ರಾಯಚೂರು: ಮಂತ್ರಾಲಯದಲ್ಲಿ ಈಗ ಗುರು ರಾಘವೇಂದ್ರ ರಾಯರ 346ನೇ ಆರಾಧನ ಮಹೋತ್ಸವ ಸಂಭ್ರಮ ಮನೆಮಾಡಿದೆ. ಆಗಸ್ಟ್ 6 ರಿಂದ 12 ರವರೆಗೆ ಏಳು ದಿನ ಕಾಲ ನಡೆಯಲಿರುವ ಸಪ್ತರಾತ್ರೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥರು ಧ್ವಜಾರೋಹಣ ಮೂಲಕ ಚಾಲನೆ ನೀಡಿದ್ದಾರೆ. ರಾಯರ ದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರ ದಂಡು ಹರಿದು ಬರುತ್ತಿದೆ. ಭಕ್ತರಿಗಾಗಿ ಮಠದ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದ್ರೆ ಇಂದು ಚಂದ್ರಗ್ರಹಣ ನಿಮಿತ್ತ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನ ಮೊಟಕುಗೊಳಿಸಲಾಗಿದೆ.
ನವ ಮದುವಣಗಿತ್ತಿಯಂತೆ ಸಿಂಗಾರಗೊಂಡಿರೋ ನವ ಮಂತ್ರಾಲಯದಲ್ಲಿ ಈಗ ರಾಯರ ಆರಾಧನೆ ನಾದ ಮೊಳಗಿದೆ. ಸಪ್ತರಾತ್ರೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ಗೋವು ,ಗಜಾ, ಲಕ್ಷ್ಮೀ ಪೂಜೆ, ಧಾನ್ಯ ಪೂಜೆ ಹಾಗೂ ಪ್ರಭು ಉತ್ಸವ ವಿಜೃಂಭಣೆಯಿಂದ ನಡೆಯುತ್ತಿವೆ. ಧ್ವಜಾರೋಹಣ ಮೂಲಕ ಶ್ರೀಗಳು ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಮಧ್ಯಾರಾಧನೆ ದಿನ ಸುವರ್ಣ ರಥೋತ್ಸವ ಹಾಗೂ ಉತ್ತರಾರಾಧನೆ ದಿನ ಮಹಾ ರಥೋತ್ಸವ ನಡೆಯಲಿದೆ. ಅಲ್ಲದೆ ಮಠದಲ್ಲಿ ಏಳುದಿನ ಕಾಲ ಪ್ರತಿದಿನ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಆದ್ರೆ ಚಂದ್ರಗ್ರಹಣ ನಿಮಿತ್ತ ಇಂದು ಬೆಳಗ್ಗೆ 11:30 ರ ವೇಳೆಗೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಅಂತ್ಯಗೊಂಡಿವೆ. ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ ಜೊತೆ ರಥೋತ್ಸವ ಕೂಡ ಬೆಳಗ್ಗೆ ಮುಕ್ತಾಯವಾಗಿದೆ.
364 ದಿನಗಳ ಕಾಲ ಬೃಂದಾವನದಲ್ಲಿ ಯೋಗ ಶಕ್ತಿಯಿಂದ ಭಕ್ತರಿಗೆ ರಾಯರು ಅನುಗ್ರಹ ನೀಡುತ್ತಾರೆ. ಆದ್ರೆ ಆರಾಧನೆಯ ದಿನ ಮಾತ್ರ ಬೃಂದಾವನದಿಂದ ಹೊರಬಂದು ತಮ್ಮನ್ನ ನಂಬಿ ಬರುವ ಭಕ್ತರಿಗೆ ಆಶಿರ್ವದಿಸುತ್ತಾರೆ ಅನ್ನೋ ಪ್ರತೀತಿ ಇದೆ. ಅಲ್ಲದೆ ಈ ವೇಳೆ ರಾಯರು ಸುಪ್ರಸನ್ನರಾಗಿರುವುದರಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಅನ್ನೋ ನಂಬಿಕೆ ಆರಾಧನ ಮಹೋತ್ಸವಕ್ಕೆ ಹೆಚ್ಚಿನ ಮಹತ್ವ ತಂದಿದೆ. ಈ ಬಾರಿ ಪ್ರತಿದಿನ ಮೂವತ್ತು ಸಾವಿರಕ್ಕೂ ಹೆಚ್ಚು ಜನ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು. ಪರಿಮಳ ಪ್ರಸಾದಕ್ಕಾಗಿ ಹೆಚ್ಚವರಿ ಕೌಂಟರ್‍ಗಳನ್ನ ಈಗಾಗಲೇ ತೆರೆಯಲಾಗಿದೆ.
ಒಟ್ಟಿನಲ್ಲಿ, ಆರಾಧನೆ ನಿಮಿತ್ತ ದೇಶದ ಮೂಲೆ ಮೂಲೆಯಲ್ಲಿರುವ ರಾಯರ ಭಕ್ತರ ದಂಡು ಮಂತ್ರಾಲಯಕ್ಕೆ ಹರಿದು ಬರುತ್ತಿದೆ. ಆದ್ರೆ ಚಂದ್ರಗ್ರಹಣ ಹಿನ್ನೆಲೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದರಿಂದ ಭಕ್ತರ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಸಾಧ್ಯತೆಯಿದೆ.