LatestNational

ಮೇಕೆದಾಟು ಯೋಜನೆಗೆ ತಡೆ ನೀಡಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಮೇಕೆದಾಟು ಯೋಜನೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಯೋಜನೆ ಸಂಬಂಧ ಕಾವೇರಿ ನದಿ ನೀರಿನ ಅಚ್ಚುಕಟ್ಟು ಪ್ರದೇಶದ ಎಲ್ಲ ರಾಜ್ಯಗಳು ಪ್ರತಿಕ್ರಿಯೆ ಸಲ್ಲಿಸಿದ ಬಳಿಕ ತಡೆ ನೀಡುವ ಕುರಿತು ನಿರ್ಧಾರ ಮಾಡಲಿದ್ದೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆ ಇಂದು ನ್ಯಾ. ಖಾನ್ವಿಲ್ಕರ್ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ನಡೆಯಿತು. ಈ ವೇಳೆ ಅನಗತ್ಯ ಅವಸರ ಮಾಡದಂತೆ ತಮಿಳುನಾಡಿಗೆ ಕಿವಿ ಹಿಂಡಿದೆ. ಅಷ್ಟೇ ಅಲ್ಲದೇ ಯೋಜನೆ ಸಂಬಂಧ ಕೇಂದ್ರ ಜಲ ಆಯೋಗ ವಿಸ್ತೃತ ಯೋಜನಾ ವರದಿಯನ್ನು ಕೇಳಿದೆ.

ಇದು ಅಂತಿಮವಲ್ಲ ಅಂತಿಮ ವರದಿ ಬಳಿಕ ತಕರಾರು ಇದ್ದಲ್ಲಿ ಅರ್ಜಿ ಸಲ್ಲಿಸಲಿ ಯಾಕೆ ಅವಸರ ಮಾಡುತ್ತಿದ್ದೀರಿ ಎಂದು ನ್ಯಾ. ಖಾನ್ವಿಲ್ಕರ್ ತಮಿಳುನಾಡು ವಕೀಲರನ್ನು ಪ್ರಶ್ನಿಸಿದರು. ಈ ಸಂಬಂಧ ಕರ್ನಾಟಕ ಸೇರಿ ಕಾವೇರಿ ಪ್ರದೇಶದ ರಾಜ್ಯಗಳು ಪ್ರತಿಕ್ರಿಯೆ ನೀಡಲಿ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿತು.

ನ್ಯಾಯಾಂಗ ನಿಂದನೆ ಅರ್ಜಿ ಕುರಿತು ಯಾವುದೇ ನಿರ್ಧಾರಗಳನ್ನು ಸದ್ಯಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ ಪೀಠ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರ ಬದಲಾವಣೆ ಕುರಿತು ಕೇಂದ್ರ ಸರ್ಕಾರ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ತಮಿಳುನಾಡು ಅರ್ಜಿಯಲ್ಲಿ ಏನಿದೆ?
ಕರ್ನಾಟಕ ಸರ್ಕಾರ ನಿರ್ಮಾಣಕ್ಕೆ ಮುಂದಾಗಿರುವ ಮೇಕೆದಾಟು ಅಣೆಕಟ್ಟು ಯೋಜನೆ ಅನಧಿಕೃತವಾಗಿದ್ದು ತಡೆ ನೀಡಬೇಕು. ಕಾವೇರಿ ನೀರಾವರಿ ನಿಗಮ ಮೇಕೆದಾಟು ಅಣೆಕಟ್ಟೆ ಕುರಿತಂತೆ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸುವುದಕ್ಕೂ ನಿರ್ಬಂಧ ಹೇರಬೇಕು. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಇದರಿಂದ ತಮಿಳುನಾಡಿನ ಜನರಲ್ಲಿ ಆತಂಕಗೊಂಡಿದ್ದಾರೆ. ತಮಿಳುನಾಡಿನ ಲಕ್ಷಾಂತರ ರೈತರು ಕಾವೇರಿ ನೀರನ್ನು ಅವಲಂಬಿಸಿದ್ದಾರೆ. ಕರ್ನಾಟಕದ ಈ ಯೋಜನೆ ಕಾವೇರಿ ಅಂತಿಮ ಐತೀರ್ಪು ಹಾಗೂ ಐತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ತದ್ವಿರುದ್ಧವಾಗಿದೆ ಎಂದು ದೂರಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *

Back to top button