನ್ನು ಹಿಂದಿರುಗಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಪಾಠ ಮಾಡಲು ವಿದ್ಯಾರ್ಥಿಗಳೇ ಇಲ್ಲ. ಹಾಗಾದರೆ ಸಂಬಳ ಏಕೆ? ನನಗೆ ಸಂಬಳ ಬೇಡ ಎಂದು ಪ್ರಾಧ್ಯಾಪಕರೊಬ್ಬರು ತಮ್ಮ ಎರಡು ವರ್ಷ ಮತ್ತು ಒಂಬತ್ತು ತಿಂಗಳ ಸಂಬಳವನ್ನು (23.8 ಲಕ್ಷ ರೂ.) ಹಿಂದಿರುಗಿಸಿದ್ದಾರೆ.
Advertisement
Advertisement
ಮುಜಾಫರ್‌ಪುರದ ನಿತೀಶ್ವರ್ ಕಾಲೇಜಿನ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಲ್ಲನ್ ಕುಮಾರ್ ಅವರು ಸಂಬಳವನ್ನು ಹಿಂದಿರುಗಿಸಿದ್ದಾರೆ. ನನ್ನನ್ನು ಬೇರೆ ಕಾಲೇಜಿಗೆ ವರ್ಗಾಯಿಸದಿದ್ದರೆ ʼಶೈಕ್ಷಣಿಕ ಸಾವಿನʼ ಭಯ ಕಾಡುತ್ತದೆ ಎಂದು ಹೇಳಿಕೊಂಡಿದ್ದಾರೆ.
Advertisement
ಸ್ನಾತಕೋತ್ತರ ತರಗತಿಗಳಿಗೆ ಪಾಠ ಮಾಡುವ ಕಾಲೇಜುಗಳಿಗೆ ನನ್ನನ್ನು ನಿಯೋಜಿಸಲಿಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ ಕಡಿಮೆ ರ‍್ಯಾಂಕ್ ಪಡೆದವರನ್ನೇ ಅಂತಹ ಕಾಲೇಜುಗಳಿಗೆ ನಿಯೋಜಿಸಲಾಗಿದೆ. ನಾನಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ಬರುತ್ತಿಲ್ಲ. ವರ್ಗಾವಣೆ ಪಟ್ಟಿಯಿಂದ ಹಲವು ಬಾರಿ ನನ್ನ ಹೆಸರನ್ನು ತೆಗೆದು ಹಾಕಲಾಗಿದೆ ಎಂದು ಪ್ರಾಧ್ಯಾಪಕ ಲಲ್ಲನ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಬೇಡಿಕೆ ಈಡೇರದಿದ್ದಲ್ಲಿ ಧರಣಿ ಕೂರುತ್ತೇನೆ ಎಂದು ತಿಳಿಸಿದ್ದಾರೆ.
Advertisement
ಪ್ರಾಧ್ಯಾಪಕರ ಆರೋಪ ಕುರಿತು ಮಾತನಾಡಿರುವ ಕಾಲೇಜು ಪ್ರಾಂಶುಪಾಲ ಮನೋಜ್ ಕುಮಾರ್, ಶೂನ್ಯ ಹಾಜರಾತಿ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಎರಡು ವರ್ಷಗಳಿಂದ, ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ವರ್ಗಾವಣೆ ಬೇಕಿದ್ದರೆ ಲಲ್ಲನ್ ಕುಮಾರ್ ಅವರು ನಮ್ಮನ್ನು ನೇರವಾಗಿಯೇ ಕೇಳಬಹುದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.
ತರಗತಿಗಳು ನಡೆಯುತ್ತಿಲ್ಲ ಎಂಬ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ವಿಚಾರಣೆ ನಡೆಸುತ್ತೇವೆ. ಪ್ರೊಫೆಸರ್ ಲಲ್ಲನ್ ಕುಮಾರ್ ತಮ್ಮ ವರ್ಗಾವಣೆ ಬೇಡಿಕೆಯ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅವರು ನಮಗೆ ಚೆಕ್ ನೀಡಿದ್ದಾರೆ. ಆದರೆ ನಾವು ಅದನ್ನು ಸ್ವೀಕರಿಸಿಲ್ಲ ಎಂದು ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯದ ಉಪಕುಲಪತಿ ಆರ್.ಕೆ.ಠಾಕೂರ್ ತಿಳಿಸಿದ್ದಾರೆ.
ಪಿಎಚ್‌ಡಿ ಪದವಿ ಪಡೆದಿರುವ ಲಲ್ಲನ್ ಕುಮಾರ್ ಅವರು ದೆಹಲಿ ವಿಶ್ವವಿದ್ಯಾಲಯ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ.