ಬೆಂಗಳೂರು: ರಾಜ್ಯದಲ್ಲಿ ಕಲ್ಲಿದ್ದಲಿನ ಕೊರತೆಯುಂಟಾಗಿದೆ, ವಿದ್ಯುತ್ ಕ್ಷಾಮವಿದೆ ಎಂದು ಕಾಂಗ್ರೆಸ್ ವಿನಾಕಾರಣ ಹುಯಿಲೆಬ್ಬಿಸುತ್ತಿದ್ದು, ವಾಸ್ತವ ವಿಚಾರವನ್ನು ಮರೆಮಾಚುವ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಾರದು ಎಂಬ ಉದ್ದೇಶದಿಂದಲೇ ಎಚ್ಚರಿಕೆ ವಹಿಸಿ ಕಲ್ಲಿದ್ದಲು ದಾಸ್ತಾನಿಗೆ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ರಾಜ್ಯದ ಸರಾಸರಿ ಬೇಡಿಕೆಯ ಅರ್ಧದಷ್ಟು ಭಾಗ ಈಗ ಸೋಲಾರ್ ಹಾಗೂ ಪವನಶಕ್ತಿ ಮೂಲದಿಂದ ಲಭಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಆರೋಪಿಸುವುದರಲ್ಲಿ ಅರ್ಥವೇ ಇಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲೂ ಬುಲ್ಡೋಜರ್ ಕಾರ್ಯಾಚರಣೆಗೆ ಹೆಚ್ಚಿದ ಒತ್ತಡ: ಬಿಜೆಪಿಯಲ್ಲಿ ಭಿನ್ನ ನಿಲುವು
Advertisement
Advertisement
ಕೇಂದ್ರದಿಂದ ರಾಜ್ಯಕ್ಕೆ ಪ್ರತಿನಿತ್ಯ ಸರಾಸರಿ 13,500 ರಿಂದ 14,500 ರೇಕ್ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಎಲ್ಲ ವಿದ್ಯುತ್ ಸ್ಥಾವರಗಳ ಬೇಡಿಕೆಗೆ ಅಗತ್ಯವಾದ ಕಲ್ಲಿದ್ದಲು ಇದರಿಂದ ಲಭ್ಯವಾಗುತ್ತಿದೆ. ರಾಜ್ಯದಲ್ಲಿಂದು ಪ್ರತಿ ದಿನಕ್ಕೆ 10,400 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಎನ್ನಬಹುದಾದ 14,800 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಕಳೆದ ಮಾರ್ಚ್ 21ರಂದು ಎದುರಾಗಿತ್ತು. ಆಗಲೂ ನಮಗೆ ಕಲ್ಲಿದ್ದಲು ಕೊರತೆ ಉಂಟಾಗಿರಲಿಲ್ಲ. ಹೀಗಿರುವಾಗ ಸಾಮಾನ್ಯ ಬೇಡಿಕೆಯ ದಿನಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಎಂತಹ ಸ್ಥಿತಿ ನಿರ್ಮಾಣವಾದರೂ ಮೂರು ದಿನಗಳವರೆಗೆ ಕೊರತೆ ನೀಗಿಸುವಷ್ಟು ಕಲ್ಲಿದ್ದಲು ದಾಸ್ತಾನಿದೆ. ಕಾಂಗ್ರೆಸ್ ನಾಯಕರು ಸೃಷ್ಟಿಸಿರುವ ಈ ಅಪಪ್ರಚಾರದಿಂದ ರಾಜ್ಯದ ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ. ಯಾವುದೇ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯವಾದರೆ ಅದು ಸರಬರಾಜಿನಲ್ಲಿ ಆದ ಸಮಸ್ಯೆಯೇ ವಿನಃ ಕಲ್ಲಿದ್ದಲು ಕೊರತೆಯಿಂದ ಆಗಿದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್
ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಇರದು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ಕೃಷಿ ಪಂಪ್‌ಸೆಟ್ ಗಳಿಗೆ ಅಗತ್ಯವಾದ ವಿದ್ಯುತ್ ಬೇಡಿಕೆ ಪ್ರಮಾಣ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಬಳ್ಳಾರಿ ಹಾಗೂ ರಾಯಚೂರು ಶಾಖೋತ್ಪನ್ನ ಘಟಕದ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆಯೇ ಹೊರತು ಕಲ್ಲಿದ್ದಲು ಕೊರತೆಗಾಗಿ ಅಲ್ಲ. ರಾಜ್ಯದಲ್ಲಿ ಪ್ರತಿನಿತ್ಯ 7,000 ಮೆಗಾ ವ್ಯಾಟ್ ಸೋಲಾರ್ ಹಾಗೂ ಪವನ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಬೇಸಿಗೆಯಲ್ಲಿ ವಿದ್ಯುತ್ ಕೊರತೆಯ ಪ್ರಶ್ನೆಯೇ ಉದ್ಭವಿಸದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ
ಕತ್ತಲುಭಾಗ್ಯದ ದುರ್ದಿನಗಳನ್ನು ಮರೆತಿಲ್ಲ: ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2004-2014ರ ಅವಧಿಯಲ್ಲಿ 725 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ರಾಜ್ಯಕ್ಕೆ ಪೂರೈಕೆಯಾಗಿತ್ತು. ಆದರೆ 2015 – 2022ರ ಅವಧಿಯಲ್ಲಿ 792 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆಯಾಗಿದೆ. ಕಲ್ಲಿದ್ದಲು ಪೂರೈಕೆ ಹಾಗೂ ವಿದ್ಯುತ್‌ಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿಯೂ ಕೇಂದ್ರ ಸರ್ಕಾರ ಹಿಂದುಳಿದಿಲ್ಲ. ಅಧಿಕಾರದ `ಅಭಾವ ವೈರಾಗ್ಯ’ ದಿಂದ ರೋಸಿ ಹೋಗಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ವಿದ್ಯುತ್ ಅಭಾವ ಇದೆ ಎಂಬ ಪ್ರಹಸನ ಸ್ರಷ್ಟಿಸಿದರೆ ಜನರು `ಶಾಕ್ ಟ್ರೀಟ್ ಮೆಂಟ್’ ನೀಡುತ್ತಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿದ್ದಾಗ ರಾಜ್ಯಕ್ಕೆ ನೀಡಿದ್ದ `ಕತ್ತಲು ಭಾಗ್ಯದ’ ದುರ್ದಿನಗಳನ್ನು ಸಾರ್ವಜನಿಕರು ಇನ್ನೂ ಮರೆತಿಲ್ಲ. ಅಪಪ್ರಚಾರ ನಡೆಸುವಾಗ ಹತ್ತು ಬಾರಿ ಯೋಚಿಸಿ ಅಡಿ ಇಡಲಿ ಎಂದು ವ್ಯಂಗ್ಯವಾಡಿದ್ದಾರೆ.