ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಆರಕ್ಷಕರಿಗೆ ಫೆಬ್ರವರಿ ತಿಂಗಳ ಸಂಬಳ ಖಾತೆಗೆ ಬಂದಿಲ್ಲ. ಈಗ ಬರಬಹುದು, ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲಿರುವ ಪೊಲೀಸರಿಗೆ ನಿರಾಸೆ ಆಗಿದೆ.
ಇಲಾಖೆಯಿಂದ ಸಂಬಳ ಆದರೂ ಕೇವಲ 50% ಪೊಲೀಸರಿಗೆ ಸಂಬಳ ಆಗಿದೆ. ಜಿಲ್ಲೆಯಲ್ಲಿ ಅಂದಾಜು 1,800 ಸಿವಿಲ್ ಪೊಲೀಸ್, 450 ಡಿಆರ್ ಪೊಲೀಸ್ ಸಿಬ್ಬಂದಿಯಿದ್ದಾರೆ. ಇದರಲ್ಲಿ ಡಿಆರ್ ಪೊಲೀಸರಿಗೆ ಸಂಬಳ ಆದರೆ, ಸಿವಿಲ್ ಪೊಲೀಸರಲ್ಲಿ ಮಾತ್ರ 50% ಹಣ ಜಮಾವಣೆಯಾಗಿದೆ.
ಕೆಲವು ಡಿವೈಎಸ್ಪಿ, ಸಿಪಿಐ, ಪಿಎಸ್ಐ ಸೇರಿದಂತೆ ಪಿಸಿಗಳಿಗೂ ಸಂಬಳ ವ್ಯತ್ಯಯವಾಗಿದ್ದು, ಕುಟುಂಬ ನಿರ್ವಹಣೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮೂಲಗಳ ಪ್ರಕಾರ ತಾಂತ್ರಿಕ ಸಮಸ್ಯೆ ಎನ್ನಲಾಗುತ್ತಿದೆ. ಆದರೆ, ತಿಂಗಳಗಟ್ಟಲೇ ಸಂಬಳ ಆಗದೇ ತೊಂದರೆ ಅನುಭವಿಸುತ್ತಿರುವ ಪೊಲೀಸರು ಇದೀಗ ಹಿಡಿಶಾಪ ಹಾಕುವಂತಾಗಿದೆ.

